Advertisement

ಮೈತ್ರಿ ಆದಾಗಲೇ ಸರ್ಕಾರದ ಆಯುಷ್ಯ ಗೊತ್ತಿತ್ತು

10:59 PM Aug 23, 2019 | Team Udayavani |

ಬೆಂಗಳೂರು: “ಪ್ರತ್ಯಕ್ಷವೋ ಪರೋಕ್ಷವೋ ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂಬುದು ಸತ್ಯ. ಕಾಂಗ್ರೆಸ್‌ ಜತೆ ಸರ್ಕಾರ ರಚಿಸಿದಾಗಲೇ ನನಗೆ ಅದರ ಆಯುಷ್ಯವೂ ಗೊತ್ತಿತ್ತು . ಆದರೂ ಸೋನಿಯಾ ಗಾಂಧಿ-ರಾಹುಲ್‌ಗಾಂಧಿಯವರಿಗಾಗಿ ಮೌನ ವಹಿಸಿದ್ದೆ’.

Advertisement

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಖಡಕ್‌ ಮಾತುಗಳಿವು. “ಉದಯವಾಣಿ’ ಜತೆ ಮಾತನಾಡಿದ ಅವರು “ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನೇರವಾಗಿಯೇ ವಾಗ್ಧಾಳಿ ಆರಂಭಿಸಿರುವ ಅವರು, “ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದಲ್ಲಿ ಹಠ ಹಿಡಿದು ತಮ್ಮ ಬೆಂಬಲಿಗರಿಗೆ ಸಚಿವಗಿರಿ, ನಿಗಮ-ಮಂಡಳಿ ಪಡೆದರು. ಆದರೆ, 14 ತಿಂಗಳು ಒಂದು ದಿನವೂ ಕುಮಾರಸ್ವಾಮಿ ನೆಮ್ಮದಿಯಾಗಿರಲು ಬಿಡಲಿಲ್ಲ’ ಎಂದು ಹೇಳಿದ್ದಾರೆ.

* ಸರ್ಕಾರ ಪತನದ ನಂತರ ಆರೋಪ ಸರಿಯಾ?
ವಾಸ್ತವಾಂಶ ಹೇಳಲೇಬೇಕಲ್ಲವೇ? ಇದು ನನಗೊ ಬ್ಬನಿಗೆ ಗೊತ್ತಿರುವ ಸತ್ಯವಲ್ಲ, ಕಾಂಗ್ರೆಸ್‌ನ ಬಹುತೇಕ ನಾಯಕರಿಗೂ ಗೊತ್ತಿದೆ.

* ಸಮನ್ವಯ ಸಮಿತಿ ಅಧ್ಯಕ್ಷರಾಗಿ ಅಲ್ಲಿ ಕೈಗೊಂಡ ತೀರ್ಮಾನವನ್ನು ಎಚ್‌ಡಿಕೆ ಜಾರಿ ಮಾಡುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರಲ್ಲಾ?
ಯಾವ್ಯಾವ ತೀರ್ಮಾನ ಜಾರಿ ಮಾಡಿಲ್ಲ ಎಂದು ಹೇಳಬೇಕಲ್ಲವೇ? ಸಿದ್ದರಾಮಯ್ಯ ಅವರನ್ನು ಸಮ ನ್ವಯ ಸಮಿತಿ ಅಧ್ಯಕ್ಷರನ್ನಾಗಿ ಮಾಡುವ ಮುನ್ನ ಕಾಂಗ್ರೆಸ್‌ ನಮ್ಮ ಜತೆ ಚರ್ಚಿಸಲೇ ಇಲ್ಲ. ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಆ ಸಮಿತಿಗೆ ಸೇರಲು ಸಿದ್ದರಾಮಯ್ಯ ಅವಕಾಶ ಕೊಡಲಿಲ್ಲ. ಒಂದು ಹಂತದಲ್ಲಿ ಕೆಲವೊಂದು ವಿಚಾರ ಸೋನಿಯಾಗಾಂಧಿ-ರಾಹುಲ್‌ಗಾಂಧಿ ಗಮನಕ್ಕೆ ತಂದರೂ ಇತ್ಯರ್ಥವಾಗಲಿಲ್ಲ.

* ಸಂಪುಟ ವಿಸ್ತರಣೆ, ನಿಗಮ-ಮಂಡಳಿ ನೇಮಕದಲ್ಲಿ ಹಠ ಹಿಡಿದರಾ?
ಹೌದು. ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ, ಬಿಡಿಎ ಅಧ್ಯಕ್ಷ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಅವರಿಗೆ ಬೇಕಾದವರನ್ನೇ ಮಾಡಿಕೊಳ್ಳಲಿಲ್ಲವೇ. ಅವರು ಮುಖ್ಯಮಂತ್ರಿಯಾಗಿದ್ದಾಗ ಮಾಲಿನ್ಯ ನಿಯಂತ್ರಣ ಮಂಡಳಿಗೆ ಶಾಸಕರನ್ನು ನೇಮಕ ಮಾಡಿದ್ದರಾ? ಮುಂಬೈಗೆ ಹೋದವರೆಲ್ಲಾ ಯಾರ ಬೆಂಬಲಿಗರು?

Advertisement

* ಕುಮಾರಸ್ವಾಮಿ-ರೇವಣ್ಣ ಸರ್ಕಾರ ಪತನಕ್ಕೆ ಕಾರಣ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ ಎಂಬ ಆರೋಪ ಮಾಡಿದ್ದಾರಲ್ಲಾ?
ಇನ್ನೆಷ್ಟು ವಿಶ್ವಾಸಕ್ಕೆ ತೆಗೆದು ಕೊಳ್ಳಬೇಕಿತ್ತು? ರೇವಣ್ಣ ಲೋ ಕೋಪಯೋಗಿ ಸಚಿವರಾಗಿ ಅವರ ಕೆಲಸ ಅವರು ಮಾಡುತ್ತಿ ದ್ದರು. ಹಾಸನ ಜಿಲ್ಲೆ ಅಭಿವೃದ್ಧಿಗೆ ಸಂ ಬಂಧಿಸಿದಂತೆ ಎಲ್ಲ ಇಲಾಖೆಗಳಿಗೆ ಅಲೆದಾಡುತ್ತಿದ್ದರು. ಸುಮ್ಮನೆ ಆರೋಪ ಮಾಡ ಬಾರದು. ಮಾತನಾಡಿದರೆ ಕನಿಷ್ಠ ಸಜ್ಜನಿಕೆ ಇರಬೇಕು.

* ಲೋಕಸಭೆ ಚುನಾವಣೆಗೆ ಮುನ್ನವೇ ಎರಡೂ ಪಕ್ಷಗಳ ನಡುವೆ ಸಂಘರ್ಷ ಶುರುವಾಗಿತ್ತಾ?
ಲೋಕಸಭೆ ಚುನಾವಣೆ ವಿಚಾರ ಹೇಳಿದರೆ ಅದೇ ದೊಡ್ಡ ಕಥೆ. ಆದರೂ ಎಲ್ಲವನ್ನೂ ಸಹಿಸಿಕೊಂಡಿದ್ದೆವು.

* ಸೀಟು ಹಂಚಿಕೆಯಲ್ಲಿ ಅಪಸ್ವರ ಕೇಳಿಬಂದಿತ್ತಲ್ಲವೇ?
ಅದಕ್ಕೆ ಕಾರಣ ಯಾರು? ರಾಹುಲ್‌ಗಾಂಧಿಯವರು ದೆಹಲಿಯಲ್ಲಿ ವೇಣುಗೋಪಾಲ್‌ ಜತೆ ನಮ್ಮ ಮನೆಗೆ ಬಂದು ಮಾತನಾಡಿದರು. ಆಗ, ನಾನು ಹಾಸನ, ಮಂಡ್ಯ, ಶಿವಮೊಗ್ಗ, ಮೈಸೂರು, ಬೆಂಗಳೂರು ಉತ್ತರ, ಬೀದರ್‌, ವಿಜಯಪುರ ಕ್ಷೇತ್ರ ಸೇರಿ ಎಂಟು ಕ್ಷೇತ್ರ ಕೊಡಿ ಎಂದು ಕೇಳಿದೆ. ನಾನು ತುಮಕೂರು ಕ್ಷೇತ್ರ ಕೇಳಿಯೇ ಇರಲಿಲ್ಲ. ಮೈಸೂರಿಗಾಗಿ ಸಿದ್ದರಾಮಯ್ಯ ಹಠ ಹಿಡಿದು ತುಮಕೂರು ಕೊಟ್ಟು ಅಲ್ಲಿ ನನ್ನನ್ನು ಸ್ಪರ್ಧೆ ಮಾಡುವಂತೆ ಹೇಳಿದರು. ಆದರೆ, ಆಮೇಲೆ ಏನಾಯ್ತು, ಆತ್ಮವಂಚನೆ ಬೇಡ, ನಾನು ದೈವದಲ್ಲಿ ನಂಬಿಕೆ ಇಟ್ಟಿರುವವನು.

* ಹಿಂದೊಮ್ಮೆ ಸಿಎಂ ಸ್ಥಾನ ತಪ್ಪಿಸಿದರು ಎಂಬ ಕೋಪ ಸಿದ್ದರಾಮಯ್ಯ ಅವರಿಗೆ ಇನ್ನೂ ಇದೆಯಾ?
2004ರಲ್ಲಿ ನಮಗೆ 58, ಕಾಂಗ್ರೆಸ್‌ಗೆ 65 ಸ್ಥಾನ ಬಂದಾಗ ಇದೇ ಎಸ್‌.ಎಂ.ಕೃಷ್ಣ ಅವರು ತಮ್ಮ ಅಳಿಯ ಹಾಗೂ ಪತ್ರಿಕೋದ್ಯಮಿಯೊಬ್ಬರ ಜತೆ ದೆಹಲಿಯ ನನ್ನ ಮನೆಗೆ ಬಂದು ನನ್ನನ್ನೇ ಮುಂದುವರಿಸಿ ಎಂದರು. ಆಗ, ನಾನು ನೋ…ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚುನಾವಣೆ ಮಾಡಿದ್ದೇವೆ, ಅವರೇ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿದೆ. ಸೋನಿಯಾಗಾಂಧಿಯವರ ಬಳಿ ಏನು ಮಾತನಾಡಿದೆ ಎಂಬುದು ಬೇಕಾದರೆ ಹೋಗಿ ಕೇಳಲಿ.

* ಸಿದ್ದರಾಮಯ್ಯ ಅವರಿಗೆ ನಿಜಕ್ಕೂ ಸಮ್ಮಿಶ್ರ ಸರ್ಕಾರ ರಚನೆಯಾಗುವುದು ಇಷ್ಟವಿರಲಿಲ್ಲವಾ?
2018ರ ವಿಧಾನಸಭೆ ಚುನಾವಣೆ ನಂತರ ಕಾಂಗ್ರೆಸ್‌ನ ನಾಯಕರಾದ ಅಶೋಕ್‌ ಗೆಹ್ಲೋಟ್‌, ಗುಲಾಂ ನಬಿ ಆಜಾದ್‌, ಅಹಮದ್‌ ಪಟೇಲ್‌ ಬಂದು ನಿಮ್ಮ ಮಗನೇ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದ್ದರು. ನಾನು ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಹೇಳಿದೆ. ಅವರು ಹೈಕಮಾಂಡ್‌ ಹೇಳಿದರೆ ಒಪ್ಪುವುದಾಗಿ ಹೇಳಿದರು. ಖರ್ಗೆ, ಡಾ.ಜಿ.ಪರಮೇಶ್ವರ್‌, ಕೆ.ಎಚ್‌.ಮುನಿಯಪ್ಪ ಇವರಲ್ಲಿ ಯಾರಾದರೂ ಸರಿ ಅಂತಲೂ ಹೇಳಿದೆ. ಆದರೆ, ಸೋನಿಯಾಗಾಂಧಿ ಒಪ್ಪುವುದಿಲ್ಲ ಎಂದು ಆ ನಾಯಕರು ಹೇಳಿದರು. ಆಗ ಸಿದ್ದರಾಮಯ್ಯ ಮೌನವಾಗಿಯೇ ಕುಳಿತಿದ್ದರು. ಐದು ವರ್ಷ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಮೇಲೆ ಅಪ್ಪರಾಣೆ ಸಿಎಂ ಆಗಲ್ಲ ಎಂದು ಮುಗಿಬಿದ್ದಿದ್ದರಲ್ಲ, ಹೀಗಾಗಿ, ಅವರಿಗೆ ಮನಸ್ಸು ಇರಲಿಲ್ಲ.

“ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಯಡಿಯೂರಪ್ಪ ಅವರು ಒಂದು ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡಬೇಕು ಎಂದು ಬೇಡಿಕೆ ಇಟ್ಟರು. ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ರೈತರ ಸಾಲ ಮನ್ನಾಗೆ ಮುಂದಾಗುತ್ತಿದ್ದಂತೆ ಸಿದ್ದರಾಮಯ್ಯ ಅವರು ನನ್ನ ಸರ್ಕಾರದಲ್ಲಿ ಜಾರಿಗೊಳಿಸಿದ್ದ ಎಲ್ಲ ಭಾಗ್ಯಗಳನ್ನು ಮುಂದುವರಿಸಿ ಆಮೇಲೆ ರೈತರ ಕಡೆ ನೋಡಿ ಎಂದು ಹೇಳಿದ್ದರು.
-ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

* ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next