Advertisement
ಬಸವಕಲ್ಯಾಣ ತಾಲೂಕು ಉಜಳಂಬ ಗ್ರಾಮದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸಂಕಲ್ಪ ಹೊಂದಿದ್ದು, ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಎಲ್ಲ ಕೆಳವರ್ಗದ ಜನರಿಗೆ ರಕ್ಷಣೆ ನೀಡುವ ಕೆಲಸ ಮಾಡಲಾಗುತ್ತಿದೆ. ಮೈತ್ರಿ ಸರ್ಕಾರದ ಮೇಲೆ ರಾಜ್ಯದ ಜನರು ನಂಬಿಕೆಇಡಬೇಕು. ಸರ್ಕಾರ ಸುಭದ್ರವಾಗಿ ಆಡಳಿತ ನೀಡಲಿದೆ. ಆದರೆ, ಕೆಲವರು ಸರ್ಕಾರ ರಚನೆ ಆದಾಗಿನಿಂದ ಬೀಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಅವರ ಪ್ರಯತ್ನಗಳು ಫಲ ನೀಡುವುದಿಲ್ಲ ಎಂದರು.
ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮಕ್ಕೆ ಗ್ರಾಮ ವಾಸ್ತವ್ಯಕ್ಕೆ ಗುರುವಾರ ಆಗಮಿಸಿದ ಸಿಎಂ ಕುಮಾರಸ್ವಾಮಿ ಅವರನ್ನು ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಸಡಗರದಿಂದ ಸ್ವಾಗತಿಸಿದರು. ಮುಖ್ಯಮಂತ್ರಿ ಆಗಮಿಸುತ್ತಿದ್ದಂತೆ ಆನೆಯಿಂದ ಹೂವಿನ ಹಾರ ಹಾಕಿಸಿ, ವಿವಿಧ ಬಣ್ಣಗಳ ಹಸಿರು ತೋರಣ ಹಾಗೂ ಬಲೂನ್‌ಗಳಿಂದ ಅಲಂಕಾರ ಮಾಡಲಾಗಿದ್ದ ಎತ್ತಿನ ಬಂಡಿಯಲ್ಲಿ ವೇದಿಕೆವರೆಗೆ ಮೆರವಣಿಗೆ ಮಾಡಿದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಹಾರಾಷ್ಟ್ರ ಕಲಾವಿದರ ಭಜನೆ, ಡೊಳ್ಳು ಕುಣಿತ ಹಾಗೂ ಸಾಂಸ್ಕೃತಿಕ ನೃತ್ಯಗಳು ಜನರ ಗಮನ ಸೆಳೆದವು. ಗ್ರಾಮದ ಪ್ರಮುಖ ರಸ್ತೆಯಿಂದ ಆರಂಭವಾದ ಮೆರವಣಿಗೆಯುದ್ದಕ್ಕೂ ಕುಮಾರಸ್ವಾಮಿ ಎಲ್ಲರತ್ತ ಕೈ ಬೀಸಿ ನಮಸ್ಕರಿದರು.