Advertisement

ಜಾತ್ರೆಯಲ್ಲಿ ಗೋಲಿ, ಹಾವುಏಣಿ ಆಟವಾಡಿದ ಸಚಿವರು, ಶಾಸಕರು

07:21 AM Feb 03, 2019 | |

ನಂಜನಗೂಡು: ಸದಾ ರಾಜಕೀಯದ ಆಟಗಳಲ್ಲಿ ಮುಳುಗಿರುವ ರಾಜಕೀಯ ನಾಯಕರು ಇಂದು ದೇಸಿ ಆಟಗಳಾದ ಅಣ್ಣೆಕಲ್ಲು, ಹುಲಿಕುರಿ, ನವಕಂಕರಿ, ಹಾವು-ಏಣಿ ಆಟ ಆಡಿ ಸಂಭ್ರಮಿಸಿದರು.

Advertisement

ರಾಜಕಾರಿಣಿಗಳ ಈ ದೇಸಿ ಆಟಕ್ಕೆ ಸಾಕ್ಷಿಯಾಗಿದ್ದು, ಸುತ್ತೂರಿನ ಶಿವರಾತ್ರಿ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ದೇಸಿ ಆಟ, ದೋಣಿ ವಿಹಾರ‌, ರಂಗೋಲಿ, ಸೋಬಾನೆ ಪದಗಳ ಉದ್ಘಾಟನಾ ಸಮಾರಂಭದ ವೇದಿಕೆ.

ಇಲ್ಲಿ ಆಸೀನರಾಗಿದ್ದ ಸಚಿವರಾದ ಎಂ.ಸಿ.ಮನಗೂಳಿ, ಡಿ.ಸಿ.ತಮ್ಮಣ್ಣ, ಮಾಜಿ ಸಚಿವ ಅಲ್ಲಂವೀರಭದ್ರಪ್ಪ, ಎನ್‌.ಮಹೇಶ್‌, ಗೀತಾ ಹಾಗೂ ಮಾಜಿ ಶಾಸಕ ವಹಿಮಾ ಪಟೇಲ್‌ ಮುಂತಾದವರು ದೇಸಿ ಆಟಗಳನ್ನು ತಾವೇ ಸ್ವತಃ ಆಡುವುದರ ಮೂಲಕ ಸಂಭ್ರಮಿಸಿದರು.

ನಾನು ರಾಜಕಾರಣಕ್ಕೆ ಬರಬಾರದಿತ್ತು: ಸಮಾರಂಭದಲ್ಲಿ ಮಾತನಾಡಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ರಾಜಕಾರಣಕ್ಕೆ ಬಂದು ನಾನು ತಪ್ಪು ಮಾಡಿದನೇನೋ ಎಂದು ಅನ್ನಿಸುತ್ತಿದೆ ಎಂದು ತಿಳಿಸಿದರು.

ವೇದಿಕೆ ಮೇಲಿದ್ದ ಸಚಿವ ಮನಗೂಳಿ ಹಾಗೂ ಅಲ್ಲಂ ಅವರನ್ನು ಹೆಸರಿಸಿದ ತಮ್ಮಣ್ಣ ಇಂತಹ ಸಜ್ಜನಿಕೆಯ ರಾಜಕಾರಣ ಕಂಡು ತಾನು ರಾಜಕಾರಣಕ್ಕೆ ಬಂದೆ. ಸಚಿವ ಮನಗೂಳಿ, ಘೋರ್ಪಡೆಯಂತವರು ರಾಜಕಾರಣ ಮಾಡಿದ ಬಳ್ಳಾರಿಯ ನೆಲದಲ್ಲಿ ಇಂದು ನಡೆಯುತ್ತಿರುವ ರಾಜಕಾರಣ ವಾಕರಿಕೆ ತಂದಿದೆ.

Advertisement

ಗೌರವ ಕಳೆದುಕೊಂಡಿರುವ ಇಂದಿನ ರಾಜಕಾರಣ ನಮ್ಮಂತವರಿಗಲ್ಲ ಎಂದು ಉದ್ಗರಿಸಿ, ಜಾನಪದ, ಕಲೆ, ಎಲ್ಲಾ ಪ್ರಾಕಾರದ ಸಾಹಿತ್ಯಗಳ ತಾಯಿ ಬೇರು ಇದ್ದಂತೆ, ಇದನ್ನು ಪೋಷಿಸಬೇಕಾದ್ದು ತಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.

ಶೈಕ್ಷಣಿಕ ಕ್ರಾಂತಿ: ಇದೇ ವೇದಿಕೆಯಿಂದ ಮಾತನಾಡಿದ ಸಚಿವ ಮನಗೂಳಿ, ಅವಿಭಕ್ತ ಕುಟುಂಬಗಳು ಕಾಣೆಯಾಗಿ, ವಿಭಕ್ತ ಕುಟುಂಬಗಳಲ್ಲೂ ಪ್ರತಿನಿತ್ಯದ ಕಲಹ ಕಾಣಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಮನೆಗೊಬ್ಬ ಗುರು, ಊರಿಗೊಂದು ಮಠ ಬೇಕು ಎಂದು ಪ್ರತಿಪಾದಿಸಿದರು.

ಮನೆಯ ಕಲಹವನ್ನು ನಿಯಂತ್ರಣದಲ್ಲಿಡಲು ಗುರು ಅವಶ್ಯಕ ಎಂದ ಸಚಿವರು, ಸಂಸ್ಕೃತಿಯ ಶಿಕ್ಷಣದಿಂದ ಮಾತ್ರ ನಾವು ಮನುಷ್ಯರಾಗುತ್ತೇವೆ, ಇಲ್ಲವಾದಲ್ಲಿ ಮೃಗೀಯರಾಗುತ್ತೇವೆ, ಇದನ್ನು ಕಂಡೇ ಸುತ್ತೂರಿನಂತಹ ಶ್ರೀಮಠಗಳು ಶೈಕ್ಷಣಿಕ ಕ್ರಾಂತಿಯತ್ತ ಸಾಗಿ ಸಮಾಜದ ಬದಲಾವಣೆಯತ್ತ ಮುಖಮಾಡಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಜಿ ಸಚಿವ ಎನ್‌.ಮಹೇಶ್‌ ಮಾತನಾಡಿ, ವೇದಿಕೆಯ ಭಾಷಣವನ್ನು ಬದಿಗಿಟ್ಟು ಜಾತ್ರೆಯನ್ನು ಸುತ್ತಿ ಮನರಂಜನೆಯನ್ನೇ ಅನುಭಸುತ್ತಿರುವುದೇ ನಿಜವಾದ ಸುಖೀ ಎನ್ನುತ್ತ ದೇಶದ ಸಂಪತ್ತನ್ನು ಸೃಷ್ಟಿಸುವ ಕಾಯಕ ಜೀವಿಗಳಿಗಾಗಿಯೇ ಹಬ್ಬ, ಹರಿದಿನಗಳು ಹಾಗೂ ಜಾತ್ರೋತ್ಸವಗಳು ಎಂದು ಮಹೇಶ್‌ ಹೇಳಿದರು.

ಧಾರ್ಮಿಕ ಬದುಕು ಇಲ್ಲದ ಮನುಷ್ಯ ಅತ್ಯಂತ ಕ್ರೂರಿ, ಮಾನಸಿಕ ಶಾಂತಿಗೆ ಧಾರ್ಮಿಕತೆ ಅನಿವಾರ್ಯ ಎಂದ ಅವರು ಸಚಿವರಾಗಿ, ಶಿಕ್ಷಣ ಇಲಾಖೆಯನ್ನು ಅರ್ಥಮಾಡಿಕೊಳ್ಳಲು ತಮಗೆ ನಾಲ್ಕು ತಿಂಗಳು ಬೇಕಾಯಿತು ಎಂದು ಹೇಳಿದರಲ್ಲದೆ, ನಾವು ವಿದೇಶಿಯರಿಂದ ಕಲಿಯಬೇಕಾದುದು ಏನೂ ಇಲ್ಲ, ತಮ್ಮದೇ ಪರಂಪರೆಯ ಗ್ರಾಮೀಣ ಬದುಕನ್ನು ಅರ್ಥಮಾಡಿಕೊಂಡರೆ ಸಾಕು ಎಂದರು.

ದಕ್ಷಿಣ ಕಾಶಿ: ಮಾಜಿ ಸಚಿವ ಅಲ್ಲಂವೀರಭದ್ರಪ್ಪ ಮಾತನಾಡಿ, ದಕ್ಷಿಣ ಕಾಶಿ ಎಂಬ ಪವಿತ್ರ ಸ್ಥಾನ ಪಡೆಯುವ ಎಲ್ಲಾ ಅರ್ಹತೆಗಳು ಸುತ್ತೂರಿಗೆ ಇದೆ ಎಂದರು. ಮಾಜಿ ಸಚಿವೆ ಗೀತಾ ಮಹದೇವಪ್ರಸಾದ್‌, ಅವರ ಪುತ್ರ ಗಣೇಶ್‌ ಪ್ರಸಾದ್‌, ಎಫ್ಕೆಸಿಸಿಐ ಅಧ್ಯಕ್ಷ ಸುಧಾಕರ್‌ಶೆಟ್ಟಿ ಸಮಾರಂಭದಲ್ಲಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next