Advertisement

Hubli case ವಾಪಸ್‌; ಬೀದಿಗಿಳಿದ ಬಿಜೆಪಿ: ರಾಜ್ಯಪಾಲರಿಗೆ ದೂರು

12:12 AM Oct 15, 2024 | Team Udayavani |

ಬೆಂಗಳೂರು: ಹಳೇ ಹುಬ್ಬಳ್ಳಿಯ ಪೊಲೀಸ್‌ ಠಾಣೆ ಮೇಲಿನ ದಾಳಿ, ಗಲಭೆ ಪ್ರಕರಣವನ್ನು ವಾಪಸ್‌ ಪಡೆದಿರುವ ರಾಜ್ಯ ಸರಕಾರದ ನಿರ್ಧಾರದ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಿದೆ. ಪ್ರತಿಭಟನೆಯ ಬಳಿಕ ಬಿಜೆಪಿ ಶಾಸಕರು, ಮುಖಂಡರೊಂದಿಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರನ್ನು ಭೇಟಿ ಮಾಡಿ ಈ ಸಂಬಂಧ ದೂರು ಸಲ್ಲಿಸಲಾಗಿದೆ.

Advertisement

ಹುಬ್ಬಳ್ಳಿ ಗಲಭೆ ಆರೋಪಿಗಳ ವಿರುದ್ಧದ ಪ್ರಕರಣವನ್ನು ವಾಪಸ್‌ ಪಡೆಯಲು ನಿರ್ಧರಿಸಿರುವ ರಾಜ್ಯ ಸರಕಾರದ ನಿರ್ಧಾರ ಖಂಡಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.

ಬಳಿಕ ರಾಜ್ಯಪಾಲರಿಗೆ ದೂರು ಸಲ್ಲಿಸಿದ ಬಿಜೆಪಿ, ಪ್ರಕರಣದ ಆರೋಪಿ ಗಳ ವಿರುದ್ಧದ ಅಭಿ ಯೋಜನೆ ರದ್ದುಪಡಿಸಲು ಹೊರಟಿರುವುದು ನ್ಯಾಯಯುತವಲ್ಲ. ದೇಶದ್ರೋಹಿ ಚಟುವಟಿಕೆ, ಪೊಲೀಸರ ಮೇಲೆ ಹಲ್ಲೆ ಮಾಡಿದ ಪ್ರಕರಣಗಳನ್ನು ಕಾಂಗ್ರೆಸ್‌ ಸರಕಾರ ಮುಚ್ಚಿಹಾಕಿದೆ.

ರೈತ ಹೋರಾಟ, ಕನ್ನಡ ಹೋರಾಟಗಳಿಗೆ ಇದನ್ನು ಹೋಲಿಸಬಾರದು. ಸಿಎಂ ಸಿದ್ದರಾಮಯ್ಯನವರ ಕುರ್ಚಿ ಅಲುಗಾಡುತ್ತಿದ್ದು, ಮುಸ್ಲಿಮರು ತನ್ನ ಪರವಾಗಿದ್ದಾರೆ ಎಂದು ತೋರಿಸಲು ಹೀಗೆ ಮಾಡಿದ್ದಾರೆ ಎಂಬಿತ್ಯಾದಿ ಅಂಶಗಳುಳ್ಳ ದೂರನ್ನು ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ವಿಪಕ್ಷ ನಾಯಕರಾದ ಆರ್‌. ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಡಾ| ಸಿ.ಎನ್‌. ಅಶ್ವತ್ಥನಾರಾಯಣ, ಶಾಸಕ ಎಸ್‌.ಆರ್‌. ವಿಶ್ವನಾಥ್‌, ವಿಧಾನಪರಿಷತ್‌ ಸದಸ್ಯರಾದ ಎನ್‌. ರವಿಕುಮಾರ್‌, ಸಿ.ಟಿ. ರವಿ ಮತ್ತು ಪಕ್ಷದ ಇತರ ಮುಖಂಡರು ಉಪಸ್ಥಿತರಿದ್ದರು.

ಸಿದ್ದರಾಮಯ್ಯ ರಾಜೀನಾಮೆ ನೀಡುವುದಿಲ್ಲ ಎನ್ನುವ ಕಾಂಗ್ರೆಸ್‌ ನಾಯಕರೆಲ್ಲರೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳೇ ಆಗಿದ್ದಾರೆ. ಪೂರ್ಣಾವಧಿ ಅಧಿಕಾರ ನಡೆಸುವ ವಿಶ್ವಾಸವಿದ್ದರೆ ಸಿದ್ದರಾಮಯ್ಯನವರೇ 5 ವರ್ಷ ಮುಖ್ಯಮಂತ್ರಿ ಎಂದು ನಿಮ್ಮ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಂದ ಹೇಳಿಸಿ ನೋಡೋಣ.
– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Advertisement

ಕರ್ನಾಟಕದಲ್ಲಿ ಈಗ ಬಿಗ್‌ ಬಾಸ್‌ ಧಾರಾವಾಹಿ ನಡೆಯುತ್ತಿದೆ. ಕಾಂಗ್ರೆಸ್‌ ಸರಕಾರಕ್ಕೆ ಭಯೋತ್ಪಾದಕರೇ ಬಿಗ್‌ ಬಾಸ್‌. ಅವರ ಸೂಚನೆಯಂತೆ ಸರಕಾರ ನಡೆದುಕೊಳ್ಳುತ್ತಿದೆ. ಮತ ಬ್ಯಾಂಕ್‌ ಹಾಗೂ ಹಗರಣಗಳನ್ನು ಮರೆಮಾಚಲು ಕಾಂಗ್ರೆಸ್‌ ಸರಕಾರ ಕ್ರಿಮಿನಲ್‌ ಪ್ರಕರಣಗಳನ್ನು ಹಿಂಪಡೆದಿದೆ.
– ಆರ್‌. ಅಶೋಕ್‌,ವಿಧಾನಸಭೆ ವಿಪಕ್ಷ ನಾಯಕ

ಬಿಜೆಪಿಯವರು ಆಡಳಿತದಲ್ಲಿ ಇದ್ದಾಗಲೂ ಇಂತಹ ಸಾಕಷ್ಟು ಪ್ರಕರಣಗಳನ್ನು ಹಿಂಪಡೆದಿದ್ದಾರೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿಯೂ ಇದನ್ನು ಮಾಡಿದ್ದಾರೆ. ಹುಬ್ಬಳ್ಳಿ ಪ್ರಕರಣ ಮಾತ್ರ ವಾಪಸ್‌ ಪಡೆದಿಲ್ಲ. ರೈತರು, ವಿದ್ಯಾರ್ಥಿಗಳು, ಸಾಮಾನ್ಯ ಜನರು ಕೈಗೊಂಡಿದ್ದ ಪ್ರತಿಭಟನೆಯ ಬಹುತೇಕ ಎಲ್ಲ ಪ್ರಕರಣಗಳನ್ನೂ ಹಿಂಪಡೆಯಲಾಗಿದೆ.
– ಡಾ| ಪರಮೇಶ್ವರ, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next