Advertisement
ತನಗೆ ಖುಷಿ ನೀಡುವ ವಸ್ತು ಮತ್ತು ಸೇವೆಗಳನ್ನು ಸಂಗ್ರಹಿಸುತ್ತಾ ಇಲ್ಲವೇ ಅನುಭೋಗಿಸುತ್ತಾ ಹೋದಂತೆ ವ್ಯಕ್ತಿಗೆ ತಾನು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದೇನೆ ಅನಿಸುತ್ತದೆ. ಇಂಥ ಅನಿಸಿಕೆ ಸಮಗ್ರವಾಗಿ ಪಸರಿಸಿದಂತೆಲ್ಲ ದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತದೆ ಎನ್ನಬಹುದು. ಮೊದಲಿಲ್ಲದ ಸರಕು ಮತ್ತು ಸೇವೆಗಳ ಅನುಭೋಗ ಈಗ ಹೆಚ್ಚು ಲಭ್ಯವಾಗುತ್ತದೆ. ಆಹಾರ, ಮನೆ, ಬಟ್ಟೆ, ರಸ್ತೆ, ಸಂಪರ್ಕ ಸಾಧನ, ವಾಹನ, ವಿದ್ಯುತ್, ವೈದ್ಯಕೀಯ ಸೇವೆ, ವಿದ್ಯೆ ಎಲ್ಲವೂ ಮಾನಸಿಕ ನೆಮ್ಮದಿ ನೀಡುವ ಹಂತಕ್ಕೆ ವ್ಯಕ್ತಿ ಮತ್ತು ದೇಶ ತಲುಪುವುದೇ ಆರ್ಥಿಕಾಭಿವೃದ್ಧಿ.
Related Articles
Advertisement
ನೈಸರ್ಗಿಕ ಸಂಪನ್ಮೂಲಗಳ ಸಂಚಯನ-ಅಪವ್ಯಯ ಉದ್ಯೋಗ ಸೃಷ್ಟಿಯ ಗುರಿಯಿರುವ ಅರ್ಥವ್ಯವಸ್ಥೆಯಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಅಗತ್ಯಕ್ಕಿಂತ ಹೆಚ್ಚು ಬಳಸಿಕೊಳ್ಳಲು ಆದ್ಯತೆ ನೀಡುವ ಆರ್ಥಿಕ ನೀತಿ ರೂಪಿಸಲು ರಾಜಕೀಯ ಒತ್ತಡಗಳು ಹೆಚ್ಚು. ನಿರ್ದಿಷ್ಟ ಅವಧಿಯಲ್ಲಿ ಬಳಸಲ್ಪಡುವ ಎಲ್ಲ ನೈಸರ್ಗಿಕ ಸಂಪತ್ತುಗಳಿಗೆ ಆ ಅವಧಿಯಲ್ಲಿ ಬೇಡಿಕೆ ಇದೆಯೇ ಎಂಬುದನ್ನು ನೋಡದೆ ಅವುಗಳನ್ನು ಉತ್ಪಾದನಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಪ್ರಾಮುಖ್ಯ ನೀಡಲಾಗುತ್ತದೆ. ನಮಗೆ ಲಭ್ಯವಿರುವ, ಮಿತ ಮತ್ತು ನವೀಕರಿಸಲಾಗದ ನೈಸರ್ಗಿಕ ಸಂಪತ್ತನ್ನು ಉಪಯೋಗಿಸಿ ಮಾಡುವ ನಗರೀಕರಣ ಮಾತ್ರ ನಮಗೆ ಸಾಕೇ ಎಂಬುದು ಪ್ರಶ್ನೆ. ಅಂದರೆ ಸರಳ ಮಾದರಿಯ ಕಟ್ಟಡ, ವಸತಿ, ಕೈಗಾರಿಕಾ ಸಂಕೀರ್ಣಗಳ ರಚನೆಯಿಂದಲೂ ಈಗಿನಷ್ಟೇ ಮೌಲ್ಯದ ವ್ಯಾಪಾರ-ವಹಿವಾಟನ್ನು ಮಾಡಲು ಸಾಧ್ಯವಿದೆ.
ಸಂಪರ್ಕ ಮಾಧ್ಯಮ ಕ್ರಾಂತಿ-ಅಪವ್ಯಯ: ಆಧುನಿಕ ಆರ್ಥಿಕಾಭಿವೃದ್ಧಿಯ ಉದ್ಯೋಗಾಧಾರಿತ ಆರ್ಥಿಕ ನೀತಿಯ ಇನ್ನೊಂದು ಮುಖ್ಯ ಗುರಿ ಸಂಪರ್ಕ ಮಾಧ್ಯಮ ಕ್ಷೇತ್ರದ ಕ್ರಾಂತಿ. ಕೇವಲ ರೇಡಿಯೋ ಮತ್ತು ಪತ್ರಿಕಾ ಮಾಧ್ಯಮ ಪ್ರಬಲವಾಗಿದ್ದ ಕಾಲದಲ್ಲಿ ಜನರು ಸರಕಾರ ನೀಡುವ ಆಹಾರಧಾನ್ಯಗಳಿಗಾಗಿ ಸರತಿ ನಿಲ್ಲುತ್ತಿರಲಿಲ್ಲ. ಶುದ್ಧ ಗಾಳಿ, ಶುದ್ಧ ನೀರು ಸೇವಿಸಿ ವಿಷಮುಕ್ತ ಪರಿಸರದಲ್ಲಿ ಬದುಕುತ್ತಿದ್ದರು. ಇಂದು ಒಬ್ಬೊಬ್ಬನ ಕೈಯಲ್ಲಿ ಒಂದೆರಡು ಮೊಬೈಲ್ ಫೋನ್‌ಗಳು, ಎಲ್ಲೆಂದರಲ್ಲಿ ಕಂಪ್ಯೂಟರ್‌ಗಳು, ಇಂಟರ್‌ನೆಟ್ ಸೌಲಭ್ಯ. ಆದರೆ ಕುಡಿಯುವ ನೀರಿಗಾಗಿ, ಸರಕಾರದ ಆಹಾರ ಧಾನ್ಯಕ್ಕಾಗಿ, ಉಚಿತಗಳ ಮಹಾಪೂರಗಳಿಗಾಗಿ ಕಾಯುವ ಜನರ ಸಂಖ್ಯೆ ಕಡಿಮೆಯಾಗಿಲ್ಲ. ಇದೊಂದು ಶುಷ್ಕ ಅಭಿವೃದ್ಧಿ. ಒಬ್ಬನಿಗೆ ಕೇವಲ ಫೋನ್ ಮಾಡುವ ಉದ್ದೇಶಕ್ಕೆ ಮಾತ್ರ ಮೊಬೈಲ್ ಫೋನ್ ಬೇಕು ಎಂದರೂ ಅವನು ಆ ಮೊಬೈಲ್ ಫೋನ್‌ನಲ್ಲಿ ತಾನು ಬಳಸದ ಏನೇನೋ ಸೇವೆಗಳನ್ನು ಕಡ್ಡಾಯವಾಗಿ ಕೊಳ್ಳಬೇಕು. ಅಂದರೆ, ಇಲೆಕ್ಟ್ರಾನಿಕ್ ಸಂಪರ್ಕ ಸಾಧನಗಳು ಗ್ರಾಹಕನಿಗೆ ಬೇಕಾದ್ದು, ಬೇಡದ್ದು ಎರಡನ್ನೂ ಒತ್ತಾಯಪೂರ್ವಕವಾಗಿ ನೀಡುತ್ತವೆ. ಗ್ರಾಹಕನಿಗೆ ಅದು ಬೇಡವಾಗಿದ್ದರೂ, ಅಲ್ಲಿ ಪ್ರಕೃತಿಯ ಯಾವುದೋ ಬೆಲೆ ಬಾಳುವ ಸಂಪತ್ತಿನ ಬಳಕೆಯಾಗಿದೆ ಮತ್ತು ಅದು ಅಪವ್ಯಯಗೊಂಡಿದೆ ಎಂಬುದು ಮಾತ್ರ ಸತ್ಯ.
ಸ್ವಾಮ್ಯಯುತ ಪೈಪೋಟಿ ಮತ್ತು ಅಪವ್ಯಯಗಳು: ವಸ್ತುವೊಂದರ ಬೆಲೆ ಸಾರ್ವತ್ರಿಕ ಸಮತೋಲನ ವ್ಯವಸ್ಥೆಯಲ್ಲಿ ಹಲವಾರು ಚಲಕಗಳ ಸಹಯೋಗದಿಂದ ನಿರ್ಧರಿಸಲ್ಪಡುತ್ತದೆ. ಇಂತಹ ಮಾರುಕಟ್ಟೆ ವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ, ಇರುವ ಆವಶ್ಯಕತೆಗಿಂತ ಜಾಸ್ತಿ ಉತ್ಪಾದನೆ ಆಗುವ ಸಾಧ್ಯತೆಯೂ ಇರುತ್ತದೆ. ಈ ರೀತಿ ಅತಿ ಉತ್ಪಾದನೆಯು ಬೇಡಿಕೆ ಕೊರತೆಯಿಂದಲ್ಲ, ಲಾಭದ ಆಮಿಷದಿಂದ ಉತ್ಪಾದಕರು ಯಥೇತ್ಛವಾಗಿ ಸಂಪನ್ಮೂಲಗಳನ್ನು ಬಳಸಿದ್ದರಿಂದ ಸೃಷ್ಟಿಯಾಗಿರುತ್ತದೆ. ಹೀಗೆ ಮಾರಾಟ ಮಾಡುವಾಗ ಅಥವಾ ವಸ್ತುವೊಂದನ್ನು ಉತ್ಪಾದಿಸುವಾಗ ವಸ್ತು ವೈವಿಧ್ಯದ ಹೆಸರಿನಲ್ಲಿ ಅನಗತ್ಯವಾಗಿ ನೈಸರ್ಗಿಕ ಅಥವಾ ಮಾನವ ಸಂಪನ್ಮೂಲ ಬಳಕೆಯಾಗುತ್ತದೆ. ಇದರಿಂದಾಗಿ ವಸ್ತು ಅನಗತ್ಯ ದುಬಾರಿಯಾಗುವುದಲ್ಲದೇ ದೇಶದ ನೈಸರ್ಗಿಕ ಸಂಪತ್ತು ಅಪವ್ಯಯವಾಗುತ್ತದೆ.
ಕೃಷಿ ಕ್ಷೇತ್ರದ ಅವಗಣನೆ: ಹೆಚ್ಚುತ್ತಿರುವ ಯುವಶಕ್ತಿಗೆ ಕೆಲಸ ನೀಡುವುದು ನಗರೀಕರಣದಿಂದ ಸಾಧ್ಯ ಎಂಬ ತಪ್ಪು ಕಲ್ಪನೆ ಆರ್ಥಿಕ ತಜ್ಞರಲ್ಲಿದೆ. ಕೃಷಿ ಕ್ಷೇತ್ರವು ಎಲ್ಲ ಕಾಲದಲ್ಲೂ ಸಾಂಪ್ರದಾಯಿಕವಾಗಿಯೇ ಇರುತ್ತದೆ ಎಂಬ ಊಹೆ ಇದಕ್ಕೆ ಮುಖ್ಯ ಕಾರಣ. ಸ್ವಾವಲಂಬಿ ಗ್ರಾಮೀಣ ಆರ್ಥಿಕತೆ, ಪರಿಸರಸ್ನೇಹಿ ಆರ್ಥಿಕ ನೀತಿ, ಕೃಷಿ ಸಂಬಂಧಿ ಚಟುವಟಿಕೆಗಳ ಅಭಿವೃದ್ಧಿ, ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ಸೂಕ್ತ ಕೃಷಿ, ಕಿರು ನೀರಾವರಿ ಯೋಜನೆ, ಸಸ್ಯಮೂಲದ ಇಂಧನ ತಯಾರಿಕೆ, ಅಂತರ ಬೇಸಾಯ, ಬಳಕೆಯಾಗದ ಕೃಷಿಯೋಗ್ಯ ಭೂಮಿಯ ಬಳಕೆ ಮುಂತಾಗಿ ಪ್ರೋತ್ಸಾಹ ಆದ್ಯತೆ ನೀಡಿದಲ್ಲಿ ಉದ್ಯೋಗ ಸೃಷ್ಟಿ ಸಾಧ್ಯವಾಗುತ್ತದೆ. ದುರದೃಷ್ಟವಶಾತ್ ಇತ್ತೀಚೆಗಿನ ವರ್ಷಗಳಲ್ಲಿ ಅತೀ ಹೆಚ್ಚು ಉದ್ಯೋಗ ನೀಡುವ ಕೃಷಿ ಕ್ಷೇತ್ರವನ್ನೇ ಕಡೆಗಣಿಸಲಾಗಿದೆ. ಮನುಷ್ಯನ ಹಸಿವು ನಿವಾರಣೆಯಾಗಬೇಕಾದರೆ ಬೇಸಾಯ ಬೇಕು. ಕೈಗಾರಿಕೆಗಳಿಗೆ ಮುಮ್ಮುಖ ಉದ್ಯೋಗ ಸೃಷ್ಟಿ ಸಾಮರ್ಥ್ಯ ಮಾತ್ರವಿದ್ದರೆ ಕೃಷಿಗೆ ಹಿಮ್ಮುಖ ಮತ್ತು ಮುಮ್ಮುಖ ಎರಡೂ ಪರಿಣಾಮದ ಉದ್ಯೋಗ ಸಾಮರ್ಥ್ಯವಿದೆ.
ಒಟ್ಟಿನಲ್ಲಿ ಬಡತನ ನಿವಾರಣೆಯ ಪ್ರಯತ್ನದಲ್ಲಿ ಭಾರತ ಇನ್ನೂ ಹಲವು ಪ್ರಯತ್ನಗಳನ್ನು ಮಾಡಬೇಕಾಗಿರುವುದರಿಂದ ಪೂರ್ಣವಾಗಿ ಮಾರುಕಟ್ಟೆ ಆಧಾರಿತ ಅರ್ಥವ್ಯವಸ್ಥೆಯನ್ನು ಬೆಂಬಲಿಸುವ ಸಮೃದ್ಧ ಕಾಲ ಇನ್ನೂ ಬಂದಿಲ್ಲ. 1991ರಿಂದೀಚೆಗೆ ಉದಾರೀಕರಣ ಮತ್ತು ಖಾಸಗೀಕರಣದ ಮೂಲಕ ಪ್ರಗತಿಯ ದರ ಹೆಚ್ಚಾದರೂ ಇದರಲ್ಲಿ ಉದ್ವೇಗ, ಒತ್ತಡ, ಪರಿಸರ ನಿರ್ಮೂಲನೆ ಸಾಕಷ್ಟು ಕಂಡುಬಂದಿದೆ. ಜನರ ಅನುಭೋಗ ಪ್ರವೃತ್ತಿಯಲ್ಲಿ ಬದಲಾವಣೆ ಆಗಿದೆ ನಿಜ. ಆದರೆ ಸಾಮೂಹಿಕ ಯೋಗಕ್ಷೇಮವನ್ನು ಅವರು ಅನುಭೋಗಿಸುವ ಶುದ್ಧ ಆಹಾರ, ನೀರು, ಗಾಳಿ, ಒತ್ತಡ ರಹಿತ ಜೀವನಗಳಿಗೆ ಹೋಲಿಸಿದಾಗ ಆರ್ಥಿಕ ಪ್ರಗತಿ ಸಮಾಧಾನಕರವಾಗಿಲ್ಲ. ಮಾರುಕಟ್ಟೆ ಅರ್ಥವ್ಯವಸ್ಥೆ, ಸ್ವಾಮ್ಯಯುತ ಪೈಪೋಟಿ ಹಾಗೂ ಉದ್ಯೋಗ ಸೃಷ್ಟಿಯ ಆರ್ಥಿಕ ಗುರಿಗಳು ದೇಶದ ಮಾನವ ಸಂಪನ್ಮೂಲ ಮತ್ತು ನೈಸರ್ಗಿಕ ಸಂಪತ್ತುಗಳನ್ನು ಧಾರಾಳವಾಗಿ ಅಪವ್ಯಯ ಮಾಡಿವೆ. ಉತ್ಪಾದನಾ ವೈವಿಧ್ಯದ ಸ್ಪರ್ಧೆ ಮತ್ತು ಜಾಹೀರಾತು ವೆಚ್ಚಗಳಲ್ಲಿ ಸ್ಪರ್ಧೆಯಿರುವುದರಿಂದ ವಸ್ತುವೊಂದು ಗ್ರಾಹಕನಿಗೆ ದುಬಾರಿಯಾಗುವುದಲ್ಲದೇ ದೇಶದ ಅಮೂಲ್ಯ ಸಂಪತ್ತಿನ ಅಪವ್ಯಯವೂ ಆಗುತ್ತದೆ. ಸ್ವಾಮ್ಯಯುತ ಮಾರುಕಟ್ಟೆಯಲ್ಲಿ ಆಗುತ್ತಿರುವ ಅಪವ್ಯಯಗಳ ಬಗ್ಗೆ ಸರಕಾರ ಸೂಕ್ತ ನೀತಿಯನ್ನು ರೂಪಿಸುವುದರೊಂದಿಗೆ, ಒಂದು ವಸ್ತುವಿನ ಮಾರಾಟವನ್ನು ಅತೀ ಸಣ್ಣ ಯುನಿಟ್‌ಗಳಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡುವ ವ್ಯವಸ್ಥೆಯನ್ನು ನಿಯಂತ್ರಿಸಬೇಕು. ಮಾರುಕಟ್ಟೆ ಅರ್ಥವ್ಯವಸ್ಥೆ, ಜಾಗತೀಕರಣ, ಖಾಸಗೀಕರಣದಂತಹ ಆರ್ಥಿಕ ನೀತಿಯನ್ನು ನಾವು ಬೆಂಬಲಿಸುವುದರೊಂದಿಗೆ ಅಲ್ಲಿ ಆಗುತ್ತಿರುವ ಅಪವ್ಯಯಗಳ ಬಗ್ಗೆ ಕೂಡ ಸರಿಯಾದ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.
ಎಂ. ಚೆನ್ನ ಪೂಜಾರಿ