ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮಿಶ್ರ ಸರ್ಕಾರ ಒಂದೆರಡು ಜಿಲ್ಲೆಗೆ ಸೀಮಿತವಲ್ಲ. ಅಭಿವೃದ್ಧಿ ವಿಚಾರದಲ್ಲಿ ಎಲ್ಲಾ ಜಿಲ್ಲೆಗಳನ್ನು ಒಂದೇ ರೀತಿ ಕಾಣುತ್ತಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ತಿಳಿಸಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ 63 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಈ ಸರ್ಕಾರ ಒಂದೆರಡು ಜಿಲ್ಲೆಗೆ ಸೀಮಿತವಾಗಿದೆ ಎಂಬ ಅಪಾದನೆ ಮಾಡಲಾಗುತ್ತದೆ.
ಆದರೆ, ನಾವು ಎಂದೂ ಆ ರೀತಿ ತಾರತಮ್ಯ ಮಾಡಿಯೇ ಇಲ್ಲ. ಇಡೀ ಕರ್ನಾಟಕ ಒಂದೇ ಎಂದು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ನೋಡಿದರೆ ನಿಮಗೆ ಸರ್ಕಾರದ ಆದ್ಯತೆ ಹಾಗೂ ಬದ್ಧತೆ ಗೊತ್ತಾಗುತ್ತಿದೆ. ನಮ್ಮ ಸರ್ಕಾರ ಒಂದೆರಡು ಜಿಲ್ಲೆಗೆ ಸೀಮಿತ ಎಂಬ ಆರೋಪವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೊಗಲಾಡಿಸಿದೆ ಎಂದರು.
ನಾಡಿನ ಸರ್ವತೋಮುಖ ಅಭಿವೃದ್ಧಿಯೇ ಸರ್ಕಾರ ಗುರಿಯಾಗಿದೆ.ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.ಸರ್ಕಾರದ ಬಗ್ಗೆ ಕೆಲವರು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ.ಆದರೆ ಈ ಅಮಾನಗಳಿಗೆ ಎಡೆಮಾಡಿಕೊಡದಂತೆ ಐದು ವರ್ಷಗಳ ಕಾಲ ಆಡಳಿತ ನಡೆಸಲಿದೆ. ಸರ್ಕಾರ ಹಾದಿ ತಪ್ಪಿದರೆ ಶ್ರೀಸಾಮಾನ್ಯ ಸಲಹೆಗಳನ್ನು ನೀಡಲಿ ಎಂದು ತಿಳಿಸಿದರು.
ಪ್ರಶಸ್ತಿ ಆಯ್ಕೆಯಲ್ಲಿ ಅಧಿಕಾರದ ದುರುಪಯೋಗ ಮಾಡಿಕೊಂಡಿಲ್ಲ.ಎಲ್ಲವೂ ಪಾರದರ್ಶಕ ರೀತಿಯಲ್ಲೇ ನಡೆದಿದೆ. ಜಿಲ್ಲೆ, ಪ್ರದೇಶ, ಜಾತಿವಾರು ಸೇರಿದಂತೆ ಸಾಮಾಜಿಕ ನ್ಯಾಯಕ್ಕೆ ಮನ್ನಣೆ ನೀಡಲಾಗಿದೆ. ಕರುನಾಡಿನಲ್ಲಿ ಸಾಧಕರ ಸಂಖ್ಯೆ ದೊಡ್ಡದಿದ್ದು ಪ್ರಶಸ್ತಿ ಸಿಗದ ಸಾಧಕರು ಬೇಸರಪಡುವ ಆಗತ್ಯವಿಲ್ಲ.ಮುಂದಿನ ವರ್ಷ ಅವರನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಸರ್ಕಾರ ಮತ್ತು ಜನರ ನಡುವೆ ಮಾಧ್ಯಮಗಳು ಸೇತುವೆಯಾಗಿ ಕೆಲಸ ಮಾಡಬೇಕು.ಹಾದಿ ತಪ್ಪಿದಾಗ ಅದನ್ನು ತಿದ್ದು ಸರಿಪಡಿಸಬೇಕು ಅದು ಬಿಟ್ಟು ಸರ್ಕಾರದ ನಡುವೆ ಕಂದಕ ತರುವ ಕೆಲಸವನ್ನು ಮಾಡಬಾರದು ಎಂದರು. ಸಚಿವೆ ಜಯಮಾಲ ಮಾತನಾಡಿ, ಕನ್ನಡ ನಾಡಿಗೆ ಹಲವು ಸಾಧಕರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ವಚನಕಾರ ಬಸವಣ್ಣ, ಶಿಶುನಾಳ ಶರೀಫ್, ಡಾ.ರಾಜಕುಮಾರ್, ಕುವೆಂಪು ಅವರುಗಳು ಕನ್ನಡದ ಜೀವಂತಿಕೆಯನ್ನು ಹೆಚ್ಚಿಸಿದ್ದಾರೆ ಎಂದು ಬಣ್ಣಿಸಿದರು.
ಪ್ರಶಸ್ತಿ ಆಯ್ಕೆಯಲ್ಲಿ ಮುಖ್ಯಮಂತ್ರಿಗಳು ಹಸ್ತಕ್ಷೇಪ ಮಾಡಿಲ್ಲ ಎಂದು ಹೇಳಿದರು ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ. ಪ್ರಶಸ್ತಿ ಆಯ್ಕೆ ದೊಡ್ಡ ಸವಾಲಾಗಿತ್ತು. ಆದರೂ ಪ್ರಶಸ್ತಿ ಆಯ್ಕೆಯಲ್ಲಿ ಪ್ರಾದೇಶಿಕ, ಸಾಮಾಜಿಕ ನ್ಯಾಯ ನೀಡಲಾಗಿದೆ. ದೊಡ್ಡ ಸಾಲಿನ ಪಟ್ಟಿಗೆ ಬ್ರೇಕ್ ಹಾಕಿ ಕೇವಲ 63 ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದರು. ಸಚಿವರಾದ ಜಮೀರ್ ಅಹಮದ್ ಖಾನ್, ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ವಿಶುಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.