ಶಿವಮೊಗ್ಗ: ಜಿಲ್ಲೆಯಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಎಂದು ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಸಹಕಾರಿ ಧುರೀಣ ಆರ್.ಎಂ. ಮಂಜುನಾಥ ಗೌಡ ಹೇಳಿದರು.
ಗುರುವಾರ ಸಂಜೆ ಕಾಂಗ್ರೆಸ್ ಕಚೇರಿಯಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಪಡೆದು ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಾತ್ಯತೀತ ಶಕ್ತಿಗಳು ಒಟ್ಟುಗೂಡಬೇಕಾಗಿದೆ.
ಬದಲಾದ ಪರಿಸ್ಥಿಯಲ್ಲಿ ಕಾಂಗ್ರೆಸ್ಸಿನ ತತ್ವ- ಸಿದ್ಧಾಂತಗಳನ್ನು ಒಪ್ಪಿಕೊಂಡು ಯಾವ ಷರತ್ತು ಇಲ್ಲದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಈಗಾಗಲೇ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷವನ್ನು ಸೇರಿಯಾಗಿದೆ. ಇಂದು ಪಕ್ಷದ ಪ್ರಾಥಮಿಕ ಸದಸ್ಯತ್ವವವನ್ನು ನಾವೆಲ್ಲರೂ ಪಡೆದಿದ್ದೇವೆ. ಸದ್ಯಕ್ಕೆ ತೀರ್ಥಹಳ್ಳಿಯಲ್ಲಿ ಪಪಂ ಚುನಾವಣೆ ಮತ್ತು ಭದ್ರಾವತಿಯಲ್ಲಿ ನಗರಸಭೆ ಚುನಾವಣೆ ನಡೆಯಲಿದ್ದು, ಈ 2 ಕಡೆಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾವು ಯಾವ ಷರತ್ತು ಇಲ್ಲದೆ ಪಕ್ಷಕ್ಕೆ ಸೇರಿದ್ದೇನೆ. ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ನಾನು ವಿಧಾನ ಪರಿಷತ್ ಆಕಾಂಕ್ಷಿಯೂ ಅಲ್ಲ ಅಥವಾ ಚುನಾವಣೆಯಲ್ಲಿ ಸ್ಪ ರ್ಧಿಸುವ ಬೇಡಿಕೆಯನ್ನು ಇಟ್ಟಿಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಸಹಕಾರ ಕ್ಷೇತ್ರದ ಸಹಕಾರದೊಂದಿಗೆ ಕಾಂಗ್ರೆಸ್ ಅನ್ನು ಕಟ್ಟುವುದು ನನ್ನ ಗುರಿಯೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಇದ್ದರು.
ಕಾರ್ಯಕ್ರಮದಲ್ಲಿ ಕೆ.ಪಿ. ದುಗ್ಗಪ್ಪ ಗೌಡ, ಕೆ.ಲ್ಲಾ ಜಗದೀಶ್ವರ್, ಶಂಕರಘಟ್ಟ ಎಂ. ರಮೇಶ್, ಟಿ.ಎಲ್ ಸುಂದರೇಶ್, ಪಿ. ಕರಿಯಪ್ಪ, ಬಿ.ಆರ್. ರಾಘವೇಂದ್ರ ಶೆಟ್ಟಿ, ಸೈಯದ್ ಯಾಸೀನ್, ರತ್ನಾಕರ ಶೆಟ್ಟಿ, ಟಿ.ಎನ್. ಹರೀಶ್, ರಾಘವೇಂದ್ರ ವಿ. ಶೆಟ್ಟಿ, ಅಶ್ವತ್ಥಗೌಡ, ನಾಗರಾಜು, ರಾಮು ಮುಂತಾದವರು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವ ಪಡೆದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಎಸ್.ಚಂದ್ರ ಭೂಪಾಲ್ ಸ್ವಾಗತಿಸಿದರು. ಮುಖಂಡರಾದ ಎಲ್ ರಾಮೇಗೌಡ, ವೈ.ಎಚ್. ನಾಗರಾಜ ಎಸ್. ರವಿಕುಮಾರ್, ಜಿ. ಪಲ್ಲವಿ, ಎಂ.ಕೆ. ಪ್ರಮೋದ್, ಪ್ರವೀಣ, ಸೌಗಂಧಿಕ ಮತ್ತಿತರರು ಇದ್ದರು.