ಬೆಂಗಳೂರು: ಸುಳ್ಳು ಮಾಹಿತಿ ನೀಡಿ ವಿಧಾನಪರಿಷತ್ ಸದಸ್ಯರು ಟಿಎ -ಡಿಎ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ರಾಜ್ಯಪಾಲ ವಜುಭಾಯಿ ವಾಲ ಪರಿಷತ್ ಸಭಾಪತಿ ಡಿ.ಎಚ್. ಶಂಕರ ಮೂರ್ತಿ ಅವರಿಗೆ ಪತ್ರ ಬರೆದಿದ್ದಾರೆ.
ಎಂಟು ವಿಧಾನಪರಿಷತ್ ಸದಸ್ಯರ ವಿರುದ್ಧ ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾರಭರೆಡ್ಡಿ ದಾಖಲಿಸಿರುವ ದೂರಿನ ಬಗ್ಗೆ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಪತ್ರದಲ್ಲಿ ಸೂಚಿಸಿದ್ದಾರೆ.
ಪ್ರಕರಣ ಕುರಿತಂತೆ ಈಗಾಗಲೇ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತನಿಖೆ ನಡೆಸಿ ವರದಿ ನೀಡಿರುವುದರಿಂದ ಅದರ ಆಧಾರದಲ್ಲಿ ಚುನಾವಣಾ ಆಯೋಗ ಏನು ಕ್ರಮ ಕೈಗೊಳ್ಳಲಿದೆ ಎಂದು ಶಂಕರಮೂರ್ತಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿಯಾಗಿರುವ ಅನಿಲ್ ಕುಮಾರ್ ಝಾ ಕೇಂದ್ರ ಚುನಾವಣಾ ಆಯೋಗಕ್ಕೆ ವರದಿ ಕಳುಹಿಸಿ, ಕೇಂದ್ರ ಚುನಾವಣಾ ಆಯುಕ್ತರಿಂದ ಮಾಹಿತಿ ಬಂದ ನಂತರ ವರದಿ ನೀಡುವುದಾಗಿ ಹೇಳಿರುವುದಾಗಿ ತಿಳಿದು ಬಂದಿದೆ.
ಕೇಂದ್ರ ಚುನಾವಣಾ ಆಯೋಗ ಮಂಜುನಾಥ ಪ್ರಸಾದ್ ಅವರ ತನಿಖೆಯ ಆಧಾರದಲ್ಲಿ ತೆಗೆದುಕೊಳ್ಳುವ ತೀರ್ಮಾನವನ್ನು ಶಂಕರ ಮೂರ್ತಿ ರಾಜ್ಯಪಾಲರಿಗೆ ವರದಿ ಕಳುಹಿಸಿ ಕೊಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.