Advertisement

ಇಲ್ಲದ ಹುದ್ದೆಗೆ ಮೂರು ದಿನದ ಅಧಿಕಾರಿ ನೇಮಿಸಿದ ಸರ್ಕಾರ !

09:00 PM Jul 26, 2023 | Team Udayavani |

ಬಾಗಲಕೋಟೆ : ಬಹು ಬೇಡಿಕೆಯ ಹಾಗೂ ಕಳೆದ ಆರೇಳು ವರ್ಷದಿಂದ ನಿರಂತರ ಹೋರಾಟ ಎದುರಿಸುತ್ತಿರುವ ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿಷಯದಲ್ಲಿ ಸರ್ಕಾರ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.

Advertisement

ಕಳೆದ 2014-15ನೇ ಸಾಲಿನ ಬಜೆಟ್‌ನಲ್ಲಿ ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಿಸಿದ್ದು, ಈ ವರೆಗೂ ಮಂಜೂರು ಮಾಡಿಲ್ಲ. ಯಾವುದೇ ಹುದ್ದೆಗಳೂ ಸೃಷ್ಠಿಸಿಲ್ಲ. ಇದಕ್ಕಾಗಿ ಬೂಟ್ ಪಾಲಿಶ್ ಮಾಡುವುದರಿಂದ ಹಿಡಿದು ಹಲವು ರೀತಿಯ ಹೋರಾಟಗಳು ಜಿಲ್ಲೆಯಲ್ಲಿ ನಡೆದಿವೆ. ಸ್ವತಃ ಬಾಗಲಕೋಟೆ ಶಾಸಕ ಎಚ್.ವೈ. ಮೇಟಿ ನೇತೃತ್ವದಲ್ಲಿ ಇಲ್ಲಿನ ಹಲವು ಪ್ರಮುಖರು, ಪಕ್ಷಾತೀತವಾದ ನಿಯೋಗ ಈಚೆಗೆ ಸಿಎಂಗೆ ಮನವಿ ಕೊಟ್ಟರೂ, ಬಜೆಟ್‌ನಲ್ಲಿ ಹಣ ಇಟ್ಟಿರಲಿಲ್ಲ. ಈ ಕುರಿತು ಜಿಲ್ಲೆಯಲ್ಲಿ ಆಕ್ರೋಶ ಕೂಡ ವ್ಯಕ್ತವಾಗಿದೆ. ಆದರೆ, ಇದೀಗ ಇಲ್ಲದ ಹುದ್ದೆಗೆ ಅಧಿಕಾರಿ ನೇಮಕ ಮಾಡುವ ಮೂಲಕ, ಸರ್ಕಾರ ಪೇಚಿಗೆ ಸಿಲುಕಿದೆ.

ಮುಂಬಡ್ತಿ ಜತೆಗೆ ವರ್ಗ

ಇಲ್ಲಿನ ಜಿ.ಪಂ. ಲೆಕ್ಕಾಧಿಕಾರಿ ಆಗಿರುವ ರವೀಂದ್ರ (ಆರ್.ಎಚ್. ಕೋಳೂರ) ಕೋಳೂರ ಅವರಿಗೆ ರಾಜ್ಯ ಸರ್ಕಾರ, ಬಡ್ತಿ ನೀಡುವ ಜತೆಗೆ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬಾಗಲಕೋಟೆ (ಖಾಲಿ ಹುದ್ದೆಗೆ) ವರ್ಗ ಮಾಡಿದೆ. ವಾಸ್ತವದಲ್ಲಿ ಬಾಗಲಕೋಟೆಯಲ್ಲಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸ್ಥಾಪನೆಯಾಗಿಲ್ಲ. ಕನಿಷ್ಠ ಪಕ್ಷ ಮಂಜೂರೂ ಆಗಿಲ್ಲ. ಆ ಹುದ್ದೆಯೇ ಜಿಲ್ಲೆಯಲ್ಲಿ ಇಲ್ಲ. ಆದರೂ, ಸರ್ಕಾರ ಈ ಹುದ್ದೆಗೆ ಅಧಿಕಾರಿಯನ್ನು ನೇಮಕ ಮಾಡಿರುವುದು ಸ್ವತಃ ವರ್ಗಗೊಂಡ ಅಧಿಕಾರಿಯೂ ಹುಬ್ಬೇರಿಸುವಂತೆ ಮಾಡಿದೆ.

ಮೂರೇ ದಿನದಲ್ಲಿ ನಿವೃತ್ತಿ
ಇನ್ನೊಂದು ವಿಶೇಷವೆಂದರೆ ಈ ಹುದ್ದೆಗೆ ವರ್ಗಗೊಂಡ ಅಧಿಕಾರಿ ಆರ್.ಎಚ್. ಕೋಳೂರ, ಇದೇ ಜು. 30ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. ಕೊನೆಪಕ್ಷ 15 ದಿನಗಳ ಮುಂಚೆಯಾದರೂ ಸೇವಾ ಬಡ್ತಿ ನೀಡಿ, ಖಾಲಿ ಇರುವ ಸರಿಸಮಾನ ಹುದ್ದೆಗೆ ವರ್ಗ ಮಾಡಿದರೆ, ಆ ಅಧಿಕಾರಿ ಖುಷಿಯಿಂದ ಸೇವಾ ನಿವೃತ್ತಿಯಾಗಬಹುದಿತ್ತು. ಆದರೆ, ಮೂರೇ ದಿನದಲ್ಲಿ ನಿವೃತ್ತಿ ಹೊಂದಲಿರುವ ಅವರಿಗೆ, ಸೃಷ್ಠಿಯಾಗದೇ ಇರುವ ಹುದ್ದೆಗೆ ವರ್ಗ ಮಾಡಲಾಗಿದೆ.

Advertisement

ಒಂದೆಡೆ ಹರ್ಷ; ಇನ್ನೊಂದೆಡೆ ಬೇಸರ
ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿಷಯದಲ್ಲಿ ಬಹಳಷ್ಟು ಹೋರಾಟ ನಡೆದಿವೆ. 8 ವರ್ಷಗಳ ಹಿಂದೆಯೇ ಘೋಷಣೆಯಾದರೂ ಈ ವರೆಗೆ ಕಾಲೇಜು ಸ್ಥಾಪನೆಯಾಗಿಲ್ಲ. ಬಾಗಲಕೋಟೆಗೆ ಘೋಷಣೆಯಾದ ಬಳಿಕ ಬೇರೆ ಬೇರೆ ಜಿಲ್ಲೆಗೆ ಘೋಷಣೆಯಾದ ವೈದ್ಯಕೀಯ ಕಾಲೇಜುಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. ಇಲ್ಲಿ ಮಾತ್ರ ವಿಳಂಬ ಮಾಡಲಾಗುತ್ತಿದೆ ಎಂದು ವಿವಿಧ ಹಂತದ ಹೋರಾಟ, ಒತ್ತಾಯ, ರಾಜಕೀಯ ಪ್ರತಿಷ್ಠೆ, ಮೊನ್ನೆ ನಡೆದ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಅಸ್ತçವನ್ನಾಗಿ ಇದನ್ನು ಬಳಸಿಕೊಳ್ಳಲಾಗಿತ್ತು. ಇದೀಗ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಅಧಿಕಾರಿ ನೇಮಕ ಮಾಡಿದ್ದರಿಂದ, ಹಲವರು ಕಾಲೇಜು ಸ್ಥಾಪನೆ ವಿಷಯದಲ್ಲಿ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ ಎಂದು ಹಲವರು ಹರ್ಷ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಖುಷಿ ಹಂಚಿಕೊಂಡಿದ್ದರು. ಆದರೆ, ಆ ಹುದ್ದೆಯೇ ಇಲ್ಲ ಎಂಬ ಮಾಹಿತಿ ಹೊರ ಬೀಳುತ್ತಿದ್ದಂತೆ, ಆಕ್ರೋಶ ವ್ಯಕ್ತವಾಗಿದೆ.

ಆ ಹುದ್ದೆ ಇಲ್ಲ
ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮುಖ್ಯ ಲೆಕ್ಕಾಧಿಕಾರಿ ಮತ್ತು ಆರ್ಥಿಕ ಸಲಹೆಗಾರರು ಎಂಬ ಹುದ್ದೆ ಇಲ್ಲ. ಈ ಹುದ್ದೆಗೆ ವರ್ಗಗೊಂಡ ಕೋಳೂರ ಎಂಬ ಹಿರಿಯ ಅಧಿಕಾರಿ, ಸೇವೆಗೆ ಹಾಜರಾಗಲು ಆಗಮಿಸಿದ್ದರು. ಹುದ್ದೆಯೇ ಇಲ್ಲದ ಕಾರಣ, ನಾನು ಲಿಖಿತವಾಗಿ ಬರೆದುಕೊಟ್ಟಿರುವೆ.
-ಡಾ|ಪ್ರಕಾಶ ಬಿರಾದಾರ, ಜಿಲ್ಲಾ ಶಸ್ತ್ರ ಚಿಕಿತ್ಸಕ

ಸರ್ಕಾರ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮುಖ್ಯ ಲೆಕ್ಕಾಧಿಕಾರಿ ಮತ್ತು ಆರ್ಥಿಕ ಸಲಹೆಗಾರರು ಖಾಲಿ ಹುದ್ದೆಗೆ ವರ್ಗಾಯಿಸಿತ್ತು. ಬಡ್ತಿ ಜತೆಗೆ ಹೊಸ ಜವಾಬ್ದಾರಿ ಕೊಟ್ಟಿದ್ದರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಸೇವೆಗೆ ಹಾಜರಾಗಲು ಹೋಗಿದ್ದೆ. ಆ ಹುದ್ದೆಯೇ ಇಲ್ಲ ಎಂದು ತಿಳಿಸಿದ್ದಾರೆ. ನಾನು ಪುನಃ ಇಲಾಖೆಗೆ ವರದಿ ಮಾಡಿಕೊಳ್ಳುವೆ.
ಆರ್.ಎಚ್. ಕೋಳೂರ, ಜಿ.ಪಂ. ಲೆಕ್ಕಾಧಿಕಾರಿ (ಇಲ್ಲದ ಹುದ್ದೆಗೆ ನೇಮಕಗೊಂಡ ಹಿರಿಯ ಅಧಿಕಾರಿ)

*ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next