ಮುಂಬಯಿ: ನಾನೋರ್ವ ತುಳುನಾಡ ಅಪ್ಪಟ ಬಿಲ್ಲವಳು ಎನ್ನಲು ಅಭಿಮಾನವಾಗುತ್ತಿದೆ. ರಾಜಕೀಯ ವೇದಿಕೆ ನನಗೆ ಪ್ರಾಮಾಣಿಕ ಸಮಾಜಸೇವೆ ಮಾಡುವ ವೇದಿಕೆ ಒದಗಿಸಿದ್ದು, ಆ ಮೂಲಕ ಇಂತಹ ಸ್ಥಾನಮಾನದ ಪ್ರತಿಷ್ಠೆ ಲಭಿಸಿದೆ. ಆದ್ದರಿಂದ ನನ್ನ ಪಾಲಿಗೆ ರಾಜಕಾರಣ ಅಭಿನಯವಲ್ಲ, ಬದಲಾಗಿ ಅಭಿಮಾನವಾಗಿದೆ. ನನಗೆ ಜನತೆ ಸಮಾಜ ಸೇವೆ ಮಾಡಲು ಅವಕಾಶ ಒದಗಿಸಿದ್ದು, ಅದಕ್ಕೆ ಬದ್ಧಳಾಗಿ ನಾನು ಜನಸೇವೆ ಮಾಡುತ್ತೇನೆ. ನಾನೆಂದೂ ಸಮಾಜ ಸೇವಕಿ ಎಂಬ ಮುಖವಾಡ ಹಾಕಿಕೊಳ್ಳುವುದಿಲ್ಲ. ಬಹುಶಃ ಸ್ವಸಮುದಾಯದ ಸಂಸ್ಥೆಗಳು ನಾವು ಕಣಕ್ಕಿಳಿದು ಮತಯಾಚಿಸುತ್ತಿರುವಾಗ ಬೆಂಬಲಿಸುತ್ತಿದ್ದರೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದಂತಾಗುತ್ತಿತ್ತು. ಗೆದ್ದು ಬಂದ ಅನಂತರದ ಸತ್ಕಾರ, ಶ್ಲಾಘನೆಗಿಂತ ಸ್ಪರ್ಧಾವಧಿಯ ಸಹಯೋಗ, ಉತ್ತೇಜನ ಹೆಚ್ಚು ಸಮರ್ಥನೀಯ ಆಗಬಲ್ಲದು. ಮಾತೃಭಾಷೆ ಮತ್ತು ಜಾತಿಯ ಅಭಿಮಾನ ಎಲ್ಲರಲ್ಲೂ ಇದ್ದೇ ಇರುತ್ತದೆ. ಆದ್ದರಿಂದ ಜಾತಿಯ ಬೆಂಬಲ ಹೆಚ್ಚು ಪ್ರೋತ್ಸಾಹದಾಯಕ. ಇನ್ನಾದರೂ ನಮ್ಮ ಸಂಸ್ಥೆಗಳು ಸಮಾಜ ಬಂಧುಗಳನ್ನು ಬೆಂಬಲಿಸಬೇಕು. ನಾವು ನಮ್ಮ ಮಕ್ಕಳಿಗೂ ಹೆಚ್ಚಿನ ಶಿಕ್ಷಣ ಕೊಡಿಸಿ ಸಂಸ್ಕಾರವನ್ನು ತುಂಬಿ ಪ್ರೋತ್ಸಾಹಿಸುವ ಅಗತ್ಯವಿದೆ. ಇಂತಹ ಅರ್ಹತೆಗಳೇ ನನ್ನನ್ನು ಥಾಣೆಯ ಮಹಾಪೌರ ಗದ್ದುಗೆ ಹಿಡಿಯುವಲ್ಲಿ ಸಹಕಾರಿಯಾಯಿತು ಎಂದು ಥಾಣೆ ಮೇಯರ್ ಮೀನಾಕ್ಷಿ ಪೂಜಾರಿ ನುಡಿದರು.
ಮಾ. 8ರಂದು ಸಂಜೆ ಸಾಂತಾಕ್ರೂಜ್ ಪೂರ್ವ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ವತಿಯಿಂದ ನಡೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನ ಸಮಾರಂಭದಲ್ಲಿ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ, ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಮತ್ತು ಪದಾಧಿಕಾರಿಗಳೊಂದಿಗೆ ಥಾಣೆ ಮೇಯರ್ ಮೀನಾಕ್ಷೀ ಪೂಜಾರಿ (ಶಿಂಧೆ) ಹಾಗೂ ಸ್ಥಳಿಯಾಡಳಿತ ಚುನಾವಣೆಯಲ್ಲಿ ವಿಜೇತರಾದ ಜಗದೀಶ್ ಕೆ. ಅಮೀನ್ ಅವರನ್ನು ಬಿಲ್ಲವರ ಅಸೋಸಿಯೇಶನ್ ಪರವಾಗಿ ಪೇಟ ತೊಡಿಸಿ, ಶಾಲು ಹೊದೆಸಿ, ಫಲಪುಷ್ಪಗುತ್ಛ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಗೌರವಿಸಿ ಅಭಿನಂದಿಸಿದರು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ನಗರ ಸೇವಕ ಜಗದೀಶ್ ಕೆ. ಅಮೀನ್ ಅವರು, ನಾನು ಸುಮಾರು ಏಳು ವರ್ಷ ಬಿಲ್ಲವರ ಭವನ ಅಥವಾ ಬಿಲ್ಲವ ಸಮುದಾಯದ ಒಡನಾಟದಲ್ಲಿರಲಿಲ್ಲ. ಆದರೆ ನನ್ನ ಸ್ವಸಮಾಜದ ಪ್ರೇರಣೆ ನನ್ನ ಗೆಲುವಿಗೆ ಆಶಾದಾಯಕವಾಯಿತು. ನಾವು ವಾಸಿಸುವ ಭೂಮಿ ಮರಾಠಿಯಾಗಿದ್ದು ಇಲ್ಲಿನ ಮೂಲವಾಸಿಗಳಿಗೆ, ಮರಾಠಿಗರಿಗೆ ಮೊದಲ ಆದ್ಯತೆ ನೀಡಲೇಬೇಕು. ಬರೇ ಸಮ್ಮಾನದಿಂದ ಏನೂ ಸಿದ್ಧಿಸಲಾಗದು. ಸಮಾಜ ಬಾಂಧವರ ಸಹಯೋಗವೂ ಅವಶ್ಯವಾಗಿರಬೇಕು. ಬಿಲ್ಲವರು ಯಾವುದೇ ಪಕ್ಷದಿಂದ ಕಣಕ್ಕಿಳಿಯಲಿ ನಾವು ಬೆಂಬಲಿಸಬೇಕು. ಪೊಲಿಟೀಶನ್ಸ್ ಅಂದರೆ ಆ್ಯಕ್ಟರ್ಗಳಿದ್ದಂತೆ ಅದಕ್ಕೂ ಮಿಗಿಲಾಗಿ ಮತದಾರರು ಆ್ಯಕ್ಟರ್ ಆಫ್ ಆ್ಯಕ್ಟರ್ ಆಗಿದ್ದಾರೆ. ಪೊಲಿಟೀಶನ್‌ಗಳ ಮುಂದೆ ಬಾಲಿವುಡ್ ಆ್ಯಕ್ಟರ್‌ಗಳು ಏನೂ ಅಲ್ಲ. ಸಮುದಾಯದ ವ್ಯಕ್ತಿಯೋರ್ವರು ಗೆದ್ದರೆ ಅದು ಆ ಸಮಾಜಕ್ಕೆನೆ ಒಳಿತಾಗುವುದು ಎಂದು ಹೇಳಿದರು.
ವೇದಿಕೆಯಾಲ್ಲಿ ಬ್ಯಾಂಕಿನ ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್, ಎನ್‌ಸಿಪಿ ಮುಂಬಯಿ ಪ್ರದೇಶ ಉಪಾಧ್ಯಕ್ಷ ಲಕ್ಷ್ಮಣ್ ಸಿ. ಪೂಜಾರಿ, ರಾಜಕೀಯ ಧುರೀಣ ಶ್ರೀನಿವಾಸ ಆರ್. ಕರ್ಕೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್, ಮಾಜಿ ಕಾರ್ಯಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್, ವಿದ್ಯಾ ರಾಜ ಸಾಲ್ಯಾನ್, ಮಕ್ಕಳ ಮನಃಶಾಸ್ತ್ರಜ್ಞೆ ಡಾ| ಮೇಘಾ ಭಯಾನಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆಯರಾದ ವಿಲಾಸಿನಿ ಕೆ. ಸಾಲ್ಯಾನ್ ಮತ್ತು ಪ್ರಭಾ ಕೆ. ಬಂಗೇರ, ಜತೆ ಕಾರ್ಯದರ್ಶಿಗಳಾದ ಡಾ| ಗೀತಾಂಜಲಿ ಎಲ್. ಸಾಲ್ಯಾನ್, ಲಕ್ಷ್ಮೀ ಎಸ್. ಪೂಜಾರಿ, ಜೊತೆ ಕಾರ್ಯದರ್ಶಿಗಳಾದ ಡಾ| ಗೀತಾಂಜಲಿ ಎಲ್. ಸಾಲ್ಯಾನ್, ಬೇಬಿ ಎಸ್. ಕುಕ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಅಸೋಸಿಯೇಶನ್‌ನ ಉಪಾಧ್ಯಕ್ಷರಾದ ರಾಜ ವಿ. ಸಾಲ್ಯಾನ್, ಭಾಸ್ಕರ ವಿ. ಬಂಗೇರ, ಶಂಕರ ಡಿ. ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್, ಗೌರವ ಪ್ರಧಾನ ಕೋಶಾಧಿಕಾರಿ ಮಹೇಶ್ ಸಿ. ಕಾರ್ಕಳ ಇತರ ಪದಾಧಿಕಾರಿಗಳು, ವ್ಯವಸ್ಥಾಪಕ ಭಾಸ್ಕರ ಟಿ. ಪೂಜಾರಿ ಸ್ಥಳೀಯ, ಸಮನ್ವಯ ಸಮಿತಿಗಳ ಮುಖ್ಯಸ್ಥರು, ಭಾರತ್ ಬ್ಯಾಂಕಿನ ನಿರ್ದೇಶಕರುಗಳಾದ ಭಾಸ್ಕರ್ ಎಂ. ಸಾಲ್ಯಾನ್, ಗಂಗಾಧರ್ ಜೆ. ಪೂಜಾರಿ, ಅಶೋಕ್ ಎಂ. ಕೋಟ್ಯಾನ್, ಜ್ಯೋತಿ ಕೆ. ಸುವರ್ಣ, ಸೇರಿದಂತೆ ಅಪಾರ ಸಂಖ್ಯೆಯ ಬಿಲ್ಲವರು ಹಾಜರಿದ್ದರು. ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್ ಸ್ವಾಗತಿಸಿ ಸಮ್ಮಾನಿತರನ್ನು ಪರಿಚಯಿಸಿ, ಸಮ್ಮಾನ ಪತ್ರ ವಾಚಿಸಿದರು. ಮಹಿಳಾ ವಿಭಾಗದ ಗೌರವ ಪ್ರಧಾನ ಕಾರ್ಯದರ್ಶಿ ಸುಮಿತ್ರಾ ವಿ. ಬಂಗೇರ ವಂದಿಸಿದರು.
ಬಿಲ್ಲವ ಸಮಾಜ ಬಾಂಧವರ ರಾಜಕೀಯ ಗೆಲುವು ಸಮಗ್ರ ಬಿಲ್ಲವರ ಸಮುದಾಯಕ್ಕೆ ಅಭಿಮಾನವಾಗಿದೆ. ನಮ್ಮಲ್ಲಿನ ಭವಿಷ್ಯತ್ತಿನ ರಾಜಕಾರಣಿಗಳನ್ನು ಪ್ರೋತ್ಸಾಹಿಸುವ ಉದ್ದೇಶ ಇದಾಗಿದೆ. ರಾಜಕೀಯ ಶಕ್ತಿ ರಾಷ್ಟ್ರದ ಪ್ರಬಲಶಕ್ತಿ ಆಗಿದ್ದು ಯುವಜನತೆ ಸಮಾಜ ಸೇವೆಯನ್ನು ಮೈಗೂಡಿಸಿಕೊಂಡು ರಾಜಕಾರಣದತ್ತ ಒಲವು ತೋರಬೇಕು
– ಜಯ ಸಿ. ಸುವರ್ಣ (ಕಾರ್ಯಾಧ್ಯಕ್ಷರು: ಭಾರತ್ ಬ್ಯಾಂಕ್).
ರಾಜನೀತಿ ತಜ್ಞರಿಂದಲೇ ರಾಷ್ಟ್ರ ಮುನ್ನಡೆಯುತ್ತಿದ್ದು ರಾಜಕಾರಣವಿಲ್ಲದೆ ಏನೂ ಸಾಧ್ಯವಾಗದ ಪ್ರಸಕ್ತ ಕಾಲದಲ್ಲಿ ರಾಜಕೀಯವಾಗಿ ಬೆಳೆಯುವ ಅಗತ್ಯ ಎಲ್ಲಾ ಸಮಾಜಕ್ಕಿದೆ. ಆದುದರಿಂದ ಬಿಲ್ಲವರು ರಾಜಕೀಯ ಚತುರರಾಗಬೇಕು. ಇದು ಅಭಿನಂದನಾ ಸಂಭ್ರಮ ಮಾತ್ರವಲ್ಲ ಬಿಲ್ಲವರಿಗೆ ಉತ್ತೇಜನ ನೀಡುವ ಕಾರ್ಯಕ್ರಮವಾಗಿದೆ. ಇಂತಹ ಸಂಭ್ರಮಗಳು ಯುವ ಪೀಳಿಗೆಗೆ ಪ್ರೇರಣೆಯಾಗಬೇಕು
– ನಿತ್ಯಾನಂದ ಡಿ. ಕೋಟ್ಯಾನ್ (ಅಧ್ಯಕ್ಷರು: ಬಿಲ್ಲವರ ಅಸೋಸಿಯೇಶನ್ ಮುಂಬಯಿ).