ಮೈಸೂರು: ಮಹಾ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಅಂಬಾವಿಲಾಸ ಅರಮನೆ ಆವರಣದಲ್ಲಿರುವ ಐತಿಹಾಸಿಕ
ಶ್ರೀತ್ರಿನೇಶ್ವರಸ್ವಾಮಿ ದೇವಸ್ಥಾನದಲ್ಲಿ ಮೂಲ ದೇವರಿಗೆ ಚಿನ್ನದ ಕೊಳಗ ಧಾರಣೆ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು.
ಶಿವರಾತ್ರಿ ಹಿನ್ನೆಲೆಯಲ್ಲಿ ಮುಂಜಾನೆಯೇ ತ್ರಿನೇಶ್ವರಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ ಸಹಸ್ರಾರು ಭಕ್ತರು ಚಿನ್ನದ ಕೊಳಗ ಧರಿಸಿದ್ದ ತ್ರಿನೇಶ್ವರಸ್ವಾಮಿ ದರ್ಶನ ಪಡೆದು, ಶ್ರದ್ಧಾ, ಭಕ್ತಿಯಿಂದ ಪೂಜಿಸುವ ಮೂಲಕ ಪುನೀತರಾದರು.
ತ್ರಿನೇಶ್ವರಸ್ವಾಮಿ ಸನ್ನಿಧಿ: ಶಿವರಾತ್ರಿ ಹಿನ್ನೆಲೆಯಲ್ಲಿ ಅರಮನೆಯ ಶ್ರೀ ತ್ರಿನೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಮುಂಜಾನೆ 4.30ರಿಂದ ಧಾರ್ಮಿಕ ಕೈಂಕರ್ಯಗಳು ಆರಂಭಗೊಂಡಿತು. ಪ್ರಮುಖವಾಗಿ ಗಂಗಾಜಲ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಸೇರಿದಂತೆ ಇನ್ನಿತರ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಮಹಾಮಂಗಳಾರತಿ ನೆರವೇರಿಸಿ ತ್ರಿನೇಶ್ವರಸ್ವಾಮಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಯಿತು. ಮಹಾಶಿವರಾತ್ರಿ ಪ್ರಯುಕ್ತ ತ್ರಿನೇಶ್ವರಸ್ವಾಮಿ ದಿನವಿಡೀ ನಾನಾ ಪೂಜೆಗಳನ್ನು ನಡೆಸಲಾಯಿತು. ಅಲ್ಲದೆ ಭಕ್ತರಿಗಾಗಿ ರಾತ್ರಿ 12ಗಂಟೆವರೆಗೆ ದೇವರ ದರ್ಶನಕ್ಕೆ ಅನುಕೂಲ ಕಲ್ಪಿಸಲಾಗಿತ್ತು. ಮಹಾರಾಜರಾದ ಜಯಚಾಮರಾಜ ಒಡೆಯರ್ ಅವರು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಜನ್ಮದಿನದ ನೆನಪಿಗಾಗಿ 1952ರಲ್ಲಿ ಮಾಡಿಸಿಕೊಟ್ಟಿರುವ 11 ಕೆ.ಜಿ ತೂಕದ ಚಿನ್ನದ ಕೊಳಗ(ಮುಖವಾಡ) ವನ್ನು ಜಿಲ್ಲಾ ಖಜಾನೆಯಿಂದ ತಂದು ದೇವರಿಗೆ ಧಾರಣೆ ಮಾಡಲಾಗಿತ್ತು. ದೇವರ ದರ್ಶನ ಪಡೆದ ಸಾವಿರಾರು ಭಕ್ತರು ತ್ರಿನೇಶ್ವರಸ್ವಾಮಿಗೆ ಬಿಲ್ವಪತ್ರೆ ಸಮರ್ಪಿಸಿ, ಭಕ್ತಭಾವ ಮೆರೆದರು. ದೇವರ ದರ್ಶನಕ್ಕೆ ಆಗಮಿಸಿದ್ದ ಭಕ್ತರಿಗಾಗಿ ಖಾಸಗಿ ಸಂಸ್ಥೆಯಿಂದ ಪುಳಿಯೋಗರೆ ವಿತರಣೆ ಮಾಡಲಾಯಿತು.
ಪೊಲೀಸ್ ಬಂದೋಬಸ್ತ್: ತ್ರಿನೇಶ್ವರಸ್ವಾಮಿ ದರ್ಶನದ ವೇಳೆ ನೂಕುನುಗ್ಗಲು ತಡೆಯಲು ಪೊಲೀಸರು ಅಗತ್ಯ ಕ್ರಮಕೈಗೊಂಡಿದ್ದರು. ಭಕ್ತರಿಗೆ ತೊಂದರೆ ಆಗದಂತೆ ಮುನ್ನಚ್ಚರಿಕೆ ಕ್ರಮವಾಗಿ ದೇವಸ್ಥಾನದ ಆವರಣದಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು. ದೊಡ್ಡಕೆರೆ ಮೈದಾನ, ವರಹಾ ದ್ವಾರದ ನಿಲುಡೆ, ಅಂಬಾವಿಲಾಸ ಪಾರ್ಕಿಂಗ್, ಕಾಡಾ ಕಚೇರಿ ಆವರಣ ಸೇರಿದಂತೆ ಇನ್ನಿತರ ಕಡೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಲಾಗಿತ್ತು ರಾಜವಂಶಸ್ಥ ರಿಂದ ಪೂಜೆ ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಶ್ರೀ ತ್ರಿನೇಶ್ವರಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಶಿವರಾತ್ರಿ ಹಬ್ಬದ ದಿನ ತ್ರಿನೇತ್ರೇಶ್ವರಸ್ವಾಮಿ ದೇವಸ್ಥಾನ ಹಾಗೂ ತ್ರಿಪುರ ಸುಂದರಿ ಜ್ವಾಲಾಮುಖೀ ದೇವಿಯ ದರ್ಶನ ಪಡೆಯುತ್ತೇನೆ. ಹೀಗಾಗಿ ಈ ವರ್ಷವೂ ತ್ರಿನೇಶ್ವರನ ಸ್ವಾಮಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದ ನಂತರ ತ್ರಿಪುರಸುಂದರಿ ಜ್ವಾಲಾಮುಖೀ ಅಮ್ಮನವರ ದರ್ಶನ ಪಡೆಯುತ್ತೇವೆ. ಮಹಾಶಿವರಾತ್ರಿಯಂದು ನಾಡಿನ ಜನತೆಗೆ ಶಿವನ ಕೃಪಾಕಟಾಕ್ಷವಿರಲಿ ಎಂದು ಹಾರೈಸಿದರು.
ನನ್ನ ಮೊಮ್ಮಗ ಆರೋಗ್ಯವಾಗಿ, ಚೆನ್ನಾಗಿದ್ದಾನೆ, ಅವನ ನಾಮಕರಣ ರಾಜವಂಶದ ಪದ್ಧತಿಯಲ್ಲೇ ಮಾಡಲಾಗುತ್ತದೆ. ಆದರೆ, ಈಗಲೇ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ.
● ಪ್ರಮೋದಾದೇವಿ ಒಡೆಯರ್, ರಾಜವಂಶಸ್ತೆ