ಆಲಮಟ್ಟಿ: ಕೃಷ್ಣೆಯ ಜಲಾನಯನ ಪ್ರದೇಶದಲ್ಲಿ ವರುಣನ ಆರ್ಭಟ ಕಡಿಮೆಯಾಗಿದ್ದು ಆಲಮಟ್ಟಿ ಜಲಾಶಯ ಭರ್ತಿಯಾಗಿದ್ದರೂ ಸರ್ಕಾರದಿಂದ ಕೃಷ್ಣೆಗೆ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಿಸದಿರುವುದು ಕೃಷ್ಣೆಯ ಒಡಲ ಮಕ್ಕಳ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದ ಒಟ್ಟು ನೀರಾವರಿ ಪ್ರದೇಶದಲ್ಲಿ ಶೇ.60ರಷ್ಟು ಭೂಮಿಯನ್ನು ಕೃಷ್ಣಾ ಕಣಿವೆಯಿಂದ ನೀರಾವರಿಗೊಳಪಟ್ಟಿದೆ. ಕಾವೇರಿ ನದಿಗೆ ಕೃಷ್ಣ ರಾಜ ಸಾಘರ ಜಲಾಶಯ ತುಂಬುತ್ತಿದ್ದಂತೆಯೇ ಕಾವೇರಿಗೆ ಸರ್ಕಾರದಿಂದ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಲಾಗುತ್ತಿದೆ. ಕೃಷ್ಣೆಯ ಜಲನಿಧಿ ಸಂಪೂರ್ಣವಾಗಿ ತುಂಬಿ 15 ದಿನಗಳು ಗತಿಸಿದರೂ ಕೃಷ್ಣೆ ಕಡೆಗೆ ಸರ್ಕಾರದಿಂದ ಕೃಷ್ಣೆಯ ಜಲನಿಧಿಗೆ ಗಂಗಾ ಪೂಜೆ ಮತ್ತು ಬಾಗಿನ ಅರ್ಪಿಸುವ ಬಗ್ಗೆ ಯಾರಲ್ಲಿಯೂ ಸ್ಪಷ್ಟತೆ ಇಲ್ಲದಿರುವುದು ಕಾವೇರಿಗೊಂದು ನೀತಿ ಕೃಷ್ಣೆಗೊಂದು ನೀತಿಯಾಗಿದೆ. ಸರ್ಕಾರ ಎರಡೂ ನದಿಗಳಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಪ್ರಜ್ಞಾವಂತ ನಾಗರಿಕರ ಆರೋಪವಾಗಿದೆ.
ಅನುಮಾನ: ಕೃಷ್ಣೆ ಮತ್ತು ಉಪ ನದಿಗಳ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗಿದ್ದರಿಂದ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಗೆ ಲಕ್ಷಾಂತರ ಕ್ಯೂಸೆಕ್ ನೀರು ಹರಿದು ಬಂದಿದೆ. ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ಕೇಂದ್ರ ಜಲ ಆಯೋಗದ ನೀತಿಯಂತೆ ಈ ಮೊದಲು ಸಾಕಷ್ಟು ಪ್ರಮಾಣದಲ್ಲಿ ಜಲಾಶಯದಿಂದ ನದಿ ಪಾತ್ರಕ್ಕೆ ನೀರನ್ನು ಹರಿ ಬಿಡಲಾಗಿದೆ. ಜಲಾಶಯದಲ್ಲಿ ಸಂಗ್ರಹಿಸಿಕೊಂಡಿರುವ ನೀರಿನಲ್ಲಿ ಜನತೆಯ ಕುಡಿಯುವ ನೀರು ಸೇರಿದಂತೆ ವಿವಿಧ ಮೂಲಗಳಿಂದ ನೀರನ್ನು ಹೊರ ಬಿಡುವುದರಿಂದ ಸಹಜವಾಗಿ ತುಂಬಿದ ಜಲಾಶಯ ಅರ್ಧವಾಗಲಿದೆ. ಇದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಂಗಾಪೂಜೆ ಮತ್ತು ಬಾಗಿನ ಅರ್ಪಿಸುವುದಾದರೂ ಹೇಗೆ ಎನ್ನುವುದು ನಾಗರಿಕರ ಅನುಮಾನಕ್ಕೆ ಕಾರಣವಾಗಿದೆ.
ಕೃಷ್ಣೆಯ ಉಗಮಸ್ಥಾನ ಮಹಾರಾಷ್ಟ್ರದ ಮಹಾಬಳೇಶ್ವರ, ನವಜಾ, ವೇದಗಂಗಾ, ಪಂಚಗಂಗಾ ಸೇರಿದಂತೆ ಮಹಾರಾಷ್ಟ್ರದಲ್ಲಿರುವ ಕೃಷ್ಣೆಯ ಉಪ ನದಿಗಳ ನೀರು ಸೇರಿಕೊಂಡು ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಗಡಿ ಭಾಗದಲ್ಲಿರುವ ರಾಜಾಪುರ ಬ್ಯಾರೇಜ್ ಮೂಲಕ ನೀರು ರಾಜ್ಯಕ್ಕೆ ಹರಿದು ಬಂದಿದೆ. ರಾಜ್ಯದಲ್ಲಿ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದ ಹಿನ್ನೀರು ಪ್ರದೇಶವಾಗಿರುವ ಬಾಗಲಕೋಟೆ ಜಿಲ್ಲೆಯ ಚಿಕ್ಕ ಸಂಗಮದ ಹತ್ತಿರ ಘಟಪ್ರಭಾ ನದಿಯು ಕೃಷ್ಣೆಯನ್ನು ಸೇರುತ್ತದೆ. ಅವಳಿ ಜಲಾಶಯವಾಗಿರುವ ನಾರಾಯಣಪುರ ಬಸವಸಾಗರ ಜಲಾಶಯದ ಹಿನ್ನೀರು ಪ್ರದೇಶವಾಗಿರುವ ಕೂಡಲಸಂಗಮದ ಬಳಿ ಮಲಪ್ರಭಾ ನದಿಯೂ ಕೂಡ ಕೃಷ್ಣೆಯನ್ನು ಸೇರುತ್ತದೆ.
ತಪ್ಪಿದ ಪ್ರವಾಹ: ಪ್ರತಿ ಬಾರಿಯೂ ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾದಾಗಲೊಮ್ಮೆ ನಾರಾಯಣಪುರ ಬಸವಸಾಗರ ಜಲಾಶಯದ ಹಿನ್ನೀರು ಪ್ರದೇಶದಲ್ಲಿರುವ ಅಖಂಡ ವಿಜಯಪುರ ಜಿಲ್ಲೆಯ ಹುನಗುಂದ, ಮುದ್ದೇಬಿಹಾಳ, ತಾಳಿಕೋಟೆ, ನಿಡಗುಂದಿ, ಬಾಗಲಕೋಟೆ ತಾಲೂಕಿನ ನೂರಾರು ಗ್ರಾಮಗಳ ರೈತರ ಜಮೀನುಗಳು ಪ್ರವಾಹಕ್ಕೀಡಾಗುತ್ತಿದ್ದವು. ಈ ಬಾರಿ ರಾಜ್ಯ ಮತ್ತು ಮಹಾರಾಷ್ಟ್ರ ರಾಜ್ಯದ ಜಲ ಸಂಪನ್ಮೂಲ ಇಲಾಖೆ, ಕಂದಾಯ, ಆರೋಗ್ಯ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿವೆ. ಇದರ ಪರಿಣಾಮವಾಗಿ ಜಲ ಸಂಪನ್ಮೂಲ ಇಲಾಖೆಯ ವ್ಯಾಪ್ತಿಯ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಸಕಾಲಕ್ಕೆ ಸೂಕ್ತ ನಿರ್ಣಯ ಕೈಗೊಂಡಿರುವುದರಿಂದ ರೈತರ ಜಮೀನಿನಲ್ಲಿ ನೀರು ಹೋಗಿ ಹಾನಿಯಾಗಿಲ್ಲ. ಇದರಿಂದ ರೈತರು ಬಿತ್ತನೆ ಮಾಡಿರುವ ಬೆಳೆಗಳು ಸೊಂಪಾಗಿ ಬೆಳೆದು ನಿಂತಿವೆ.