Advertisement

ಮೌಲ್ಯಮಾಪನ ನಡೆಸಿದ “ಅತಿಥಿ’ಗಳ ಮರೆತ ಸರಕಾರ!

12:41 AM Jul 03, 2022 | Team Udayavani |

ಮಂಗಳೂರು: ಮಂಗಳೂರು ವಿಶ್ವ ವಿದ್ಯಾನಿಲಯದ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಿದ ಕಾರಣಕ್ಕೆ 100ಕ್ಕೂ ಅಧಿಕ ಅತಿಥಿ ಉಪನ್ಯಾಸಕರ ಸುಮಾರು 12 ದಿನಗಳ ವೇತನ ಕಡಿತವಾಗಲಿದೆ. ಕಾಲೇಜು ಶಿಕ್ಷಣ ಇಲಾಖೆ ಮತ್ತು ಮಂಗಳೂರು ವಿ.ವಿ. ನಡುವಿನ ವಿಚಾರ ವೈರುಧ್ಯವೇ ಇದಕ್ಕೆ ಕಾರಣ.

Advertisement

2, 4 ಮತ್ತು 6ನೇ ಸೆಮಿಸ್ಟರ್‌ ತರಗತಿ ಆರಂಭವಾಗಿ ಒಂದು ತಿಂಗಳ ಬಳಿಕ ಪದವಿಯ ಎಲ್ಲ ವಿಷಯಗಳ 3 ಮತ್ತು 5ನೇ ಸೆಮಿಸ್ಟರ್‌ ಪರೀಕ್ಷೆಗಳ ಉತ್ತರಪತ್ರಿಕೆಗಳ ಮೌಲ್ಯಮಾಪನ ಆರಂಭಿಸಲಾಗಿತ್ತು. ಇದಕ್ಕೆ ಹಾಜರಾಗುವಂತೆ ಮಂಗಳೂರು ವಿ.ವಿ. ಅತಿಥಿ ಉಪನ್ಯಾಸಕರಿಗೆ ಕರೆ ನೀಡಿತ್ತು. ಆದರೆ ಈ ಅವಧಿಯಲ್ಲಿ ತರಗತಿ ಗಳಿದ್ದು, ಅತಿಥಿ ಉಪನ್ಯಾಸಕರು ಬೋಧನೆ ನಡೆ ಸಲು ಕಾಲೇಜಿಗೆ ಹಾಜರಾಗಬೇಕು ಎಂದು ಕಾಲೇಜು ಶಿಕ್ಷಣ ಮಂಡಳಿ ಆದೇಶಿಸಿದ್ದು, ಇಲ್ಲವಾ ದರೆ ವೇತನ ಕಡಿತ ಮಾಡಲಾಗುವುದು ಎಂದು ಎಚ್ಚರಿಸಿತ್ತು. ಇದರಿಂದ ಅತಿಥಿ ಉಪನ್ಯಾ ಸಕರು ಅಡಕತ್ತರಿಯಲ್ಲಿ ಸಿಲುಕಿದ್ದರು. ಸಮಸ್ಯೆ ಜಟಿಲವಾಗುತ್ತಿದ್ದಂತೆ ಅತಿಥಿ ಉಪನ್ಯಾಸಕರು ಮೌಲ್ಯ ಮಾಪನಕ್ಕೆ ಹಿಂದೇಟು ಹಾಕಿದ್ದರು. ಈ ಮಧ್ಯೆಯೂ 100ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಮೌಲ್ಯ ಮಾಪನದಲ್ಲಿ ಭಾಗವಹಿಸಿದ್ದಾರೆ. ಆದರೆ ಅವರಿಗೆ ವೇತನದ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ.

ಈ ಮಧ್ಯೆ ಎನ್‌ಇಪಿಯ ಮೊದಲನೇ ಸೆಮಿಸ್ಟರ್‌ ಮೌಲ್ಯಮಾಪನ ಇನ್ನಷ್ಟೇ ನಡೆಯ ಬೇಕಿದೆ. ಆ ಸಮಯದಲ್ಲಿಯೂ ಅತಿಥಿ ಉಪನ್ಯಾಸಕರಿಗೆ ವೇತನ ಸಿಗದಿದ್ದರೆ ಮೌಲ್ಯ ಮಾಪನ ಕೈ ಬಿಟ್ಟು ತರಗತಿ ನಡೆಸಲು ಮಾತ್ರ ಆದ್ಯತೆ ನೀಡುವ ಬಗ್ಗೆ ಅತಿಥಿ ಉಪನ್ಯಾಸಕರು ಚಿಂತನೆ ನಡೆಸಿದ್ದಾರೆ.

ಅತಿಥಿ ಉಪನ್ಯಾಸಕರಿಗೆ ರಜೆ ಸೌಲಭ್ಯವಿಲ್ಲ. ಬೇರಾವುದೇ ಇಎಸ್‌ಐ, ಪಿಎಫ್‌ ಸೌಲಭ್ಯವಿಲ್ಲ. ಆದರೂ ಮೌಲ್ಯಮಾಪನ ಮಾಡಿದವರ ವೇತನ ಕಡಿತಕ್ಕೆ ಮುಂದಾಗಿರುವುದು ನೋವು ತಂದಿದೆ.

ಮೌಲ್ಯಮಾಪನ ಕಾರ್ಯವೂ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಭಾಗವೆಂದು ಅರಿತಿದ್ದರೂ ವೇತನ ಕಡಿತ ಮಾಡಿರುವುದು ಸರಿಯಲ್ಲ. ಜತೆಗೆ ಉಪನ್ಯಾಸಕರಿಗೆ ಮೌಲ್ಯಮಾಪನ ಕಡ್ಡಾಯ ಕಾರ್ಯ ಎಂದು ಇಲಾಖೆಯೇ ತಿಳಿಸಿರುವುದನ್ನು ಪಾಲನೆ ಮಾಡಿದ್ದೇ ತಪ್ಪಾ? ಎಂದು ಪ್ರಶ್ನಿಸುತ್ತಾರೆ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣ ಸಮಿತಿ ದ.ಕ. ಅಧ್ಯಕ್ಷ ಧೀರಜ್‌ ಕುಮಾರ್‌.

Advertisement

ತರಗತಿ ನಡೆಸುವ ಕಾರಣಕ್ಕಾಗಿಯೇ ಅತಿಥಿ ಉಪನ್ಯಾಸಕರ ನೇಮಕ ಮಾಡಲಾಗುತ್ತದೆ. ತರಗತಿ ಇಲ್ಲದಿರುವಾಗ ಮೌಲ್ಯಮಾಪನ ನಡೆಸಲು ಅವಕಾಶವಿದೆ. ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಮೌಲ್ಯಮಾಪನ ಮಾಡಿರುವ ಅತಿಥಿ ಉಪನ್ಯಾಸಕರಿಗೆ ವೇತನ ನೀಡುವ ವಿಚಾರದ ಬಗ್ಗೆ ಮಾಹಿತಿ ಪಡೆದು ನಿರ್ಧಾರ ಕೈಗೊಳ್ಳಲಾಗುವುದು.
– ಪ್ರದೀಪ್‌, ಆಯುಕ್ತರು
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ

ಮಂಗಳೂರು ವಿ.ವಿ.ಯ ಮೌಲ್ಯಮಾಪನದಲ್ಲಿ ಭಾಗವಹಿಸಿದ ಅತಿಥಿ ಉಪನ್ಯಾಸಕರಿಗೆ ವೇತನ ಸಂಬಂಧಿತ ವಿಚಾರವನ್ನು ಕಾಲೇಜು ಶಿಕ್ಷಣ ಇಲಾಖೆ ನೋಡಿಕೊಳ್ಳುತ್ತದೆ. ಆದರೆ ಮಂಗಳೂರು ವಿ.ವಿ.ಯ 6 ಘಟಕ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಮೌಲ್ಯಮಾಪನ ಕಾರ್ಯದ ಸಂಭಾವನೆ ಜತೆಗೆ ವೇತನವನ್ನೂ ನೀಡುತ್ತೇವೆ.
– ಪ್ರೊ| ಪಿ.ಎಸ್‌. ಯಡಪಡಿತ್ತಾಯ,
ಮಂಗಳೂರು ವಿ.ವಿ. ಕುಲಪತಿ

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next