Advertisement
ಒಂದೆಡೆ ಮಬ್ಬುಗತ್ತಲು, ಮತ್ತೂಂದೆಡೆ ಚಳಿ. ಇದರ ನಡುವೆ ದೇವರ ದರ್ಶನ ಪಡೆಯಲು ಕಿಲೋಮೀಟರ್ ಗಟ್ಟಲೆ ಸಾಲು. ಇದ್ಯಾವುದನ್ನು ಲೆಕ್ಕಿಸದ ಅಸಂಖ್ಯಾತ ಭಕ್ತ ಸಮೂಹ ಮುಂಜಾನೆ 3 ಗಂಟೆಯಿಂದಲೇ ದೇವರ ದರ್ಶನ ಪಡೆಯಲು ಮುಂದಾಗಿದ್ದರು. ಅಸಂಖ್ಯ ಭಕ್ತರು ದೇವಸ್ಥಾನಕ್ಕೆ ಆಗಮಿಸುವ ನಿರೀಕ್ಷೆ ಇದ್ದ ಹಿನ್ನೆಲೆಯಲ್ಲಿ ನಗರದ ದೇವಾಲಯಗಳಲ್ಲಿ ಭಕ್ತರ ಸುಗಮ ದರ್ಶನಕ್ಕಾಗಿ ಸಕಲ ವ್ಯವಸ್ಥೆ ಕಲ್ಪಿಸಲಾಗಿತ್ತು.
Related Articles
Advertisement
ಒಂದೆಡೆ ಪುರೋಹಿತರ ಮಂತ್ರ ಘೋಷಗಳು ಮತ್ತೂಂದೆಡೆ ಭಕ್ತರ ಸಾಲಿನಿಂದ ವೆಂಕಟೇಶ್ವರನ ಭಜನೆ ಕೇಳಿಬರುತ್ತಿತ್ತು. ಬಿಟಿಎಂ ಲೇಔಟ್, ಬನ್ನೆರುಘಟ ರಸ್ತೆ, ಜಯನಗರ, ಬನಶಂಕರಿ, ಹೊರಮಾವು, ಕುಮಾರ ಸ್ವಾಮಿ ಲೇಔಟ್, ಕೋಣನಕುಂಟೆ, ಪುಟ್ಟೇನಹಳ್ಳಿ ಸೇರಿ ವಿವಿಧ ಭಾಗಗಳ ನಿವಾಸಿಗಳು ನಸುಕಿನಿಂದಲೇ ದರ್ಶನಕ್ಕೆ ನಿಂತಿದ್ದಿ, 60 ಸಾವಿರ ಭಕ್ತರು ದರ್ಶನ ಪಡೆದಿರುವುದಾಗಿ ಆಡಳಿತ ಮಂಡಳಿ ತಿಳಿಸಿದೆ.
ಭಕ್ತರು ಸೆಲ್ಫಿಯಲ್ಲಿ ಬ್ಯುಸಿ: ರಾಜಾಜಿನಗರದ ಇಸ್ಕಾನ್ ದೇವಾಲಯದಲ್ಲಿ ವೈಕುಂಠ ಏಕಾದಶಿಯ ಶುಕ್ರವಾರ ನಸುಕಿನ 3 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ವಿಶೇಷ ಪೂಜೆಗಳು ನೆರವೇರಿದವು. ಬೆಳಗ್ಗೆ 5 ಗಂಟೆಗೆ ವೈಕುಂಠ ದ್ವಾರಕ್ಕೆ ಶ್ರೀಲಕ್ಷಿನಾರಾಯಣ ಅಲಂಕಾರದಲ್ಲಿ ಶ್ರೀರಾಧಾ ಕೃಷ್ಣ ಚಂದ್ರರ ಪಲ್ಲಕ್ಕಿ ಉತ್ಸವ, ವೈಕುಂಠ ದ್ವಾರ ಪೂಜೆ,
ಕಲ್ಯಾಣೋತ್ಸವದ ಜತೆಗೆ ತೋಮಾಲೆ ಸೇವೆ, ಲಕ್ಷಾರ್ಚನೆ ಸೇರಿ ಹಲವು ಪೂಜಾ ವಿಧಿಗಳು ನೆರವೇರಿದವು. ವೈಕುಂಠ ದ್ವಾರ ಹಾಗೂ ದೇವಾಲಯದ ಹೊರಾಂಗಣದಲ್ಲಿ ಸೆಲ್ಪಿ ತೆಗೆದುಕೊಳ್ಳುವಲ್ಲಿ ಭಕ್ತರು ಬ್ಯುಸಿಯಾಗಿದ್ದರು. ಇದೇ ವೇಳೆ ಭಕ್ತರಿಗೆ 10 ಟನ್ ಸಕ್ಕರೆ ಪೊಂಗಲ್ ಮತ್ತು 1 ಲಕ್ಷ ಲಡ್ಡು ಪ್ರಸಾದ ವಿತರಿಸಲಾಯಿತು.
ಮಲ್ಲೇಶ್ವರದಲ್ಲಿ ಕಲ್ಯಾಣೋತ್ಸವ: ಮಲ್ಲೇಶ್ವರದ ಶ್ರೀ ಪಾಂಡುರಂಗ ವಿಷ್ಣುಸಹಸ್ರಾನಾಮ ಮಂಡಳಿಯಿಂದ ಮಲ್ಲೇಶ್ವರ ಆಟದ ಮೈದಾನದ ಎದುರು ಶ್ರೀನಿವಾಸ ಕಲ್ಯಾಣೋತ್ಸವದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಶುಕ್ರವಾರ ಮುಂಜಾನೆ 5 ಗಂಟೆೆಯಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ಆರಂಭವಾಗಿದ್ದು, ಶನಿವಾರ ಬೆಳಗ್ಗೆ 8 ಗಂಟೆವರೆಗೂ ನಡೆಯಲಿದೆ.
ರಾಜಾಜಿನಗರದ 5ನೇ ಬ್ಲಾಕ್‌ನ, ಶ್ರೀ ಕೈಲಾಸ ವೈಕುಂಠ ಮಹಾಕ್ಷೇತ್ರ, ಮಹಾಲಕ್ಷಿಪುರದ ಶ್ರೀ ಶ್ರೀನಿವಾಸ ದೇವಸ್ಥಾನ, ಜಯಮಹಲ್ ಬಡಾವಣೆಯ ಬಂಡೆ ಶ್ರೀ ಸತ್ಯ ಆಂಜನೇಯಸ್ವಾಮಿ ದೇವಸ್ಥಾನ, ಮಾಗಡಿ ರಸ್ತೆಯ ಶ್ರೀವಿನಾಯಕ ಶ್ರೀ ವೆಂಕಟೇಶ್ವರ ದೇವಸ್ಥಾನ ಸೇರಿದಂತೆ ನಗರದ ಎಲ್ಲ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಸಂಭ್ರಮ ಮುಗಿಲು ಮುಟ್ಟಿತ್ತು.