ಬೆಂಗಳೂರು: ರಾಜ್ಯ ರಾಜಕೀಯದ ಸದ್ಯದ ಬಿಕ್ಕಟ್ಟು ಮತ್ತು ಅಸ್ಥಿರತೆಗೆ ಪೂರ್ಣ ವಿರಾಮ ಹಾಕಲು ರಾಜ್ಯಪಾಲರ “ಸಾಂವಿಧಾನಿಕ ನಡೆ’ ಅತ್ಯಂತ ನಿರ್ಣಾಯಕ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ, ತಕ್ಷಣ ಅಧಿವೇಶನ ಕರೆಯುವಂತೆ ಸ್ಪೀಕರ್ ಅವರಿಗೆ ಸೂಚಿಸಿ, ಆ ಮೂಲಕ ಬಹುಮತ ಸಾಬೀತುಪಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕಾಗಿರುವುದು ರಾಜ್ಯಪಾಲರ ಮುಂದಿರುವ ತಕ್ಷಣದ ಮತ್ತು ಸಂವಿಧಾನಾತ್ಮಕವಾಗಿ ಸಮಂಜಸವಾದ ಆಯ್ಕೆ ಅನ್ನುವುದು ಕಾನೂನು ತಜ್ಞರ ಸ್ಪಷ್ಟ ಅಭಿಪ್ರಾಯವಾಗಿದೆ.
ಪರಿಸ್ಥಿತಿ ಬಿಗಡಾಯಿಸಿದೆ: ಮಂಗಳವಾರಕ್ಕೆ ಹೋಲಿಕೆ ಮಾಡಿದರೆ ಬುಧವಾರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ವಿಧಾನಸೌಧದಲ್ಲೇ ಶಾಸಕರು, ಸಚಿವರ ನಡುವೆ ಗಲಾಟೆ ನಡೆದಿರುವುದು ರಾಜ್ಯಪಾಲರ ಗಮನಕ್ಕೆ ಬಂದಿದೆ. ಹೀಗಿರುವಾಗ ತಕ್ಷಣ ಬಹುಮತ ಸಾಬೀತುಪಡಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಹೇಳುತ್ತಾರೆ. ಅಲ್ಲದೆ, ಪರಿಸ್ಥಿತಿ ಈ ಮಟ್ಟಿಗೆ ಹೋಗಿರುವಾಗ ಮುಖ್ಯಮಂತ್ರಿಯವರು ಗೌರವಯುತವಾಗಿ ರಾಜಿನಾಮೆ ಕೊಡಬೇಕಿತ್ತು. ಆದರೆ, ಅವರು ನಗೆಪಾಟಿಲಿಗೆ ಈಡಾಗುತ್ತಿದ್ದಾರೆ ಅನ್ನುವುದು ಬೇಸರ ಸಂಗತಿ ಎಂದೂ ಅವರು ಹೇಳಿದ್ದಾರೆ.
ಬಹುಮತ ಸಾಬೀತುಪಡಿಸಿ: ರಾಜೀನಾಮೆ ಕೊಟ್ಟ ಬಹುತೇಕ ಎಲ್ಲ ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ ಕಾರಣಗಳನ್ನು ವಿವರಿಸಿದ್ದಾರೆ. ಹೀಗಾಗಿ, ಈ ಮೈತ್ರಿ ಸರ್ಕಾರಕ್ಕೆ ಬಹುಮತಕ್ಕೆ ಬೇಕಾದಷ್ಟು ಸಂಖ್ಯಾಬಲ ಇಲ್ಲ ಅನ್ನುವುದು ರಾಜ್ಯಪಾಲರಿಗೆ ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಅದರಂತೆ, ಯಾರ ಮನವಿಗೂ, ಯಾರ ದೂರು-ದುಮ್ಮಾನಗಳಿಗೂ ಕಾಯದೆ ಬಹುಮತ ಸಾಬೀತುಪಡಿಸುವಂತೆ ಸರ್ಕಾರಕ್ಕೆ ಹೇಳುವ ಸಾಂವಿಧಾನಿಕ ಮತ್ತು ಪರಮ ವಿವೇಚನಾಧಿಕಾರ ರಾಜ್ಯಪಾಲರಿಗೆ ಇದೆ. ಅವರು ಆ ಅಧಿಕಾರವನ್ನು ಬಳಸಲು ಇದು ಸೂಕ್ತ ಸಂದರ್ಭ ಎಂದು ಸುಪ್ರೀಂಕೋರ್ಟ್ ವಕೀಲ ಕೆ.ವಿ.ಧನಂಜಯ್ ಹೇಳುತ್ತಾರೆ.
ಈಗಾಗಲೇ ಜುಲೈ 12ರಿಂದ ಅಧಿವೇಶನ ನಿಗದಿಯಾಗಿರುವುದರಿಂದ ಮೊದಲ ದಿನವೇ ರಾಜ್ಯಪಾಲರ ಸೂಚನೆಯಂತೆ ಬಹುಮತ ಸಾಬೀತುಪಡಿಸುವಂತೆ ಆಡಳಿತ ಪಕ್ಷವನ್ನು ಸ್ಪೀಕರ್ ಕೋರಬಹುದು. ಈ ಮಧ್ಯೆ ಬಿಜೆಪಿ ಸಹ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬಹುದು ಎಂದು ಧನಂಜಯ್ ಹೇಳುತ್ತಾರೆ.
ರಾಷ್ಟ್ರಪತಿ ಆಳ್ವಿಕೆ?: ಸರ್ಕಾರ ಸದನದಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲಗೊಂಡರೆ, ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಿದೆ ಎಂಬ ಕಾರಣ ಕೊಟ್ಟು ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲರು ಶಿಫಾರಸು ಮಾಡಬಹುದು. ಈ ಮಧ್ಯೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಬಹುಮತ ಕಳೆದುಕೊಂಡರೆ ನಮ್ಮಲ್ಲಿ ಸಂಖ್ಯಾಬಲ ಇದೆ ಎಂದು ಬಿಜೆಪಿ ಅವಕಾಶ ಮಂಡಿಸಬಹುದು. ಆದರೆ, ಅವಕಾಶ ಕೊಡುವುದು, ಬಿಡುವುದು ರಾಜ್ಯಪಾಲರ ವಿವೇಚನೆಗೆ ಬಿಟ್ಟದ್ದು.
ಅವರ ತೀರ್ಮಾನವನ್ನು ಯಾರೂ ಪ್ರಶ್ನಿಸುವಂತಿಲ್ಲ. ಅಲ್ಲದೇ ಈ ಹಿಂದೆ ಅತಿದೊಡ್ಡ ಪಕ್ಷವಾಗಿದ್ದ ಬಿಜೆಪಿಗೆ ಅವಕಾಶ ಕೊಟ್ಟಾಗ ಅವರು ವಿಶ್ವಾಸಮತ ಗಳಿಸಿಲ್ಲ. ಈಗ ಮೈತ್ರಿಕೂಟ ಸಹ ಬಹುಮತ ಕಳೆದುಕೊಂಡಿದೆ. ಪುನ: ಯಾರಿಗೂ ಅವಕಾಶ ಬೇಡ ಎಂದು ನೇರವಾಗಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಗೆ ಶಿಫಾರಸು ಮಾಡುವ ಸರ್ವ ಅಧಿಕಾರ ರಾಜ್ಯಪಾಲರಿಗಿದೆ ಎಂದು ಕಾನೂನು ತಜ್ಞರು ಹೇಳುತ್ತಾರೆ.