Advertisement

ಜಿಮ್‌ ನಂಬಿದ್ದ ಕುಟುಂಬಗಳ ಬದುಕು ಮೂರಾಬಟ್ಟೆ

11:11 AM Jun 02, 2020 | mahesh |

ಬೆಂಗಳೂರು: ಕೋವಿಡ್ ದಿಗ್ಬಂಧನದಿಂದಾಗಿ ಕುಸಿದಿದ್ದ ಉದ್ಯಮಗಳಿಗೆಲ್ಲ ಸರ್ಕಾರ ನಿಧಾನವಾಗಿ ಚೇತರಿಕೆ ನೀಡುತ್ತಿದೆ. ಆದರೆ ಜಿಮ್‌ಗಳನ್ನು ತೆರೆಯಲು ಅನುಮತಿ ನೀಡದ ಕಾರಣ, ಕೋಟ್ಯಂತರ ರೂ.ಬಂಡವಾಳ ಹಾಕಿ ಜಿಮ್‌ ಅನ್ನೇ ನಂಬಿಕೊಂಡು ಬದುಕುತ್ತಿದ್ದ ಜಿಮ್‌ ಮಾಲಿಕರು, ತರಬೇತುದಾರರು ಈಗ ಬೀದಿಪಾಲಾಗುವ ಹಂತದಲ್ಲಿದ್ದಾರೆ. ಜಿಮ್‌ಗಳನ್ನೇ ನಂಬಿ ಬದುಕು ಸಾಗಿಸುತ್ತಿದ್ದ ಒಟ್ಟಾರೆ 1ಲಕ್ಷಕ್ಕೂ ಅಧಿಕ ಕುಟುಂಬಗಳು ಆದಾಯವಿಲ್ಲದೇ, ತೀರಾ ಆತಂಕದ ಪರಿಸ್ಥಿತಿಯಲ್ಲಿದ್ದಾರೆ.

Advertisement

ಜಿಮ್‌ ಮಾಲಿಕರಿಗೆ ಆಗಿರುವ ಸಮಸ್ಯೆಗಳೇನು?: ರಾಜ್ಯದಲ್ಲಿ ಒಟ್ಟಾರೆ 13 ಸಾವಿರಕ್ಕೂ ಅಧಿಕ ಜಿಮ್‌, ಫಿಟ್ನೆಸ್ ಕೇಂದ್ರಗಳಿವೆ. ಈ ಪೈಕಿ ಎಂಟು ಸಾವಿರಕ್ಕೂ ಅಧಿಕ ಜಿಮ್‌ ಬೆಂಗಳೂರು ನಗರದಲ್ಲಿಯೇ ಇವೆ. ಸ್ವಂತ ಕಟ್ಟಡದಲ್ಲಿ ಜಿಮ್‌ ಹೊಂದಿರುವವರು ಬೆರಳೆಣಿಕೆ ಮಂದಿ. ಉಳಿದವರೆಲ್ಲ ಕೋಟ್ಯಂತರ ರೂ. ಬಂಡವಾಳ ಹಾಕಿ ಸಾಲ ಮಾಡಿಕೊಂಡು, ಬಾಡಿಗೆ ಕಟ್ಟಡದಲ್ಲಿ ಜಿಮ್‌ ತೆರೆದವರು. ಹೆಚ್ಚಿನವರು ಮಧ್ಯಮ ವರ್ಗದ ಕುಟುಂಬದವರು, ಈಗ ಕಟ್ಟಡದ ದುಬಾರಿ ಬಾಡಿಗೆ
ಕಟ್ಟಲಾಗುತ್ತಿಲ್ಲ, ಕಟ್ಟಡದ ಮಾಲಿಕರು ಪೂರ್ಣ ಬಾಡಿಗೆ ಹಣ ನೀಡುವಂತೆ ಜಿಮ್‌ ಮಾಲಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ದಿಗ್ಬಂಧನ ದಿಂದಾಗಿ ಜಿಮ್‌ ಮುಚ್ಚಿರುವ ಇಂತಹ ವಿಷಮ ಸಂದರ್ಭದಲ್ಲಿ ಪೂರ್ಣ ಬಾಡಿಗೆ ಹಣವನ್ನು ಪಾವತಿಸಲಾಗುತ್ತಿಲ್ಲ. ಕಿರಿಕಿರಿ ತಾಳಲಾರದೆ ಕೆಲವರು ಶಾಶ್ವತವಾಗಿಯೇ ಜಿಮ್‌ ಮುಚ್ಚಿದ್ದಾರೆ.

3 ತಿಂಗಳಿನಿಂದ ತರಬೇತುದಾರರು,  ಸಿಬ್ಬಂದಿಗೆ ವೇತನವಿಲ್ಲ: ಜಿಮ್‌, ಫಿಟ್ನೆಸ್ ಕೇಂದ್ರಗಳಲ್ಲಿ ತರಬೇತುದಾರರಾಗಿ ಕೆಲಸ ನಿರ್ವಹಿಸುತ್ತಿದ್ದ ಸಾವಿರಾರು ಮಂದಿಯ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಜಿಮ್‌ ನಡೆಸುತ್ತಿದ್ದ ಮಾಲಿಕರು ಉದ್ಯಮದ ನಷ್ಟದಲ್ಲಿ ಇರುವುದರಿಂದ ಇನ್ನೂ ತಿಂಗಳ ವೇತನ ನೀಡಿಲ್ಲ. ಇದರಿಂದಾಗಿ ತರಬೇತುದಾರರ ಕುಟುಂಬ ಅಕ್ಷರಶಃ ಬೀದಿಗೆ ಬರುವಂತೆ ಆಗಿದೆ. ಇನ್ನು ಜಿಮ್‌ ಸ್ವಚ್ಛಗೊಳಿಸುವ ಕಾಯಕವನ್ನೇ ನಂಬಿ ಬದುಕಿದ್ದ ಸಾವಿರಾರು ಕಾರ್ಮಿಕರು ಕೂಡ ಈಗ ವೇತನವಿಲ್ಲದೆ ದಿನದೂಡುತ್ತಿದ್ದಾರೆ. ಸರ್ಕಾರ ಎಲ್ಲ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಆರ್ಥಿಕ ಪ್ಯಾಕೇಜ್‌ ಬಿಡುಗಡೆ ಮಾಡಿತ್ತು. ಆದರೆ ಆರೋಗ್ಯವನ್ನು ಉತ್ತಮಪಡಿಸುವ ಸೈನಿಕರ ಬದುಕನ್ನು ನಿರ್ಲಕ್ಷಿಸಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಆತಂಕದಲ್ಲಿ ಅಂತಾರಾಷ್ಟ್ರೀಯ ಸ್ಪರ್ಧಿಗಳು: ದೇಹದಾರ್ಢ್ಯ ಸ್ಪರ್ಧೆ ಇತರೆ ಕ್ರೀಡಾ ಕೂಟಗಳಿಂದ ಭಿನ್ನವಾಗಿದೆ. ಅಂತಾರಾಷ್ಟ್ರೀಯ ಕೂಟಗಳಿಗೆ ಸಿದ್ಧವಾಗುವ ದೇಹದಾರ್ಢ್ಯ ಪಟು ನಿತ್ಯ ಅಭ್ಯಾಸ ನಡೆಸಬೇಕು. ಕಳೆದ ಮೂರು ತಿಂಗಳಿನಿಂದ ಅವರು ಅಭ್ಯಾಸ ನಡೆಸಲು ಸಾಧ್ಯವಾಗಿಲ್ಲ, ವೃತ್ತಿಪರ ಸ್ಪರ್ಧಿಗಳಿಗೆ ಇಂತಹ ಕಷ್ಟ ಎದುರಾದರೆ ಭವಿಷ್ಯ ಕತ್ತಲೆಯಲ್ಲಿ ಕಳೆದಂತೆ. ಓರ್ವ ಸ್ಪರ್ಧಿಗೆ ದಿನನಿತ್ಯ ಕನಿಷ್ಠ ಎಂದರೂ 6 ಗಂಟೆ ಅಭ್ಯಾಸ ಬೇಕು, ಆದರೆ ಕಳೆದ ಕೆಲವು ತಿಂಗಳಿನಿಂದ ಜಿಮ್‌ನಲ್ಲಿ ಅಭ್ಯಾಸಕ್ಕೆ ಅವಕಾಶ  ಇಲ್ಲ, ಹೀಗಾಗಿ ಅವರೆಲ್ಲರು ಮತ್ತೆ ಅಭ್ಯಾಸ ಆರಂಭಿಸಿ ಮತ್ತೆ ದೇಹವನ್ನು ಹುರಿಗೊಳಿಸಲು ಹಲವಾರು ತಿಂಗಳುಗಳೇ ಬೇಕಾಗಬಹುದು ಎನ್ನುವುದು ತಜ್ಞರ ಅಭಿಪ್ರಾಯ.

ನಮ್ಮ ಉದ್ಯಮವನ್ನು ರಕ್ಷಿಸಿ: ಕೋಲಾರ ರವಿ ಮನವಿ
“ಕೋವಿಡ್ ಹಿನ್ನೆಲೆಯಲ್ಲಿ ಜನರ ಆರೋಗ್ಯ ದೃಷ್ಟಿಯಿಂದ ಸರ್ಕಾರ ದಿಗ್ಬಂಧನ ಹಾಕಿದ್ದನ್ನು ಸ್ವಾಗತಿಸುತ್ತೇನೆ, ಈಗ ದಿಗ್ಬಂಧನ ಸಡಿಲಿಕೆ ಆಗುತ್ತಿದೆ. ಹೋಟೆಲ್‌, ಅಂಗಡಿ, ಮಾಲ್‌ ಎಲ್ಲವನ್ನು ತೆರೆಯಲಾಗುತ್ತಿದೆ. ಆದರೆ ಜಿಮ್‌ಗೆ ಮಾತ್ರ ಸರ್ಕಾರ ಅವಕಾಶ ನೀಡುತ್ತಿಲ್ಲ. ಮೂಲಗಳ ಪ್ರಕಾರ ಇನ್ನೂ ಎರಡು ತಿಂಗಳು ಜಿಮ್‌ ತೆರೆಯುವ ಸಾಧ್ಯತೆಗಳು ಕಂಡು ಬರುತ್ತಿಲ್ಲ, ಇದರಿಂದಾಗಿ ಜಿಮ್‌ ಅನ್ನೇ ನಂಬಿಕೊಂಡಿದ್ದ ಲಕ್ಷಕ್ಕೂ ಅಧಿಕ ಕುಟುಂಬಗಳು ಸಂಕಷ್ಟದಲ್ಲಿವೆ. ಅವರೆಲ್ಲರನ್ನು ರಕ್ಷಿಸುವ ಹೊಣೆ ಸರ್ಕಾರದ ಮೇಲಿದೆ ಎಂದು ಮಾಜಿ ಅಂತಾರಾಷ್ಟ್ರೀಯ ದೇಹದಾಡ್ಯì ಪಟು ಕೋಲಾರ ರವಿ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, “ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳ ಪ್ರಕಾರವಾಗಿ ಜಿಮ್‌ ನಡೆಸುತ್ತೇವೆ. ಜಿಮ್‌ ನಡೆಸುವುದರಿಂದ ಕೋವಿಡ್ ಹರಡುವುದಿಲ್ಲ, ಬದಲಿಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ನಮ್ಮ ಉದ್ಯಮ ಕುಸಿದು, ಕುಟುಂಬಗಳು ಬೀದಿಪಾಲಾಗದಂತೆ, ಆರ್ಥಿಕ ವಾಗಿ ದಿವಾಳಿಯಾಗದಂತೆ ನೋಡಿಕೊಳ್ಳಿ’ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Advertisement

ಸರ್ಕಾರಕ್ಕೆ ಭರವಸೆ
● ಜಿಮ್‌ಗೆ ಬರುವ ಪ್ರತಿಯೊಬ್ಬರೂ ಸ್ಯಾನಿಟೈಸರ್‌ ತರುವುದು ಕಡ್ಡಾಯ.
● ಜಿಮ್‌ ಪ್ರವೇಶಕ್ಕೆ ಮೊದಲು ಕೈಗೆ ಸ್ಯಾನಿಟೈಸರ್‌ ಹಾಕುತ್ತೇವೆ.
● ಪ್ರತಿ ದಿನ ನಿಯಮಿತ ಜನರ ಹಲವು ಗುಂಪುಗಳಾಗಿ ವಿಂಗಡಿಸುತ್ತೇವೆ.
● ಸಾಮಾಜಿಕ ಅಂತರದ ಜತೆಗೆ 1 ಗಂಟೆ ಅಭ್ಯಾಸಕ್ಕೆ ಮಾತ್ರ ಅವಕಾಶ.
● ಕಿಟಕಿ ಗಾಜು ತೆರೆಯುತ್ತೇವೆ, ಎಸಿ ಬಂದ್‌ ಮಾಡುತ್ತೇವೆ.
● ಪ್ರತಿಯೊಬ್ಬರೂ ನೀರಿನ ಬಾಟಲಿ, ಕೈಗ್ಲೌಸ್‌, ಟವಲ್‌ ತರಬೇಕು.
● ಪ್ರತೀ ತಂಡ ಅಭ್ಯಾಸ ಮುಗಿಸಿದ ಬಳಿಕ ತಕ್ಷಣ ಸ್ವಚ್ಛಗೊಳಿಸಲಾಗುತ್ತದೆ.

“ಕಳೆದ ಮೂರು ತಿಂಗಳಿನಿಂದ ಜಿಮ್‌ ಬಂದ್‌ ಆಗಿದೆ, ಆರ್ಥಿಕವಾಗಿ ಭಾರೀ ನಷ್ಟಕ್ಕೆ ಸಿಲುಕಿದ್ದೇನೆ, ಹೀಗೆ ಮುಂದುವರಿದರೆ ಈ ಉದ್ಯಮವನ್ನು ನಂಬಿಕೊಂಡು
ಬದುಕುವುದು ಬಹಳ ಕಷ್ಟವಾಗಲಿದೆ. ಸರ್ಕಾರ ಜಿಮ್‌ ತೆರೆಯಲು ಅವಕಾಶ ನೀಡಿದರೆ ಸರ್ಕಾರದ ಆದೇಶವನ್ನು ಪಾಲಿಸಿಕೊಂಡು ಜಿಮ್‌ ತೆರೆಯುತ್ತೇವೆ’.
● ಸುನೀಲ್‌ ಕುಮಾರ್‌, ಲೆಜೆಂಡ್ಸ್‌ ಜಿಮ್‌ ಮಾಲಿಕ, ಶ್ರೀನಗರ, ಬೆಂಗಳೂರು

“ಕಳೆದ ಹತ್ತು ವರ್ಷದಿಂದ ಕೋಚ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ, ತಿಂಗಳ ವೇತನ ಸಿಗುತ್ತಿತ್ತು, ಇದರಿಂದಲೇ ನನ್ನ ಕುಟುಂಬ ಸಾಗುತ್ತಿತ್ತು, ಇದೀಗ ಕಳೆದ
ಮೂರು ತಿಂಗಳಿನಿಂದ ನನಗೆ ವೇತನವೇ ಸಿಕ್ಕಿಲ್ಲ, ಬೆಂಗಳೂರಿನಲ್ಲಿ ಮನೆ ಬಾಡಿಗೆ ಕಟ್ಟಿಕೊಂಡು ಸಂಸಾರ ತೂಗಿಸುವುದೇ ಹರಸಾಹಸವಾಗಿದೆ.’
● ಖಲೀಮ್‌, ಯುರೋ ಫಿಟ್ನೆಸ್‌ ಸೆಂಟರ್‌ನ ಕೋಚ್‌, ಕೋರಮಂಗಲ, ಬೆಂಗಳೂರು

● ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next