ಬೆಂಗಳೂರು: ರಾಜಧಾನಿ ಬೆಂಗಳೂರಿನ 28 ವಿಧಾನಸಭೆ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ, ಕಾರ್ಯೋನ್ಮುಖರಾಗುವಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕರೆ ನೀಡಿದ್ದಾರೆ.
ಪದ್ಮನಾಭನಗರ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಪಕ್ಷದ ಬೂತ್ ಕಮಿಟಿ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವುದು ಪಕ್ಷದ ಗುರಿಯಾಗಿದೆ. ಈ ಗುರಿ ಸಾಧನೆಗೆ ಪಕ್ಷದ ಮುಖಂಡರು ಮತ್ತು ಕಾರ್ಯರ್ಕತರು ಈಗಿನಿಂದಲೇ ಕಾರ್ಯತಂತ್ರ ರೂಪಿಸಬೇಕು ಎಂದರು.
“ಗೋಪಾಲ್ ಅವರನ್ನು ಪದ್ಮನಾಭನಗರ ಕ್ಷೇತ್ರದಿಂದ ಕಣಕ್ಕಿಳಿಸಲು ಕೆಲವರು ಸಲಹೆ ನೀಡಿದ್ದಾರೆ. ಆದರೆ, ನಾವು ಒಗ್ಗಟ್ಟಾಗಿದ್ದರೆ ಮಾತ್ರ ಅರವನ್ನು ಗೆಲ್ಲಿಸಲು ಸಾಧ್ಯ. ಬೂತ್ ಗೆದ್ದರೆ ಕ್ಷೇತ್ರ ಗೆದ್ದಂತೆ. ಆದ್ದರಿಂದ ಬೂತ್ ಕಮಿಟಿ ಸದಸ್ಯರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು. ಈ ಬಾರಿ ಬೆಂಗಳೂರಿನಲ್ಲಿ ನಮ್ಮ ಪಕ್ಷ ಅತೀ ಹೆಚ್ಚು ಸ್ಥಾನ ಗೆಲ್ಲುವಂತೆ ಮಾಡಬೇಕು,’ ಎಂದು ಹೇಳಿದರು.
“ಬೆಂಗಳೂರಿನ 28 ಕ್ಷೇತ್ರಗಳ ಜವಾಬ್ದಾರಿಯನ್ನು ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಸೇರಿ ಐದು ಮಂದಿಗೆ ನೀಡಲಾಗಿದೆ. ಬೆಂಗಳೂರಿನ ಅಭಿವೃದ್ಧಿಗಾಗಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವುದು ಅವರ ಆಶಯವಾಗಿದೆ. ನಾನು ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನ ಮಂತ್ರಿಯಾಗಿ ಮಾಡಿರುವ ಕೆಲಸದ ಬಗ್ಗೆ ಮತ್ತು ಕುಮಾರಸ್ವಾಮಿ ಅವರು ಈ ಹಿಂದೆ 20 ತಿಂಗಳಲ್ಲಿ ಮಾಡಿರುವ ಕೆಲಸದ ಬಗ್ಗೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರೆಲ್ಲ ಸೇರಿ ಜನರಿಗೆ ತಿಳಿಸಬೇಕು.
ಈ ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದಾಗ ಮಾಡಿರುವ ಕೆಲಸ ನೆನೆದು ರಾಜ್ಯದ ಜನತೆ ಮತ್ತೆ ನಮ್ಮ ಪಕ್ಷಕ್ಕೆ ಅಧಿಕಾರ ನೀಡಲು ಇಚ್ಛಿಸಿದ್ದಾರೆ. ಆದರೆ ಈಗ ಕಾರ್ಯಕರ್ತರ ಮೆಲೆ ಹೆಚ್ಚಿನ ಜವಾಬ್ದಾರಿ ಇದೆ. ಕಾರ್ಯಕರ್ತರೆಲ್ಲ ಪ್ರತಿ ಮನೆ ಮನೆಗೆ ಹೊಗಿ ಪಕ್ಷದ ಸಾಧನೆ ಬಗ್ಗೆ ಜನರಿಗೆ ಹೇಳಬೇಕು,’ ಎಂದು ಕರೆ ನೀಡಿದರು.
ಅಭ್ಯರ್ಥಿಗಳ ಹೆಸರು ಅಂತಿಮ: “ನಾನು ಈಗಾಗಲೇ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ್ದೇನೆ. ಆದರೆ, ಆಕಾಂಕ್ಷಿಗಳು ತುಂಬಾ ಮಂದಿ ಇದ್ದಾರೆ. ಪಕ್ಷದ ಮುಖಂಡರು, ಆಕಾಂಕ್ಷಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ, ಕ್ಷೇತ್ರದಲ್ಲಿ ಏನೆಲ್ಲಾ ಸಮಸ್ಯೆಗಳಿವೆ ಎಂದು ನನ್ನ ಬಳಿ ನೇರವಾಗಿ ಹೇಳಿ. ಅದೆನ್ನಲ್ಲಾ ನಾನು ನೋಡಿಕೊಳ್ಳುತ್ತೇನೆ,’ ಎಂದು ಹೇಳಿದರು.
ಬಿಬಿಎಂಪಿಯಲ್ಲಿ ನಿರೀಕ್ಷೆಗೆ ತಕ್ಕಂತೆ ಕೆಲಸ ಆಗಿಲ್ಲ. ನಾವು ಆಡಳಿತದ ಪಾಲುದಾರ ಪಕ್ಷವಾಗಿರುವ ಕಾರಣ, ಜನರ ಮುಂದೆ ತಲೆ ತಗ್ಗಿಸುವ ಪರಿಸ್ಥಿತಿ ಬಂದಿದೆ. ಕಷ್ಟ ಉಂಡವರು ನಾವು ಆದರೆ, ಸುಖ ಉಂಡವರು ಕಾಂಗ್ರೆಸ್ ಮತ್ತು ಬಿಜೆಪಿ.
-ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ