ಬೆಂಗಳೂರು: ಕಾಡುಗೊಂಡನಹಳ್ಳಿಯ ವಯ್ನಾಲಿಕಾವಲ್ ಸೊಸೈಟಿ ಬಳಿ ಅತ್ಯಾಚಾರ ಮತ್ತು ಹಲ್ಲೆಗೆ ಒಳಗಾದ ಐದು ವರ್ಷದ ಬಾಲಕಿ ಚಿಕಿತ್ಸೆ ಪಡೆಯುತ್ತಿರುವ ಬೌರಿಂಗ್ ಆಸ್ಪತ್ರೆಗೆ ಮಹಿಳಾ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ನೇತೃತ್ವದ ತಂಡ ಭಾನುವಾರ ಭೇಟಿ ಮಾಹಿತಿ ಸಂಗ್ರಹಿಸಿತು.
ಇದೇ ವೇಳೆ ಸಂತ್ರಸ್ತೆಯ ಪೋಷಕರಿಗೆ ಸಾಂತ್ವನ ಹೇಳಿದ ವಿ.ಎಸ್.ಉಗ್ರಪ್ಪ, ಸರ್ಕಾರದಿಂದ ಸಾಧ್ಯವಾದ ಎಲ್ಲಾ ನೆರವನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಗ್ರಪ್ಪ, “ದೌರ್ಜನ್ಯಕ್ಕೊಳಗಾದ ಬಾಲಕಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಬಾಲಕಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಮಗುವಿನ ಒಂದು ಬೆರಳು ತುಂಡಾಗಿದ್ದು, ಇನ್ನೊಂದು ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಭರವಸೆ ನೀಡಿದ್ದಾರೆ,’ ಎಂದು ತಿಳಿಸಿದರು.
ಸರ್ಕಾರದಿಂದಲೇ ವೈದ್ಯಕೀಯ ವೆಚ್ಚ: ಬಾಲಕಿಯ ಚಿಕಿತ್ಸೆಗೆ ತಗಲುವ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಬಾಲಕಿ ಪೋಷಕರು ಆರ್ಥಿಕವಾಗಿ ಹಿಂದುಳಿದಿರುವುದರಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಬರುವ ಪ್ರಾಯೋಜಕತ್ವ ಯೋಜನೆಯಡಿ ಪ್ರತಿ ತಿಂಗಳು ಒಂದು ಸಾವಿರ ರೂ. ಭತ್ಯೆ ಹಾಗೂ 25 ಸಾವಿರ ರೂ. ಚಿಕಿತ್ಸಾ ವೆಚ್ಚ ನೀಡುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯೆ ಮೊಟಮ್ಮ, ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ವಿಮಲಾ ಇತರರು ಇದ್ದರು.
ಆರೋಪಿಗೆ ನ್ಯಾಯಾಂಗ ಬಂಧನ: ಅತ್ಯಾಚಾರ ಆರೋಪಿ ಚಿತ್ರದುರ್ಗದ ಕೊಂಡ್ಲಹಳ್ಳಿ ಮೂಲದ ವೀರೇಶ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಶನಿವಾರ ಆರೋಪಿಯನ್ನು ಬಂಧಿಸಿದ್ದ ಕೆ.ಜಿ.ಹಳ್ಳಿ ಪೊಲೀಸರು ಭಾನುವಾರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.
ಬಾಲಕಿ ಮೇಲೆ ನಡೆದ ಆತ್ಯಾಚಾರ ಕೃತ್ಯ ಅಮಾನವೀಯ. ನಾಗರಿಕ ಸಮಾಜದಲ್ಲಿ ಇಂತಹ ಘಟನೆ ಮರುಕಳಿಸಬಾರದು. ಬಂಧನದಲ್ಲಿರುವ ಆರೋಪಿಯ ವಿರುದ್ಧ ಶೀಘ್ರವೇ ಆರೋಪಪಟ್ಟಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ
– ವಿ.ಎಸ್ ಉಗ್ರಪ್ಪ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ