ಉಡುಪಿ: ಶ್ರೀಕೃಷ್ಣಮಠದ ಗರ್ಭಗುಡಿಗೆ ನೂತನವಾಗಿ ನಿರ್ಮಿಸುತ್ತಿರುವ ಸ್ವರ್ಣಗೋಪುರದ ಕೆಲಸ ಸುಮಾರು ಶೇ.75 ಪೂರ್ಣಗೊಂಡಿದೆ.
ಗರ್ಭಗುಡಿಯ ಮೇಲಿನ ನಾಲ್ಕೂಕಡೆ ಛಾವಣಿಯ ಮೇಲೆ ಸ್ವರ್ಣದ ಹಾಳೆಯನ್ನು ಮಡಾಯಿಸಲಾಗಿದೆ. ಮೇಲೆ ಹೋಗಲು ಅನುಕೂಲವಾಗುವಂತೆ ದೊಂಬೆಯ ಭಾಗವನ್ನು ಮಾತ್ರ ಹಾಕದೆ ಉಳಿಸಿಕೊಳ್ಳಲಾಗಿದೆ. ಕೆಳಭಾಗ ಎರಡು ಕಡೆ ತಾಮ್ರದ ತಗಡನ್ನು ಮಡಾಯಿಸಲಾಗಿದೆ. ಒಂದೆರಡು ದಿನಗಳಲ್ಲಿ ಈ ನಾಲ್ಕೂ ಕಡೆ ಚಿನ್ನದ ಹಾಳೆಯನ್ನೂ ಹೊದೆಸಲಾಗುತ್ತದೆ.
ಕೆಳಭಾಗ ಸಾಗುವಾನಿಯ ಮರ, ಅದರ ಮೇಲೆ ತಾಮ್ರದ ತಗಡನ್ನು ಹಾಕಿ, ಅದರ ಮೇಲೆ ಚಿನ್ನದ ಹಾಳೆಯನ್ನು ಜೋಡಿಸಲಾಗುವುದು. ಒಟ್ಟು 100 ಕೆ.ಜಿ. ಚಿನ್ನ, 800 ಕೆ.ಜಿ. ಬೆಳ್ಳಿ, 250 ಕೆ.ಜಿ. ತಾಮ್ರವನ್ನು ಬಳಸಲಾಗುತ್ತಿದೆ. ಒಟ್ಟು 2,500 ಚದರಡಿಯ ಛಾವಣಿಗೆ ಸಾಗುವಾನಿ ಮರದ ಮುಚ್ಚಿಗೆ ಅದರ ಮೇಲೆ ತಾಮ್ರ, ಚಿನ್ನದ ತಗಡು ಹೊದೆಸಲಾಗಿದೆ. ಸರ್ವಮೂಲ, ಹಂಸಮಂತ್ರ, ದಾನಿಗಳ ಹೆಸರನ್ನು ತಗಡಿನಲ್ಲಿ ಬರೆಸಲಾಗಿದೆ.
ಹಿಂದಿನ ತಾಮ್ರದ ತಗಡನ್ನು ಭಕ್ತರಿಗೆ ಟಂಕೆ ರೂಪದಲ್ಲಿ ಕೊಡಲಾಗುತ್ತದೆ. ಟಂಕೆ ಮಾಡಿಸುವ ಕೆಲಸವೂ ನಡೆಯುತ್ತಿದೆ.
ಮೇ 31ರಿಂದ ಜೂ. 10ರ ವರೆಗೆಸುವರ್ಣ ಗೋಪುರ ಸಮರ್ಪಣಾ ಸಮಾರಂಭ ಆಯೋಜಿಸಲಾಗಿದೆ.