Advertisement

ಹೊಸ ಸಚಿವರಿಗೆ ಇನ್ನೂ ಖಾತೆ ಹಂಚಿಕೆ ಮಾಡದ ಸರಕಾರ

09:46 AM Dec 05, 2019 | Sriram |

ಮುಂಬಯಿ: ಮಹಾರಾಷ್ಟ್ರದಲ್ಲಿ ಸರಕಾರ ರಚಿಸುವಲ್ಲಿ ಒಂದು ತಿಂಗಳ ವಿಳಂಬದ ಅನಂತರ ಶಿವಸೇನೆ, ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ಮತ್ತು ಕಾಂಗ್ರೆಸ್‌ ಅನ್ನು ಒಳಗೊಂಡ ಮೂರು ಪಕ್ಷಗಳ ಒಕ್ಕೂಟವು ಇದೀಗ ಕಳೆದ ಗುರುವಾರ ಪ್ರಮಾಣವಚನ ಸ್ವೀಕರಿಸಿದ ಆರು ಸಚಿವರಿಗೆ ಖಾತೆಗಳನ್ನು ಹಂಚುವ ವಿಷಯಗಲ್ಲಿ ಸಂದಿಗ್ಧ ಪರಿಸ್ಥಿತಿಯಲ್ಲಿದೆ.

Advertisement

ಮೂರೂ ಪಕ್ಷಗಳ ಹಿರಿಯ ನಾಯಕರು ಕಳೆದ ಐದು ದಿನಗಳಿಂದ ಸಭೆಗಳನ್ನು ನಡೆಸುತ್ತಿದ್ದಾರೆ, ಆದರೆ ಇನ್ನೂ ಒಮ್ಮತವನ್ನು ತಲುಪಿಲ್ಲ ಎಂದು ಆಂತರಿಕ ಮೂಲಗಳು ತಿಳಿಸಿವೆ. ತಾತ್ಕಾಲಿಕ ವ್ಯವಸ್ಥೆಯಾಗಿ ಡಿ. 16ರಿಂದ ಪ್ರಾರಂಭವಾಗಲಿರುವ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಸಚಿವರಿಗೆ ಕೆಲವು ಖಾತೆಗಳ ಉಸ್ತುವಾರಿ ನೀಡಬಹದೆಂಬ ಮಾತುಗಳು ಕೇಳಿಬರುತ್ತಿವೆ.

ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆಗಳ ಪುನರ್‌ರಚನೆಯು ಡಿ. 21ರ (ಅಧಿವೇಶನ ಸಂಪನ್ನಗೊಳ್ಳುವ ದಿನ) ಅನಂತರ ನಡೆಯುವ ಸಾಧ್ಯತೆಯಿದೆ. ಇದು ಮೂರು ಪಕ್ಷಗಳಿಗೆ ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಮಯವನ್ನು ನೀಡಲಿದೆ.
ಶಿವಸೇನೆಯು ಗೃಹ ಇಲಾಖೆಯಿಂದ ಹೊರಹೋಗಲು ಉತ್ಸುಕವಾಗಿಲ್ಲ. ಆದರೆ, ಎನ್‌ಸಿಪಿ ಅದಕ್ಕೆ ಒತ್ತಾಯಿಸುತ್ತಿದೆ. ಶಿವಸೇನೆ ನಾಯಕ ಮತ್ತು ಶಾಸಕಾಂಗ ಪಕ್ಷದ ಮುಖಂಡ ಏಕನಾಥ್‌ ಶಿಂಧೆ ಅವರು ಮುಂದಿನ ಗೃಹ ಸಚಿವರಾಗಲು ಆಸಕ್ತಿ ಹೊಂದಿದ್ದಾರೆ ಎಂದು ಈ ಬೆಳವಣಿಗೆಗೆ ಹತ್ತಿರದ ಮೂಲಗಳು ತಿಳಿಸಿರುವುದಾಗಿ ಸುದ್ದಿಪತ್ರಿಕೆಯೊಂದು ವರದಿ ಮಾಡಿದೆ.

ಆರಂಭದಲ್ಲಿ ಉದ್ಧವ್‌ ಠಾಕ್ರೆ ಅವರು ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಉತ್ಸುಕರಾಗಿಲ್ಲದ ಕಾರಣ ಏಕನಾಥ್‌ ಶಿಂಧೆ ಅವರು ಆ ಸ್ಥಾನಕ್ಕೆ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದರು.

ಗೃಹ ಇಲಾಖೆಯು ಸರಕಾರದಲ್ಲಿ ಪ್ರಮುಖ ಅತ್ಯಂತ ಮುಖ್ಯವಾದ ಖಾತೆಯಾಗಿದೆ ಎಂದು ನಾವು ನಂಬುತ್ತೇವೆ, ಇದಾದ ಅನಂತರ ನಗರ ಅಭಿವೃದ್ಧಿ ಮತ್ತು ಕಂದಾಯ ಇಲಾಖೆ ಬರುತ್ತದೆ. ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ತಲಾ ಒಂದು ಖಾತೆಯನ್ನು ಪಡೆಯುವ ನಿರೀಕ್ಷೆಯಿತ್ತು, ಆದರೆ ಶಿವಸೇನೆಯು ಗೃಹ ಮತ್ತು ನಗರಾಭಿವೃದ್ಧಿ ಎರಡೂ ಖಾತೆಗಳಿಗೆ ಒತ್ತಾಯಿಸುತ್ತಿದೆ ಎಂದು ಸಚಿವರೊಬ್ಬರು ಹೇಳಿದ್ದಾರೆ. ಶಿವಸೇನೆ ಮತ್ತು ಕಾಂಗ್ರೆಸ್‌ ಸಂಪುಟ ವಿಸ್ತರಣೆಯಲ್ಲಿ ಉತ್ಸುಕವಾಗಿದ್ದರೆ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ಅಜಿತ್‌ ಪವಾರ್‌ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡುವ ವಿಚಾರದಲ್ಲಿ ವಿಳಂಬ ಮಾಡಲು ಬಯಸಿದ್ದಾರೆ ಎನ್ನಲಾಗಿದೆ.

Advertisement

ಅಜಿತ್‌ ಪವಾರ್‌ ಅವರ ಬಂಡಾಯಕ್ಕೆ ಸಂಬಂಧಿಸಿದಂತೆ ಪವಾರ್‌ ಸಾಹೇಬ್‌ ಅವರು ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೂ ಅವರು ರಾಜ್ಯ ಕ್ಯಾಬಿನೆಟ್‌ನಲ್ಲಿ ತತ್‌ಕ್ಷಣ ಸ್ಥಾನ ಪಡೆಯಲು ಅಜಿತ್‌ ಅವರಿಗೆ ಅವಕಾಶ ನೀಡಿಲ್ಲ ಎಂದು ಪಕ್ಷಕ್ಕೆ ಸಂದೇಶ ಕಳುಹಿಸಲು ಬಯಸಿದ್ದಾರೆ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಅಜಿತ್‌ ಅವರ ಬಂಡಾಯಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ತೆಗೆದುಕೊಳ್ಳದಿರುವ ಬಗ್ಗೆ ಎನ್‌ಸಿಪಿ ನಾಯಕರ ಒಂದು ಬಣದಿಂದ ಒತ್ತಡವನ್ನು ಎದುರಿಸುತ್ತಿರುವುದಾಗಿ ಸೋಮವಾರ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪವಾರ್‌ ಅವರು ಒಪ್ಪಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next