Advertisement

ಮಾರ್ಷಲ್‌ಗ‌ಳ ನೇಮಕಕ್ಕೆ ಸರ್ಕಾರ ಅಸ್ತು

01:19 AM Jun 04, 2019 | Team Udayavani |

ಬೆಂಗಳೂರು: ಕಾರ್‌, ಬೈಕ್‌ಗಳಲ್ಲಿ ಬಂದು ಕದ್ದುಮುಚ್ಚಿ ರಸ್ತೆ ಬದಿ, ಖಾಲಿ ನಿವೇಶನ, ಚರಂಡಿಗಳಲ್ಲಿ ಕಸ ಎಸೆಯುವವರಿಗೆ ಇನ್ನು ಮುಂದೆ ಶಿಕ್ಷೆ ತಪ್ಪಿದ್ದಲ್ಲ. ಮಾರ್ಷಲ್‌ಗ‌ಳ ನೇಮಕಕ್ಕೆ ಸರ್ಕಾರ ಅನುಮೋದನೆ ನೀಡಿದ್ದು, ಕಸ ವಿಂಗಡಿಸಿದ ನಾಗರಿಕರೂ ದಂಡ ತೆರಬೇಕಾಗುತ್ತದೆ ಎಚ್ಚರ…

Advertisement

ತ್ಯಾಜ್ಯ ವಿಂಗಡಣೆ ಕುರಿತು ಕೆಲ ವರ್ಷಗಳಿಂದ ಹಲವಾರು ಜಾಗೃತಿ ಕಾರ್ಯಕ್ರಮಗಳು, ಕಾಂಪೋಸ್ಟ್‌ ಸಂತೆಗಳನ್ನು ಹಮ್ಮಿಕೊಂಡರೂ ನಾಗರಿಕರು ಮಾತ್ರ ಮೂಲದಲ್ಲೇ ತ್ಯಾಜ್ಯ ವಿಂಗಡಿಸುತ್ತಿಲ್ಲ. ಪರಿಣಾಮ ಮಿಶ್ರ ತ್ಯಾಜ್ಯ ಸಂಸ್ಕರಣೆ ಪಾಲಿಕೆಗೆ ತಲೆನೋವಾಗಿ ಪರಿಗಣಮಿಸಿದೆ. ಇನ್ನು ನಾಗರಿಕರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ಬ್ಲಾಕ್‌ಸ್ಪಾಟ್‌ ನಿರ್ಮಿಸುತ್ತಿರುವ ನಗರ ಸೌಂದರ್ಯಕ್ಕೆ ಧಕ್ಕೆ ತರುತ್ತಿದೆ.

ಆ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರು ಹಾಗೂ ತ್ಯಾಜ್ಯ ವಿಂಗಡಣೆಗೆ ಮುಂದಾಗದ ನಾಗರಿಕರಿಗೆ ದಂಡ ವಿಧಿಸಲು ಮಾರ್ಷಲ್‌ಗ‌ಳನ್ನು ನೇಮಿಸುವ ವಿಚಾರ ಎರಡು ವರ್ಷಗಳಿಂದ ಕೇಳಿಬರುತ್ತಿದೆ. ಆದರೂ, ಸರ್ಕಾರದಿಂದ ಅನುಮೋದನೆ ಸಿಕ್ಕಿರಲಿಲ್ಲ. ಇದೀಗ ಮಾರ್ಷಲ್‌ಗ‌ಳನ್ನು ನೇಮಿಸಿಕೊಳ್ಳಲು ಸರ್ಕಾರ ಹಾಗೂ ಹಣಕಾಸು ಇಲಾಖೆ ಅನುಮತಿ ನೀಡಿದ್ದು, ಶೀಘ್ರದಲ್ಲಿಯೇ ಮಾರ್ಷಲ್‌ಗ‌ಳ ನೇಮಕ ಪ್ರಕ್ರಿಯೆ ಆರಂಭವಾಗಲಿದೆ.

ಮಧ್ಯರಾತ್ರಿ ಹಾಗೂ ಬೆಳಗಿನ ಜಾವ ನಗರದ ಬಹುತೇಕ ಭಾಗಗಳಲ್ಲಿ ಕಸ ತುಂಬಿದ ಕವರ್‌ಗಳನ್ನು ಕಾರು, ಬೈಕ್‌ಗಳಲ್ಲಿ ಬರುವ ಸಾರ್ವಜನಿಕರು ಕಾಲುವೆ, ಖಾಲಿ ನಿವೇಶನ ಮತ್ತು ಚರಂಡಿಗಳಲ್ಲಿ ಬಿಸಾಡಿ ಹೋಗುವುದು ಮಾಮೂಲಿಯಾಗಿದೆ. ಜತೆಗೆ ಮಾಂಸದ ಅಂಗಡಿಗಳು, ವಾಣಿಜ್ಯ ಮಳಿಗೆಗಳು ಸಹ ವ್ಯಾಪಾರ – ವಹಿವಾಟು ಮುಗಿಸಿ ರಾತ್ರಿ ವೇಳೆ ತ್ಯಾಜ್ಯ ತುಂಬಿದ ಚೀಲಗಳನ್ನು ರಸ್ತೆಬದಿ ಎಸೆದು ಹೋಗುತ್ತಿದ್ದಾರೆ. ಇದರಿಂದ ರಾತ್ರಿ ಬೆಳಗಾಗುವುದರೊಳಗೆ ಕೆಲವೆಡೆ ರಾಶಿಗಟ್ಟಲೇ ತ್ಯಾಜ್ಯ ಬಿದ್ದಿರುತ್ತದೆ.

ಇಂತಹ ಚಟುವಟಿಕೆಗಳಿಗೆ ಬ್ರೇಕ್‌ ಹಾಕಲು ಪಾಲಿಕೆಯಿಂದ ಮಾರ್ಷಲ್‌ಗ‌ಳನ್ನು ನೇಮಿಸಿಕೊಳ್ಳಲಾಗುತ್ತಿದೆ. ಅದರಂತೆ ತ್ಯಾಜ್ಯ ಎಸೆಯುವವರು ಹಾಗೂ ವಿಂಗಡಣೆ ಮಾಡದವರಿಗೆ ದಂಡ ವಿಧಿಸುವ ಅಧಿಕಾರವನ್ನು ಮಾರ್ಷಲ್‌ಗ‌ಳಿಗೆ ನೀಡಲಾಗುತ್ತದೆ. ಜತೆಗೆ ಟ್ರಾಫಿಕ್‌ ಪೊಲೀಸ್‌ ಮಾದರಿಯಲ್ಲಿ ಸ್ಥಳದಲ್ಲಿಯೇ ದಂಡ ಹಾಕುವ ಎಲೆಕ್ಟ್ರಾನಿಕ್‌ ಯಂತ್ರವನ್ನೂ ಸಹ ನೀಡಲಾಗುತ್ತದೆ.

Advertisement

ವಾರ್ಡ್‌ಗೆ ಒಬ್ಬರು ಮಾರ್ಷಲ್‌: ಬಿಬಿಎಂಪಿ ವತಿಯಿಂದ ಪ್ರತಿಯೊಂದು ವಾರ್ಡ್‌ಗೆ ಒಬ್ಬರು ಮಾರ್ಷಲ್‌ಗ‌ಳಂತೆ 198 ಮಂದಿ ಹಾಗೂ ಹೆಚ್ಚುವರಿಯಾಗಿ 35 ಮಾರ್ಷಲ್‌ಗ‌ಳನ್ನು ನೇರವಾಗಿ ಸೈನಿಕ್‌ ಕಲ್ಯಾಣ ಇಲಾಖೆಯಿಂದ ನೇಮಿಸಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪಾಲಿಕೆಯ ಪ್ರಸ್ತಾವನೆಗೆ ಸರ್ಕಾರ ಅನುಮತಿ ಕೊಟ್ಟಿದ್ದು, ಅಧಿಕೃತ ಆದೇಶವಷ್ಟೇ ಬಾಕಿಯಿದೆ. ಆದೇಶದ ಬಂದ ಕೂಡಲೇ ಮಾರ್ಷಲ್‌ಗ‌ಳನ್ನು ನೇಮಿಸಿಕೊಂಡು ತರಬೇತಿ ನೀಡಲು ಪಾಲಿಕೆ ಸಜ್ಜಾಗಿದೆ.

ಆ್ಯಪ್‌ ಆಧಾರಿತ ಕಣ್ಗಾವಲು ವ್ಯವಸ್ಥೆ: ಪಾಲಿಕೆಯಿಂದ ನೇಮಿಸಿಕೊಳ್ಳಲು ಉದ್ದೇಶಿಸಿರುವ ಮಾರ್ಷಲ್‌ಗ‌ಳಿಗಾಗಿ ವಿಶೇಷ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಅದರಂತೆ ಮಾರ್ಷಲ್‌ಗ‌ಳು ಕಸ ಎಸೆಯುವವರನ್ನು ಹಿಡಿದಾಗ ಅವರ ಭಾವಚಿತ್ರ, ವಾಹನದ ಫೋಟೋ ತೆಗೆದು ಅಪ್‌ಲೋಡ್‌ ಮಾಡಬೇಕಾಗುತ್ತದೆ. ಇದರೊಂದಿಗೆ ಸಾರ್ವಜನಿಕರು ಕಸ ಸುರಿಯುತ್ತಿರುವ ಬಗ್ಗೆ ದೂರು ನೀಡಿದಾಗ, ಕೂಡಲೇ ಆ ವಾರ್ಡ್‌ನ ಮಾರ್ಷಲ್‌ಗೆ ಸಂದೇಶ ಹೋಗುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದರು.

ದಂಡ ಪ್ರಮಾಣ ಹೆಚ್ಚಳ: ಪಾಲಿಕೆಯಿಂದ ಹೊಸದಾಗಿ ನಿಯಮಗಳನ್ನು ರೂಪಿಸಲಾಗುತ್ತಿದ್ದು, ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವ ಹಾಗೂ ವಿಂಗಡಣೆ ಮಾಡದವರಿಗೆ ದಂಡ ಪ್ರಮಾಣವನ್ನು ಹೆಚ್ಚಿನ ಮಾಡಲಾಗುತ್ತಿದೆ. ಅದರಂತೆ ಮೊದಲ ಬಾರಿಗೆ ವಿಂಗಡಣೆ ಮಾಡದಿದ್ದರೆ 100 ಹಾಗೂ ಎರಡನೇ ಬಾರಿ 500 ರೂ. ದಂಡ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು.

ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವ ಹಾಗೂ ಮೂಲದಲ್ಲಿ ಕಸ ವಿಂಗಡಿಸದ ನಾಗರಿಕರಿಗೆ ದಂಡ ವಿಧಿಸಲು, 233 ಮಾರ್ಷಲ್‌ಗ‌ಳನ್ನು ನೇಮಿಸಿಕೊಳ್ಳುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಆದೇಶ ಬಂದ ಕೂಡಲೇ ಮಾರ್ಷಲ್‌ಗ‌ಳ ನೇಮಕ ಪ್ರಕ್ರಿಯೆ ಆರಂಭಿಸಲಾಗುವುದು.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next