Advertisement
ಜೂನ್ 10ರಂದು ರಾತ್ರಿ ಜರಗಿದ್ದ ಈ ಕಾರ್ಯಕ್ರಮದಲ್ಲಿ ಸತೀಶ್ ಶೆಟ್ಟಿ ಪಟ್ಲ, ರವಿಚಂದ್ರ ಕನ್ನಡಿ ಕಟ್ಟೆ, ರಾಘವೇಂದ್ರ ಆಚಾರ್ಯ ಜನ್ಸಾಲೆ ಮತ್ತು ಕಾವ್ಯಶ್ರೀ ಅಜೇರು ಅವರು ತೆಂಕು ಬಡಗಿನ ಹಾಡುಗಾರಿಕೆಯನ್ನು ನಡೆಸಿಕೊಟ್ಟರು. ಇವರಿಗೆ ಹಿಮ್ಮೇಳದಲ್ಲಿ ಜತೆಯಾದವರು ಮದ್ದಳೆಯಲ್ಲಿ ಸುನಿಲ್ ಭಂಡಾರಿ, ಕೃಷ್ಣ ಪ್ರಕಾಶ ಉಳಿತ್ತಾಯ, ಚೈತನ್ಯ ಕೃಷ್ಣ ಪದ್ಯಾಣ, ಚೆಂಡೆಯಲ್ಲಿ ಪದ್ಮನಾಭ ಉಪಾಧ್ಯಾಯ, ಸೃಜನ್ ಹಾಲಾಡಿ, ಚಕ್ರತಾಳದಲ್ಲಿ ರಾಜೇಂದ್ರ ಕೃಷ್ಣ ಮುಂತಾದವರು.
Related Articles
Advertisement
ಕೃಷ್ಣ ಹರೇ ಪಾಹಿಮಾ, ಸಿರಿ ಮುಡಿಯ ಸುಳಿಗುರುಳು, ಕೇಳೆ ಗೋಪಿ ರಂಗ ನಾಟವಾ, ಸೃಷ್ಟಿ ಸ್ಥಿತಿ ಲಯಕೆ, ಕರವ ಮುಗಿವೆ ಮುಂತಾದ ಹಾಡುಗಳು ರವಿ ಚಂದ್ರ ಕನ್ನಡಿ ಕಟ್ಟೆ ಅವರಿಂದ ಮೂಡಿ ಬಂದವು. ವೈಜಯಂತಿ ಮಾಲೆ, ಕರುಣಿಸು ಕಂಜದಳ ನೇತ್ರ, ಕಾಣದೆ ನಿಲಲಾರೆನು ಗೋಪಾಲ ಕೃಷ್ಣನ, ಸರಸಿ ಜೋದ್ಭವ… ಮುಂತಾದ ಹಾಡುಗಳನ್ನು ರಾಘವೇಂದ್ರ ಆಚಾರ್ಯ ಹಾಡಿದರು.ಕರ್ಣ ಕುಂಡಲ ಕಪೋಲ, ಕಂಸ ಧೈತನು ಕಡುಗೋಪಿ, ರಂಗ ಬಂದನೇ ಪಾಂಡು ರಂಗ ಬಂದನೇ, ನಿಲದಂತ ಹಾಡುಗಳು ಕಾವ್ಯಶ್ರೀ ಕಂಠದಿಂದ ಮೂಡಿ ಬಂದವು.
ಈಗಿನ ತಲೆಮಾರಿನ ಪ್ರಾತಿ ನಿಧಿತ್ಯವನ್ನು ಹೊಂದಿರಬೇಕು ಎಂಬ ಪರ್ಯಾಯ ಶ್ರೀಗಳ ಸೂಚನೆ ಹಿನ್ನೆಲೆಯಲ್ಲಿ ಭಾಗವತರನ್ನು ಆರಿಸಲಾಗಿತ್ತು ಎಂಬುದು ಸಹಿತ ಹಲವಾರು ಪ್ರಮುಖ ವಿಷಯಗಳನ್ನು ವಾಸುದೇವ ರಂಗಾ ಭಟ್ಟರು ಹೇಳಿದ್ದು, ಸುಮಾರು ಎರಡೂವರೆ ತಾಸುಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಸೇರಿದ್ದ ಶ್ರೋತೃಗಳಲ್ಲಿ ಪ್ರತಿ ಬಿಂಬಿತವಾಗಿತ್ತು. ಪ್ರಸ್ತುತಗೊಂಡ ಹೆಚ್ಚಿನ ಹಾಡುಗಳು ಅಪರೂಪದ್ದವುಗಳಾದ್ದರಿಂದ ಈ ಕಾರ್ಯಕ್ರಮದ ಘನತೆ ಮತ್ತು ಮಹತ್ವ ದುಪ್ಪಟ್ಟಾಗಿತ್ತು. ಹಲವಾರು ಪ್ರಸಂಗಗಳಿಂದ ಆಯ್ದು ಸಂಗ್ರಹಿಸಿದ ಶ್ರೀಕೃಷ್ಣನ ಕಥಾ ಸಾರವಿರುವ ಹಾಡುಗಳು ಶ್ರೋತೃಗಳಿಗೆ ಕೃಷ್ಣ ಪರ ಮಾತ್ಮನ ಜನ್ಮ, ಬಾಲಲೀಲೆಯನ್ನು ಸುಂದರವಾಗಿ ಕಟ್ಟಿ ಕೊಟ್ಟಿತು. ಚಂದ್ರಾವಳಿ ವಿಲಾಸದ ಅಹಹಾ ಚಂದ್ರಾವಳಿಯೇ ಹಾಡು ಸದ್ಯ ಕೇಳ ಸಿಗುವುದೇ ಕಷ್ಟ ಎಂಬಂತಿದೆ. ಕೆಲವು ಹಾಡುಗಳನ್ನು ನಾಲ್ವರು ಭಾಗವತರು ಹಂಚಿ ಹಾಡಿದ್ದರು. ಒಂದು ಸುಂದರ ರಾತ್ರಿಯ ಹೊತ್ತು ಪವಿತ್ರ ಶ್ರೀಕೃಷ್ಣ ಮಠದ ವಠಾರದಲ್ಲಿ ಬಾಲಕೃಷ್ಣನ ಸಾಹಸಗಾಥೆಯು ಹಾಡಾಗಿ ಹರಿದು ಬಂದು ಭಕ್ತಿಯನ್ನು ಹೆಚ್ಚಿಸುವುದರೊಂದಿಗೆ ಅದಕ್ಕೆ ಸಂಗೀತ ಮತ್ತು ಯಕ್ಷಗಾನ ಮೆರುಗೂ ಸಿಕ್ಕಿರುವುದು ವಿಶೇಷ. ಪ್ರತಿಯೋರ್ವ ಕಲಾವಿದರೂ ಪ್ರ ಬುದ್ಧ ಮತ್ತು ಖ್ಯಾತರಾಗಿದ್ದುದರಿಂದ ಕಾರ್ಯಕ್ರಮದ ಗುಣಮಟ್ಟ ಅತ್ಯುಚ್ಚವಾಗಿತ್ತು.
ಪುತ್ತಿಗೆ ಪದ್ಮನಾಭ ರೈ