Advertisement

Zilla, Taluk ಚುನಾವಣೆ ವಿಳಂಬ: ಮೂರು ವರ್ಷ ಕಳೆದರೂ ಮನಸ್ಸು ಮಾಡದ ಸರಕಾರ

12:39 AM Jul 18, 2024 | Team Udayavani |

ಬೆಂಗಳೂರು: ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಿಲ್ಲಾ ಪಂಚಾಯತ್‌-ತಾಲೂಕು ಪಂಚಾಯತ್‌ ಚುನಾವಣೆಗಳನ್ನು ನಡೆಸಲು ಸರಕಾರಕ್ಕೆ ಮನಸ್ಸಿದ್ದಂತಿಲ್ಲ. ಕರಡು ಮೀಸ ಲಾತಿ ಪ್ರಸ್ತಾವನೆ 6 ತಿಂಗಳಿಂದ “ಶೈತ್ಯಾಗಾರ’ದಲ್ಲಿದೆ.

Advertisement

ಜಿ.ಪಂ., ತಾ.ಪಂ. ಕ್ಷೇತ್ರ ಗಳ ಮೀಸಲಾತಿ ಪ್ರಕಟಿಸುವ ವಿಚಾರವಾಗಿ ನ್ಯಾಯಾಲಯಕ್ಕೆ ನೀಡಿದ ಭರವಸೆಯನ್ನು ಈಡೇರಿಸಿಲ್ಲ ಎಂದು ರಾಜ್ಯ ಸರಕಾರದ ವಿರುದ್ಧ ಸ್ವತಃ ರಾಜ್ಯ ಚು.ಆಯೋಗ ನ್ಯಾಯಾಂಗ ನಿಂದನೆ ಆರೋಪ ಹೊರಿಸಿದೆ. ಆದರೂ ಸರಕಾರ ಎಚ್ಚೆತ್ತುಕೊಂಡಂತಿಲ್ಲ. ಒಂದು ರೀತಿಯಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಗೆ ಬಾಕಿ ಇರುವು ದನ್ನೇ ನೆಪ ಮಾಡಿಕೊಂಡು ಸರಕಾರ ಕಾಲ ತಳ್ಳುತ್ತಿರುವಂತೆ ಕಾಣುತ್ತಿದೆ.

ಜಿ.ಪಂ. ಮತ್ತು ತಾ.ಪಂ. ಕ್ಷೇತ್ರಗಳ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆ ವಿಚಾರದಲ್ಲಿ ನ್ಯಾಯಾಲಯದ ಆದೇಶಗಳನ್ನು ಪಾಲಿಸದಿರುವುದಕ್ಕೆ ಹೈಕೋರ್ಟ್‌ 2022ರಲ್ಲಿ ರಾಜ್ಯ ಸರಕಾರಕ್ಕೆ 5 ಲಕ್ಷ ರೂ. ದಂಡ ಹಾಕಿತ್ತು. ಇದೀಗ ನ್ಯಾಯಾಂಗ ನಿಂದನೆ ಆರೋಪದಡಿ ಹೈಕೋರ್ಟ್‌ ನಿಂದ ನೋಟಿಸ್‌ ಕೂಡ ಪಡೆದುಕೊಂಡಿದೆ.

ಮೀಸಲಾತಿ ಅಧಿಸೂಚನೆ ಪ್ರಕಟ ಸಂಬಂಧ ರಾಜ್ಯ ಚುನಾವಣ ಆಯೋಗದ ಕಾರ್ಯದರ್ಶಿ ಈ ವರ್ಷ ಜನವರಿಯಲ್ಲಿ ರಾಜ್ಯ ಸರ ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಅದಕ್ಕೆ ಫೆಬ್ರವರಿಯಲ್ಲಿ ಉತ್ತರ ಬರೆದಿದ್ದ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಕೊಡಗು ಹೊರತುಪಡಿಸಿ ರಾಜ್ಯದ 30 ಜಿಲ್ಲೆಗಳ ಜಿ.ಪಂ., ತಾ.ಪಂ. ಕ್ಷೇತ್ರಗಳ ಮೀಸಲಾತಿ ಕರಡು ಸಿದ್ಧಪಡಿಸಿ ಅನುಮೋದನೆಗಾಗಿ ಸರಕಾರಕ್ಕೆ ಕಳುಹಿಸಿ ಕೊಟ್ಟಿದ್ದಾರೆ.

ಒಪ್ಪಿಗೆ ದೊರೆತ ಬಳಿಕ 10 ದಿನಗಳಲ್ಲಿ ಮೀಸಲಾತಿ ಕರಡು ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದ್ದರು. ಆದರೆ ಜುಲೈ ಬಂದರೂ ಮೀಸಲಾತಿ ಕರಡು ಪ್ರಕಟಿಸಿಲ್ಲ.

Advertisement

ಚುನಾವಣೆ ಮುಂದೂಡಲು ಆಯೋಗಗಳ ಅಸ್ತ್ರ ಬಳಕೆ?
ಅವಧಿ ಮುಗಿದ ಜಿ.ಪಂ., ತಾ.ಪಂ.ಗಳಿಗೆ ಚುನಾವಣೆ ನಡೆಸಲು 2020ರಿಂದಲೇ ಸಿದ್ಧತೆ ಆರಂಭಿಸಿದ್ದ ರಾಜ್ಯ ಚುನಾವಣ ಆಯೋಗ ಮತದಾರರ ಪಟ್ಟಿ ಸಿದ್ಧಪಡಿಸಿ, 2021ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಪೂರ್ಣಗೊಳಿಸಿ, ಮೀಸಲಾತಿ ಕರಡು ಪ್ರಕಟಿಸಿತ್ತು. ಈ ಮಧ್ಯೆ ಕ್ಷೇತ್ರ ಪುನರ್‌ವಿಂಗಡಣೆ ಮಾಡಿತ್ತು. ಕ್ಷೇತ್ರ ಪುನರ್‌ ವಿಂಗಡಣೆ ಹಾಗೂ ಮೀಸಲಾತಿ ಅಧಿಕಾರವನ್ನು ಚುನಾವಣ ಆಯೋಗದಿಂದ ವಾಪಸ್‌ ಪಡೆದು ಸರಕಾರ ನಿವೃತ್ತ ಐಎಎಸ್‌ ಅಧಿಕಾರಿ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಪ್ರತ್ಯೇಕವಾಗಿ ಸೀಮಾ ನಿರ್ಣಯ ಆಯೋಗ ರಚಿಸಿತ್ತು. ಈ ಆಯೋಗವು 2023ರ ಮಾ. 1ರಂದು ಕ್ಷೇತ್ರ ಪುನರ್‌ವಿಂಗಡಣೆ ಗುರುತಿಸಿತ್ತು. ಅದನ್ನು ಸರಕಾರ ಹಿಂಪಡೆದಿತ್ತು. ಈ ಮಧ್ಯೆ ಜುಲೈಯಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್‌. ಕಾಂಬ್ಳೆ ಅವರನ್ನು ಸೀಮಾ ನಿರ್ಣಯ ಆಯೋಗಕ್ಕೆ ನೇಮಿಸಿದ್ದ ಸರಕಾರ 4 ವಾರಗಳಲ್ಲಿ ಈ ಕಾರ್ಯ ಪೂರ್ಣಗೊಳಿಸುವಂತೆ ಸೂಚಿಸಿತ್ತು. ಚುನಾವಣೆಗಳನ್ನು ಮುಂದೂಡುವ ಉದ್ದೇಶದಿಂದಲೇ ಸರಕಾರ “ಆಯೋಗಗಳ’ ಅಸ್ತ್ರ ಬಳಕೆ ಮಾಡಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

-ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.