ಪುಲ್ವಾಮಾ: ಜು.27ರಂದು ದಕ್ಷಿಣ ಕಾಶ್ಮೀರದ ಟ್ರಾಲ್ ಪ್ರದೇಶದಲ್ಲಿರುವ ತಮ್ಮ ಮನೆಯಂಗಳದಲ್ಲಿ ತಮ್ಮ ಬೈಕ್ ದುರಸ್ತಿ ಮಾಡುತ್ತಿದ್ದ ವಿಶೇಷ ಪೊಲೀಸ್ ಅಧಿಕಾರಿ (ಎಸ್‌ಪಿಒ) ಮುದಸ್ಸಿರ್ ಅಹಮದ್ ಲೋನ್ ಉಗ್ರರಿಂದ ಅಪಹರಣಗೊಂಡಿದ್ದರು. ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಮೇಲೆ ಉಗ್ರರು ನೀಡುತ್ತಿರುವ ಉಪಟಳದ ಸ್ಯಾಂಪಲ್ ಇದು. 2017ರ ಮಾರ್ಚ್‌ನಿಂದೀಚೆಗೆ ಉಗ್ರರು ಗಡಿ ಮೀರಿದ ವರ್ತನೆ ತೋರುತ್ತಿದ್ದಾರೆ. ಹಿಂದೆ ಯಾವತ್ತೂ ಭದ್ರತಾ ಸಿಬಂದಿಯ ಮನೆಗೆ ಬಂದು ಗುಂಡಿನ ದಾಳಿ ನಡೆಸಿದ್ದಾಗಲೀ, ಪ್ರತೀಕಾರ ಕೈಗೊಂಡಿದ್ದಾಗಲೀ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಸಮುದಾಯದ ಭದ್ರತಾ ಸಿಬ್ಬಂದಿಯ ಅಪಹರಣಗೈದು ಹತ್ಯೆ ಮಾಡುವ ಚಾಳಿ ಹೆಚ್ಚಿದೆ. ಲೋನ್ ಹೊರತುಪಡಿಸಿದಂತೆ, ಅಪಹರಣಗೊಂಡ ಭದ್ರತಾ ಸಿಬ್ಬಂದಿ ಬದುಕಿ ಬಂದಿದ್ದೇ ಇಲ್ಲ.
ಲೋನ್ ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ಅದೇ ಜಿಲ್ಲೆಯ ನಾಯಾ ಗ್ರಾಮದಲ್ಲಿ ನಮಾಜಿಗೆ ಸಿದ್ಧತೆ ನಡೆಸುತ್ತಿದ್ದ ಸಿಆರ್‌ಪಿಎಫ್ ಯೋಧ ನಸೀರ್ ಅಹಮದ್ ಮನೆ ಬಾಗಿಲು ಬಡಿದ್ದಿದರು ಉಗ್ರರು. ದಾರಿ ತೋರಿಸುವಂತೆ ಕೇಳಿದ ಆ ಉಗ್ರರ ಜತೆ ನಸೀರ್ ಹಾಗೂ ಅವರ ಪತ್ನಿ ನಿಲೋಫರ್ ಹೆಜ್ಜೆ ಹಾಕಿದ್ದರು. ಅನತಿ ದೂರ ಸಾಗುತ್ತಿದ್ದಂತೆ, ನಸೀರ್ ಹಣೆಗೆ ಬಂದೂಕು ಇಟ್ಟಿದ್ದರು ಆ ಪಾಪಿಗಳು. ಪತಿಯ ರಕ್ಷಣೆಗಾಗಿ ಧಾವಿಸಿದ ಗರ್ಭಿಣಿ ನಿಲೋಫರ್‌ರನ್ನು ಕೆಳಕ್ಕುರುಳಿಸಿ ಬಂದೂಕಿನ ಹಿಡಿಕೆಯಿಂದ ಹೊಡೆದಿದ್ದರು. ಈಕೆಯ ಕಣ್ಣೆದುರಲ್ಲೇ ಯೋಧ ನಸೀರ್ ಅನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. ಕಾಶ್ಮೀರದಲ್ಲಿ ಪ್ರಸಕ್ತ ವರ್ಷ ಈ ರೀತಿ ಮನೆಯಿಂದ ಅಪ ಹರಣಗೊಂಡು ಕೊಲೆಯಾದ 7ನೇ ಯೋಧ ಇವರಾಗಿದ್ದರು. ಕಳೆದ ವರ್ಷ ಮೂವರು ಹತ್ಯೆಗೀಡಾಗಿದ್ದರು. ಹೀಗೆ ಮೃತಪಟ್ಟ ವರೆಲ್ಲರೂ ದಕ್ಷಿಣ ಕಾಶ್ಮೀರದವರಾಗಿದ್ದಾರೆ.
ಮುಸ್ಲಿಂ ಅಧಿಕಾರಿಗಳು ಟಾರ್ಗೆಟ್: ಕಳೆದ ವರ್ಷ ಮಾ.8ರಂದು ಮೊದಲ ಬಾರಿಗೆ ದಕ್ಷಿಣ ಕಾಶ್ಮೀರದ ಶೋಪಿಯಾನ್‌ನ ಡೆಪ್ಯೂಟಿ ಎಸ್‌ಪಿ ದರ್ಜೆಯ ಪೊಲೀಸ್ ಅಧಿಕಾರಿಯ ಮನೆ ಬಾಗಿಲು ಬಡಿದಿದ್ದರು ಉಗ್ರರು. ಆಗ ಅಧಿಕಾರಿ ಮನೆಯಲ್ಲಿರಲಿಲ್ಲ. ಆತ ಕೆಲಸ ಬಿಡಬೇಕು, ಇಲ್ಲದೇ ಹೋದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಕುಟುಂಬದವರಿಗೆ ಎಚ್ಚರಿಸಿದ್ದರು. ಮುಸ್ಲಿಂ ಸಮುದಾಯದ ಪೊಲೀ ಸರು ಸ್ಥಳೀಯ ಮಸೀದಿಗೆ ತೆರಳಿ ಸೇವೆ ಯಿಂದ ನಿವೃತ್ತನಾಗಿದ್ದೇನೆ ಎಂದು ಸಾರ್ವಜನಿಕವಾಗಿ ಘೋಷಿಸಬೇಕೆಂಬುದು ಉಗ್ರರ ಬೇಡಿಕೆ.
ವಾನಿ ಹತ್ಯೆಯ ನಂತರದ ಬೆಳವಣಿಗೆ: 2016ರ ಆಗಸ್ಟ್‌ನಲ್ಲಿ ಹಿಜಬ್ ಕಮಾಂಡರ್ ಬುರ್ಹಾನ್ ವಾನಿಯ ಎನ್‌ಕೌಂಟರ್ ಬಳಿಕ, ಪ್ರತಿಭಟನೆಗಳಲ್ಲಿ ಪಾಲ್ಗೊಂಡವರಿಗೆ ತೊಂದರೆ ನೀಡಬಾರದು ಎಂದು ದಕ್ಷಿಣ ಕಾಶ್ಮೀರದ ಸ್ಥಳೀಯ ಪೊಲೀಸರಿಗೆ ಉಗ್ರರು ಎಚ್ಚರಿಸಿ ದ್ದರು. ಉಗ್ರರ ಸಂಬಂಧಿಕರಿಗೆ ಕಿರುಕುಳ ನೀಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪೊಲೀಸರ ಕುಟುಂಬಸ್ಥರಿಗೆ 2016ರ ಡಿಸೆಂಬರ್‌ನಲ್ಲಿ, ಅಲ್‌ಖೈದಾ ಕಾಶ್ಮೀರ ವಿಭಾಗದ ಮುಖ್ಯಸ್ಥ ಝಾಕಿರ್ ಮೂಸಾ ಎಚ್ಚರಿಸಿದ್ದ.
ದಕ್ಷಿಣ ಕಾಶ್ಮೀರದ ಸ್ಥಳೀಯ ಭದ್ರತಾ ಸಿಬ್ಬಂದಿಗೆ ತಮ್ಮ ಕುಟುಂಬದ, ನೆಂಟರ ಕಾರ್ಯಕ್ರಮಗಳಿಗೂ ಹೋಗಲಾರದ ಸ್ಥಿತಿ ಯಿದೆ. ಕೆಲವರು ತಮ್ಮ ಕುಟುಂಬವನ್ನು ನಗರ ಪ್ರದೇಶಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಉಗ್ರರ ಇಂತಹ ಕೃತ್ಯಗಳನ್ನು ತಡೆಯಲು ಕ್ರಮ ಕೈಗೊಂಡಿದ್ದೇವೆ. ಜತೆಗೆ, ಇತ್ತೀಚೆಗಷ್ಟೇ ಪೇದೆ ಸಲೀಂರನ್ನು ಹತ್ಯೆಗೈದ 3 ಉಗ್ರರನ್ನು ಹೊಡೆದುರುಳಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.