ಮಣಿಪಾಲ: ಲಾಕ್‌ಡೌನ್ ಅವಧಿಯಲ್ಲಿ ನೀಡಲಾಗಿದ್ದ ಇಎಂಐ ವಿನಾಯಿತಿ ಹಲವು ಮಂದಿಗೆ ನಿರಾಳತೆ ಕೊಟ್ಟಿತ್ತು. ಆದರೆ ಇಎಂಐ ವಿನಾಯಿತಿಗೆ ಬಡ್ಡಿ ವಿಧಿಸಲಾಗುವ ಕ್ರಮ ಸಹಜವಾಗಿ ಜನರಲ್ಲಿ ಆತಂಕವನ್ನು ತಂದಿದೆ. ಇದೀಗ ಬಡ್ಡಿ ಮೇಲೆ ವಿಧಿಸಲಾದ ಬಡ್ಡಿಯನ್ನು ಮನ್ನಾ ಮಾಡಬೇಕು ಎಂಬುದರ ಚರ್ಚೆ ದೇಶಾದ್ಯಂತ ನಡೆಯುತ್ತಿದೆ.
ಸದ್ಯ ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದ್ದು, ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 13ಕ್ಕೆ ಮುಂದೂಡಲಾಗಿದೆ. “ಬಡ್ಡಿಯ ಮೇಲಿನ ಬಡ್ಡಿ ಮನ್ನಾ’ ಬಗ್ಗೆ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು. ಇದರಲ್ಲಿ 2 ಕೋಟಿ ರೂಪಾಯಿಯೊಳಗಿನ ವೈಯಕ್ತಿಕ ಹಾಗೂ ಎಂಎಸ್‌ಎಂಇಗಳ 2 ಕೋಟಿ ರೂಪಾಯಿಯೊಳಗಿನ ಸಾಲಗಳಿಗೆ ಬಡ್ಡಿಯ ಮೇಲೆ ಬಡ್ಡಿ ಮನ್ನಾ ಮಾಡುವುದಾಗಿ ಹೇಳಿತ್ತು.
ಅಫಿಡವಿಟ್‌ನಲ್ಲಿ ಆಯ್ಕೆಗಳನ್ನು ಅಳೆದು ತೂಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರಕಾರ ಹೇಳಿತ್ತು. ಇವುಗಳ ಪೈಕಿ ಎಂಎಸ್‌ಎಂಇ, ಶಿಕ್ಷಣ ಸಾಲ, ಗೃಹ ಸಾಲ, ಕನ್‌ಸ್ಯೂಮರ್ ಡ್ಯೂರಬಲ್ ಸಾಲ, ಕ್ರೆಡಿಟ್ ಕಾರ್ಡ್ ಬಾಕಿ, ವಾಹನ ಸಾಲ, ಪರ್ಸನಲ್ ಲೋನ್ ಸೇರಿವೆ.
ಆದರೆ ಈ ರೀತಿ ಮಾಡುವುದರಿಂದ ಸರಕಾರಕ್ಕೆ ಹೊರೆಯಾಗುತ್ತದೆ. ಬ್ಯಾಂಕ್‌ಗಳ ಮೇಲೆ ಆಗುವ ಹೊರೆಯನ್ನು ಕೇಂದ್ರ ಭರಿಸಲಿದೆ. ಉದ್ಭವಿಸಿರುವ ಆರ್ಥಿಕ ಅಡ್ಡ ಪರಿಣಾಮದ ಕಾರಣಕ್ಕೆ ಸಾಲ ಮರುಪಾವತಿಯಿಂದ ಪರಿಹಾರ ಹಾಗೂ ಬಡ್ಡಿಯ ಮೇಲಿನ ಬಡ್ಡಿ ಮನ್ನಾಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಹಲವು ಅರ್ಜಿಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ಆರ್‌ಬಿಐಗೆ ಬಡ್ಡಿ ಮನ್ನಾಗೆ ಸಂಬಂಧಿಸಿದಂತೆ ಸರಿಯಾದ ತೀರ್ಮಾನ ಕೈಗೊಳ್ಳಲು ಈ ಹಿಂದೆ ಕೋರ್ಟ್ ಎರಡು ವಾರಗಳ ಸಮಯ ನೀಡಿತ್ತು. ಈ ಸಂಬಂಧವಾಗಿ ಹಣಕಾಸು ಸಚಿವಾಲಯವು ತಜ್ಞರ ಸಮಿತಿ ರಚಿಸಿ, ಬಡ್ಡಿ ಮನ್ನಾ ಹಾಗೂ ಬಡ್ಡಿ ಮೇಲಿನ ಬಡ್ಡಿ ಮನ್ನಾ ಮತ್ತಿತರ ವಿಚಾರಗಳಲ್ಲಿ ಏನು ಪ್ರಭಾವ ಆಗಬಹುದು ಎಂದು ತಿಳಿಸುವಂತೆ ಕೋರಿತ್ತು.
ಕೇಂದ್ರ ಸರಕಾರದ ಈ ಪ್ರಸ್ತಾಪವು ಗೃಹ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲ ತೆಗೆದುಕೊಳ್ಳುವವರಿಗೆ ಹೆಚ್ಚಿನ ಸಮಾಧಾನ ತಂದಿದೆ. ಕೇಂದ್ರ ಸರಕಾರದ ಪ್ರಸ್ತಾವನೆಗೆ ಸ್ಪಂದಿಸಲು ಸಂಬಂಧಪಟ್ಟ ಎಲ್ಲರಿಗೂ ಸುಪ್ರೀಂ ಕೋರ್ಟ್ ಒಂದು ವಾರ ಕಾಲಾವಕಾಶ ನೀಡಿದೆ. ಇಲ್ಲಿ ಸಾಲಗಾರರಿಗೆ ತಕ್ಕಮಟ್ಟಿಗೆ ನಿರಾಳವಾಗಲಿದೆ. ತಜ್ಞರು ಹೇಳುವಂತೆ ಗ್ರಾಹಕರಿಗೆ ಸಾಲದ ಮೇಲಿನ ಬಡ್ಡಿಗೆ ಅನ್ವಯವಾಗುತ್ತಿದ್ದ ಬಡ್ಡಿದರ ಕಡಿತವಾಗುವ ಸಾಧ್ಯತೆ ಇದೆ.
ನಿಮ್ಮ ಸಾಲದ ಮೊತ್ತ, ಬಡ್ಡಿದರ, ಉಳಿದ ಇಎಂಐನ ಅಧಿಕಾರಾವಧಿ ಮತ್ತು ನೀವು ಎಷ್ಟು ತಿಂಗಳುಗಳ ನಿಷೇಧವನ್ನು ಪಡೆದುಕೊಂಡಿದ್ದೀರಿ ಎಂಬುದರ ಮೇಲೆ ಇದು ಅವಲಂಬಿತವಾಗಿರಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಅಫಿಡವಿಟ್‌ಗಳನ್ನೂ ಅಕ್ಟೋಬರ್ 12ರೊಳಗೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಹೀಗಾಗಿ ಮುಂದಿನ ವಿಚಾರಣೆ ಅಕ್ಟೋಬರ್ 13ರಂದು ನಡೆಯಲಿದೆ.