ನಿರ್ದೇಶಕ ರಘು ಶಿವಮೊಗ್ಗ ನಿರ್ದೇಶನದ “ಚೂರಿಕಟ್ಟೆ’ ಚಿತ್ರದ ಟೀಸರ್ ಇತ್ತೀ ಬಿಡುಗಡೆಯಾಗಿತ್ತು. ಈಗ ಹಾಡುಗಳ ಬಿಡುಗಡೆ ಸರದಿ. ಹೌದು, ನಿರ್ದೇಶಕ ಸುನಿ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದಕ್ಕೂ ಮುನ್ನ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ತೋರಿಸಲಾಯಿತು. “ಚೂರಿಕಟ್ಟೆ’ ಪೊಲೀಸ್, ಟಂಬರ್ ಮಾಫಿಯಾ ಕುರಿತಾದ ಕಥೆ. ಹಾಗಾಗಿ, ಹಾಡುಗಳನ್ನು ಕೂಡ ಪೊಲೀಸ್ ಆಧಿಕಾರಿಯಿಂದ ಬಿಡುಗಡೆ ಮಾಡಿಸುವ ಯೋಚನೆ ಚಿತ್ರತಂಡಕ್ಕಿತ್ತು. ಅಂದು ರಾಷ್ಟ್ರಪತಿ ಪದಕ ಪಡೆದಿರುವ ಎಎಸ್‌ಐ ಕರಿಯಣ್ಣ ಮುಖ್ಯ ಅತಿಥಿಯಾಗಿದ್ದರು. ಸುನಿ ಅವರ ತಂದೆ ಕೂಡ ಪೊಲೀಸ್ ಪೇದೆಯಾಗಿದ್ದವರು. ಹಾಗಾಗಿ ಅವರಿಬ್ಬರಿಂದ ಆಡಿಯೋ ಸಿಡಿ ಬಿಡುಗಡೆ ಮಾಡಿಸುವ ಯೋಚನೆ ಅಂದು ಫಲಿಸಿತು.
ಆಡಿಯೋ ಸಿಡಿ ಬಿಡುಗಡೆ ಮಾಡಿದ ಸುನಿ, “ಇದೇ ಜಾಗದಲ್ಲಿ “ಸಿಂಪಲ್ಲಾಗೊಂದ್ ಲವ್‌ಸ್ಟೋರಿ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿತ್ತು. ಈಗ “ಚೂರಿಕಟ್ಟೆ’ ಚಿತ್ರದ ಹಾಡು ಹೊರಬಂದಿದೆ. ಚಿತ್ರದ ಟ್ರೇಲರ್ ನೋಡಿದರೆ, ಸಿನಿಮಾ ನೋಡುವಂತಹ ಸಿನಿಮಾ ಎಂದೆನಿಸಿದೆ. ಎಲ್ಲರಿಗೂ ಒಳ್ಳೆಯದಾಗಲಿ’ ಅಂದರು ಸುನಿ.
ನಿರ್ದೇಶಕ ರಘು ಶಿವಮೊಗ್ಗ, “ಇಂಥದ್ದೊಂದು ಚಿತ್ರ ಮಾಡೋಕೆ ಕಾರಣ ನಿರ್ಮಾಪಕರಾದ ನಯಾಜುದ್ದೀನ್ ಮತ್ತು ತುಳಸಿರಾಮುಡು. ಇನ್ನು, ಗೆಳೆಯರಾದ ಕೈಲಾಶ್ ಕಥೆ ಬರೆದರೆ, ಅರವಿಂದ್ ಚಿತ್ರಕಥೆ ಬರೆದಿದ್ದಾರೆ. ಪ್ರವೀಣ್ ಮತ್ತು ಪ್ರೇರಣಾ ಚಿತ್ರದ ನಾಯಕ, ನಾಯಕಿಯಾಗಿದ್ದಾರೆ. ಅಚ್ಯುತ್, ದತ್ತಣ್ಣ, ಮಂಜುನಾಥ್ ಹೆಗಡೆ,ಬಾಲಾಜಿ ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಶುರುವಾದ “ಚೂರಿಕಟ್ಟೆ’ ಈಗ ಬಿಡುಗಡೆಗೆ ರೆಡಿಯಾಗಿದೆ. ಮಲೆನಾಡ ಭಾಗದಲ್ಲಿ ಸುಮಾರು 30 ದಿನಗಳ ಕಾಲ ಚಿತ್ರೀಕರಣವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಗಡಿ ಭಾಗದ ಕಥೆ ಇದು’ ಎಂದು ವಿವರಿಸಿದರು ಅವರು.
ಚಿತ್ರಕ್ಕೆ ಸಂಗೀತ ನೀಡಿರುವ ವಾಸುಕಿ ವೈಭವ್, “ಇಲ್ಲಿ ಇರುವ ಹಾಡುಗಳು ಕಥೆಗೆ ಪೂರಕವಾಗಿವೆ. ಹಾಡುಗಳು ಗುನುಗುವಂತೆ ಮಾಡಿದರೆ, ನಿಮ್ಮ ಗೆಳೆಯರಿಗೆ ತಿಳಿಸಿ, ಚಿತ್ರ ನೋಡುವಂತೆ ಮನವಿ ಮಾಡಿ ಅಂದರು ವಾಸುಕಿ ವೈಭವ್. ಹಾಡುಗಳನ್ನು ಹೊರತಂದ ಖುಷಿಯಲ್ಲಿದ್ದ ನಾಯಕ ಪ್ರವೀಣ್, ನಾಯಕಿ ಪ್ರೇರಣಾ ಚಿತ್ರದ ಅನುಭವ ಹಂಚಿಕೊಂಡರು. ಅಚ್ಯುತಕುಮಾರ್, ಮಂಜುನಾಥ ಹೆಗಡೆ, ನಿರ್ಮಾಪಕರಾದ ಎಸ್.ನಯಾಜುದ್ದೀನ್ ಇತರರು “ಚೂರಿಕಟ್ಟೆ’ ಬಗ್ಗೆ ಮಾತನಾಡುವ ಹೊತ್ತಿಗೆ ಕಾರ್ಯಕ್ರಮಕ್ಕೂ ತೆರೆ ಬಿತ್ತು.