Advertisement

ಬಿಜೆಪಿಗೆ ಸರಕಾರ ರಚಿಸಲು ಆಹ್ವಾನಿಸಿದ ರಾಜ್ಯಪಾಲರು

11:14 PM Nov 09, 2019 | Team Udayavani |

ಮುಂಬಯಿ: ಮಹಾರಾಷ್ಟ್ರದಲ್ಲಿ ಅಧಿಕಾರ ಹಂಚಿಕೆಯ ವಿಚಾರವಾಗಿ ಬಿಜೆಪಿ ಮತ್ತು ಶಿವಸೇನೆ ನಡುವಿನ ಕಚ್ಚಾಟದಿಂದಾಗಿ ಸರಕಾರ ರಚನೆಯಲ್ಲಿ ತೀವ್ರ ವಿಳಂಬವಾಗುತ್ತಿದ್ದಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೊಶ್ಯಾರಿ ಅವರು ಶನಿವಾರ ಸಂಜೆ ಏಕೈಕ ದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಸರಕಾರವನ್ನು ರಚಿಸಲು ಆಹ್ವಾನ ನೀಡಿದ್ದಾರೆ.

Advertisement

13 ನೇ ವಿಧಾನಸಭೆಯ ಅವಧಿ ಶನಿವಾರ ಮಧ್ಯರಾತ್ರಿಯಿಂದ ಕೊನೆಗೊಳ್ಳಲಿದ್ದು, ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ನೂತನ ಸರಕಾರವನ್ನು ರಚಿಸಲು ಸಿದ್ಧವಾಗಿರುವ ಬಗ್ಗೆ ಇನ್ನೂ ಯಾವುದೇ ಸಂಕೇತ ಸಿಕ್ಕಿಲ್ಲ. ಸರಕಾರ ರಚಿಸುವ ಇಚ್ಛೆಯನ್ನು ಸೂಚಿಸುವಂತೆ ಮಹಾರಾಷ್ಟ್ರ ರಾಜ್ಯಪಾಲರು ಬಿಜೆಪಿಯನ್ನು ಕೇಳಿದ್ದಾರೆ ಎಂದು ರಾಜ್‌ ಭವನದ ಮೂಲಗಳು ತಿಳಿಸಿವೆ. ಹಂಗಾಮಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ರಾಜ್ಯಪಾಲರ ಪತ್ರವನ್ನು ಸ್ವೀಕರಿಸಿದ್ದಾರೆ ಎಂದು ಅವರ ನಿಕಟ ಮೂಲಗಳು ತಿಳಿಸಿವೆ.

ಸರಕಾರ ರಚಿಸಲು ಯಾವುದೇ ಪಕ್ಷವು ಮುಂದಾಗದಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಸರಕಾರ ರಚನೆಯ ಸಾಧ್ಯತೆಯನ್ನು ಅನ್ವೇಷಿಸಲು ನಿರ್ಧರಿಸಿದ್ದಾರೆ ಎಂದು ರಾಜ್‌ ಭವನದ ಹೇಳಿಕೆ ತಿಳಿಸಿದೆ. ಅಡ್ವೊಕೇಟ್‌ ಜನರಲ್‌ ಅಶುತೋಷ್‌ ಕುಂಭಕೋಣಿ ಅವರು ಶನಿವಾರ ರಾಜ್‌ ಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಅವರೊಂದಿಗೆ ಈ ವಿಷಯದಲ್ಲಿ ಚರ್ಚಿಸಿದ್ದಾರೆ ಎಂದೂ ರಾಜ್‌ ಭವನ ಮೂಲಗಳು ಹೇಳಿವೆ.

ಅಕ್ಟೋಬರ್‌ 21ರ ವಿಧಾನಸಭಾ ಚುನಾವಣೆಯಲ್ಲಿ 105 ಸ್ಥಾನಗಳನ್ನು ಗೆದ್ದು ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಮತ್ತು 56 ಸ್ಥಾನಗಳನ್ನು ಹೊಂದಿರುವ ಅದರ ಮಿತ್ರಪಕ್ಷ ಶಿವಸೇನೆಯು ಒಟ್ಟಿಗೆ ಅಥವಾ ಪ್ರತ್ಯೇಕವಾಗಿ ಸರಕಾರ ರಚಿಸುವ ಬಗ್ಗೆ ಈವರೆಗೆ ಯಾವುದೇ ಹಕ್ಕುಪ್ರತಿಪಾದನೆ ಮಾಡಿಲ್ಲ. ‘ಮಹಾಯುತಿ’ ಆಶ್ರಯದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ ಉಭಯ ಪಕ್ಷಗಳು ಅ. 24ರಂದು ಚುನಾವಣಾ ಫಲಿತಾಂಶಗಳು ಹೊರಬಂದಾಗಿನಿಂದ ಅಧಿಕಾರ ಹಂಚಿಕೆ ವಿಚಾರದಲ್ಲಿ ಗಲಾಟೆ ಮಾಡುತ್ತಿವೆ. 288 ಸದಸ್ಯರ ವಿಧಾನಸಭೆಯ ಚುನಾವಣೆಯಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಕ್ರಮವಾಗಿ 54 ಮತ್ತು 44 ಸ್ಥಾನಗಳನ್ನು ಗೆದ್ದಿವೆ. ರಾಜ್ಯದಲ್ಲಿ ಸರಕಾರ ರಚನೆಗೆ ಮ್ಯಾಜಿಕ್‌ ನಂಬರ್‌ 145 ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next