Advertisement

ಮಹಿಷಿ ವರದಿ ಜಾರಿ ಸರ್ಕಾರಕ್ಕೆ ಬೇಕಿಲ್ಲ

12:28 PM Aug 02, 2018 | Team Udayavani |

ಬೆಂಗಳೂರು: ಕನ್ನಡಕ್ಕೆ ಆದ್ಯತೆ ಹಾಗೂ ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ಸರೋಜನಿ ಮಹಿಷಿ ವರದಿ ಜಾರಿಗೆ ಯಾವ ಸರ್ಕಾರವೂ ಆಸಕ್ತಿ ತೋರುತ್ತಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ನಯನ ಸಭಾಂಗಣದಲ್ಲಿ ಬುಧವಾರ ದೆಹಲಿ ಕರ್ನಾಟಕ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ನಿರಂಜನ ಕುರಿತ “ನಿರಂಜನ ನೀಲಾಂಜನ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಕನ್ನಡಿಗರ ಒಳಿತಿಗಾಗಿ ಸರೋಜನಿ ಮಹಿಷಿ ಅವರು ಸರ್ಕಾರಕ್ಕೆ 52ಅಂಶಗಳನ್ನೊಳಗೊಂಡ ವರದಿಯನ್ನು ನೀಡಿದ್ದರು. ಆದರೆ ಇಲ್ಲಿಯ ವರೆಗೂ ಯಾವುದೇ ಸರ್ಕಾರಗಳು ಅದರ ಜಾರಿಗೆ ಮನಸು ಮಾಡುತ್ತಿಲ್ಲ. ತಜ್ಞರ ಪರಿಷ್ಕೃತ ವರದಿ ಜಾರಿಗೂ ಕಾಳಜಿ ತೋರಿಸುತ್ತಿಲ್ಲ ಎಂದು ದೂರಿದರು.

ಸಾಹಿತಿ ನಿರಂಜನರ ಗುಣಗಾನ ಮಾಡಿದ ಅವರು, ಯಾವಾಗಲೂ ಮೌನಿ ಆಗಿರುತ್ತಿದ್ದ ನಿರಂಜನರು ತಮ್ಮ ನಾಟಕ, ಕಾದಂಬರಿ ಹಾಗೂ ಕೃತಿಗಳಲ್ಲಿ ವರ್ತಮಾನವನ್ನು ತೆರೆದಿಡುತ್ತಿದ್ದರು.

ನಂಬಿದ ಸಿದ್ಧಾಂತಕ್ಕೆ ಬದ್ಧರಾಗಿದ್ದ ಅವರು, ಚರಿತ್ರೆಗೆ ಅಪಚಾರ ಮಾಡಿದಂತೆ ಕೃತಿಯನ್ನು ರಚಿಸಿದ್ದಾರೆ. ಮನುಷ್ಯ ಸಂಬಂಧದ ನೆಲೆಗಳನ್ನು ತಮ್ಮ ಕಾದಂಬರಿ ಮತ್ತು ಕತೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಹೀಗಾಗಿ ಅವರು ಇಂದಿಗೂ ಪ್ರಸ್ತುತರಾಗಿ ಕಾಣುತ್ತಾರೆ ಎಂದರು.

Advertisement

ಹಿರಿಯ ಸಂಶೋಧಕ ಡಾ.ಹಂಪ ನಾಗರಾಜಯ್ಯ ಮಾತನಾಡಿ, ನಿರಂಜನರ ಕೃತಿಗಳು ಅನ್ಯ ಭಾಷೆಗೆ ಭಾಷಾಂತರಗೊಂಡಿದ್ದು, ಮಲೆಯಾಳ ಸಾಹಿತ್ಯಪ್ರಿಯರಿಗೂ ನಿರಂಜನರು ಪರಿಚಿತರು ಎಂದರು.

ಅಬ್ಬಕ್ಕ ದೇವಿ ಹೆಸರಿನಲ್ಲಿ ಪ್ರಶಸ್ತಿ ನೀಡಿ: ದೆಹಲಿ ಕರ್ನಾಟಕ ಸಂಘ, ರಂಗ ಪ್ರಶಸ್ತಿಯ ಮೊತ್ತವನ್ನು 1ಲಕ್ಷ ರೂ. ಏರಿಕೆ ಮಾಡಲು ಚಿಂತನೆ ನಡೆಸಿದೆ. ಅಲ್ಲದೆ, ರಾಣಿ ಅಬ್ಬಕ್ಕ ದೇವಿ ಹೆಸರಿನಲ್ಲಿ ಯೋಧರಿಗೆ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಸಂಘ ತೀರ್ಮಾನಿಸಿದೆ ಎಂದು ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಹೇಳಿದರು.

ವಿಮರ್ಶಕ ಎಸ್‌.ಆರ್‌.ವಿಜಯಶಂಕರ ಅವರು ಕೃತಿ ಕುರಿತು ಮಾತನಾಡಿದರು. ದೆಹಲಿ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಂ.ನಾಗರಾಜ, ರಂಗಕರ್ಮಿ ಶ್ರೀನಿವಾಸ್‌ ಜಿ ಕಪ್ಪಣ್ಣ, ಚಿತ್ರ ನಿರ್ದೇಶಕ ನಾಗಾಭರಣ, ಪತ್ರಕರ್ತೆ ಟಿ.ಸಿ.ಪೂರ್ಣಿಮಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next