ಬೆಂಗಳೂರು: ಖಾಸಗಿ ಶಾಲೆಗಳು ಮಕ್ಕಳಿಗೆ ವಿಧಿಸುವ ಶುಲ್ಕವನ್ನು ನಿಗದಿ ಪಡಿಸುವ ಅಧಿಕಾರವನ್ನು ಅಸಂವಿಧಾನಿಕ ಎಂದು ಘೋಷಿಸಿರುವ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ.
ಹೈಕೋರ್ಟ್ ತೀರ್ಪಿನ ಪರಿಣಾಮವಾಗಿ ಖಾಸಗಿ ಶಾಲೆಗಳು ತಮ್ಮ ಶುಲ್ಕವನ್ನು ಅತಾರ್ಕಿಕವಾಗಿ ಹೆಚ್ಚಿಸಿದ್ದು ಕೆಲ ಶಾಲೆಗಳು ಶೇ.30 ರಿಂದ ಶೇ. 40ರಷ್ಟು ಶುಲ್ಕ ಹೆಚ್ಚಿಸಿದೆ. ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಮೊದಲು ಶಾಲೆಗಳು ಸಾಮಾನ್ಯವಾಗಿ ತಮ್ಮ ಶುಲ್ಕದಲ್ಲಿ ವರ್ಷದಿಂದ ವರ್ಷಕ್ಕೆ ಶೇ.10ರಷ್ಟು ಹೆಚ್ಚಳ ಮಾಡುತ್ತಿದ್ದವು. ಪೋಷಕರು ಕೂಡ ಈ ಪ್ರಮಾಣದ ಏರಿಕೆಗೆ ಮಾನಸಿಕವಾಗಿ ಸಜ್ಜಾಗುತ್ತಿದ್ದರು. ಆದರೆ ಈಗ ವಾಡಿಕೆಯ ಏರಿಕೆಗಿಂತ ಮೂರ್ನಾಲ್ಕು ಪಟ್ಟು ಹೆಚ್ಚಿನ ಏರಿಕೆ ಮಾಡಿರುವುದು ಪೋಷಕರನ್ನು ಕಂಗಾಲಾಗಿಸಿದೆ.
ಶಾಲೆಗಳಲ್ಲಿ 2022-23ರ ಸಾಲಿನ ಶೈಕ್ಷಣಿಕ ವರ್ಷ ಬಹುತೇಕ ಮುಕ್ತಾಯಗೊಂಡಿದ್ದು ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಈ ಹಂತದಲ್ಲಿ ತಮ್ಮ ಶುಲ್ಕವನ್ನು ತಾವೇ ವಿಧಿಸುವ ಅಧಿಕಾರ ಪಡೆದಿರುವ ಖಾಸಗಿ ಶಾಲೆಗಳು ವಿವೇಚನಾ ರಹಿತವಾಗಿ ಶುಲ್ಕ ಹೆಚ್ಚಳ ಮಾಡಿವೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.
1983ರ ಕರ್ನಾಟಕ ಶಿಕ್ಷಣ ಕಾಯ್ದೆಗೆ 2018ರಲ್ಲಿ ತಿದ್ದುಪಡಿ ತಂದು ಖಾಸಗಿ ಶಾಲೆಗಳ ಶುಲ್ಕದ ಮೇಲೆ ನಿಯಂತ್ರಣ ಸಾಧಿಸಲು ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರವನ್ನು ಸರ್ಕಾರ ರಚಿಸಿತ್ತು. ಆದರೆ ಇದನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು. ಪ್ರಕರಣದ ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್ ರಾಜ್ಯದ ತಿದ್ದುಪಡಿಯನ್ನು ಅಸಿಂಧುಗೊಳಿಸಿತ್ತು. ಇದರಿಂದ ನಿಯಂತ್ರಣ ಪ್ರಾಧಿಕಾರ ಅಸ್ತಿತ್ವ ಕಳೆದುಕೊಂಡಿದೆ. ಹೀಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶುಲ್ಕ ವಿಧಿಸಲು ಯಾವುದೇ ಲಂಗು ಲಗಾಮಿಲ್ಲದಂತಾಗಿದೆ.
ಕರ್ನಾಟಕ ರಾಜ್ಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಯ ಒಕ್ಕೂಟ(ಕ್ಯಾಮ್ಸ್) 2023-24ನೇ ಸಾಲಿನ ಪ್ರವೇಶಕ್ಕೆ ಗರಿಷ್ಠ ಶೇ.15ಕ್ಕಿಂತ ಜಾಸ್ತಿ ಶುಲ್ಕವನ್ನು ಹೆಚ್ಚಳ ಮಾಡದಂತೆ ಸೂಚನೆ ನೀಡಿತ್ತು. ಆದರೆ ಕ್ಯಾಮ್ಸ್‌ನ ಸೂಚನೆಯನ್ನು ಕೆಲ ಖಾಸಗಿ ಶಾಲೆಗಳು ಗಾಳಿಗೆ ತೂರಿವೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ. ಆರ್. ವಿಶಾಲ್ ಈ ಬಗ್ಗೆ ಪ್ರತಿಕ್ರಿಯಿಸಿ, ನಾವು ರಾಜ್ಯ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದೇವೆ. ಪ್ರಕರಣದ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ. ಈ ಹಂತದಲ್ಲಿ ನಮಗೆ ಹೆಚ್ಚು ಶುಲ್ಕ ಸಂಗ್ರಹಿಸುತ್ತಿರುವ ಶಾಲೆಗಳ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರವಿಲ್ಲ ಎಂದು ಹೇಳಿದರು.
ಪೋಷಕರ ಬೇಸರ
ಸರ್ಕಾರ ತುರ್ತು ಮೇಲ್ಮನವಿ ಅರ್ಜಿ ಸಲ್ಲಿಸಿ ಆದ್ಯತೆಯ ಮೇರೆಗೆ ಪ್ರಕರಣದ ವಿಚಾರಣೆಯನ್ನು ತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಬೇಕಿತ್ತು. ಹೈಕೋರ್ಟ್ ತೀರ್ಪಿಗೆ ಮಧ್ಯಂತರ ತಡೆ ನೀಡುವಂತೆ ಕೋರಬೇಕಿತ್ತು. ಆದರೆ ಸರ್ಕಾರ ಈ ಪ್ರಕರಣದಲ್ಲಿ ಅಂತಹ ಉತ್ಸಾಹ ತೋರುತ್ತಿಲ್ಲ ಎಂದು ಪೋಷಕರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.