Advertisement

ವೈಭವಪೂರ್ಣ ರಾಯರ ಆರಾಧನಾ ಮಹೋತ್ಸವ

12:33 PM Aug 29, 2018 | |

ಬೆಂಗಳೂರು: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 347ನೇ ಆರಾಧನಾ ಮಹೋತ್ಸವವನ್ನು ನಗರದಲ್ಲಿ ಮಂಗಳವಾರ ಭಕ್ತಿಭಾವದಿಂದ ಆಚರಿಸಲಾಯಿತು. ಮಧ್ಯಾರಾಧನೆ ಅಂಗವಾಗಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು.

Advertisement

ನಗರದ ನಂಜನಗೂಡು ರಾಘವೇಂದ್ರಸ್ವಾಮಿ ಮಠ, ಶ್ರೀನಿವಾಸ ಶ್ರೀರಾಮಾಂಜನೇಯ ಶ್ರೀರಾಘವೇಂದ್ರಸ್ವಾಮಿ ಮಠ, ಶ್ರೀರಾಘವೇಂದ್ರಸ್ವಾಮಿಗಳ ಬೃಂದಾವನ ಸನ್ನಿಧಿ ಹೀಗೆ ನಗರದಲ್ಲಿರುವ ಹಲವು ರಾಘವೇಂದ್ರಸ್ವಾಮಿ ಮಠಗಳಲ್ಲಿ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಸತ್ಯನಾರಾಯಣ ಪೂಜೆ, ಶ್ರೀರಾಘವೇಂದ್ರ ಅಷ್ಟೋತ್ತರ ಪಠಣ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನೆರವೇರಿದವು.

ಕೆಲವು ದೇಗುಲ ಮತ್ತು ಮಠಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದಾಸವಾಣಿ, ಹರಿನಾಮ ಸಂಕೀರ್ತನೆ, ಭಜನೆ, ಸಂಗೀತ ರೂಪಕ, ಯಕ್ಷಗಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ, ಉತ್ಸವವೂ ನಡೆಯಿತು.

ಸಂಜಯನಗರದಲ್ಲಿರುವ ರಾಘವೇಂದ್ರ ಸೇವಾ ಸಮಿತಿಯಲ್ಲಿ ವಿಶೇಷ ಫ‌ಲಾಭಿಷೇಕ ನಡೆಯಿತು. ರಾಜಾಜಿನಗರದಲ್ಲಿರುವ ಶ್ರೀವ್ಯಾಸರಾಜ ಮಠದಲ್ಲಿ (ಸೋಸಲೆ)ಕ್ಷೀರಾಭಿಷೇಕ ಮತ್ತು ಪೂಜೆ ಸಲ್ಲಿಸಲಾಯಿತು. ಶೇಷಾದ್ರಿಪುರದಲ್ಲಿರುವ ನಂಜನಗೂಡು ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀಸತ್ಯನಾರಾಯಣಸ್ವಾಮಿ ಪೂಜೆ ನೆರವೇರಿಸಲಾಯಿತು. ಜಿಗಣಿಯಲ್ಲಿರುವ ನಿರ್ಮಾಣ್‌ ದೇವಾಲಯಗಳ ವಿಶ್ವಸ್ಥ ಮಂಡಳಿ ವತಿಯಿಂದ ರಾಘವೇಂದ್ರ ಸ್ವಾಮಿಗೆ ವಿರಜಾ ಮಂತ್ರ ಪೂಜೆ ನಡೆಯಿತು.

ಶಾಕಾಂಬರಿನಗರದಲ್ಲಿರುವ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀಸುಧಾ ಭಜನಾ ಮಂಡಲಿಯಿಂದ ಹರಿನಾಮ ಸಂಕೀರ್ತನೆ,ಅಮರಜ್ಯೋತಿನಗರದಲ್ಲಿರುವ ಶ್ರೀರಾಘವೇಂದ್ರ ಮೃತ್ತಿಕಾ ಬೃಂದಾವನ ಸನ್ನಿಧಾನದಲ್ಲಿ ಶ್ರೀಪಾದರಾಜ ಭಜನಾ ಮಂಡಳಿಯಿಂದ ದೇವರನಾಮ ಗಾಯನ, ಮಾರುತಿ ಸೇವಾ ನಗರದಲ್ಲಿರುವ ನಂಜನಗೂಡು ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ಯಕ್ಷ ಕಲಾರಂಗ ತಂಡದಿಂದ ಭೀಷ್ಮ ವಿಜಯ ಯಕ್ಷಗಾನ ಪ್ರದರ್ಶನ ನಡೆಯಿತು.

Advertisement

ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ಬೆಳಗ್ಗೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಸಂಜೆ ಗೀತಾ ಹೆಬ್ಳೀಕರ್‌ ಮತ್ತು ವೃಂದ ನಡೆಸಿಕೊಟ್ಟ ಹಿಂದೂಸ್ಥಾನಿ ಗಾಯನ ಕಾರ್ಯಕ್ರಮ ಭಕ್ತರ ಮನಸೂರೆಗೊಂಡಿತು.

ಉತ್ತರಾರಾಧನೆ: ಬುಧವಾರ ಉತ್ತರಾರಾಧನೆ ನಿಮಿತ್ತ ಬುಧವಾರ ನಗರದಲ್ಲಿರುವ ವಿವಿಧ ಶ್ರೀರಾಘವೇಂದ್ರಸ್ವಾಮಿಗಳ ಮಠ ಹಾಗೂ ದೇವಾಲಯಗಳಲ್ಲಿ ರಥೋತ್ಸವ,  ಫ‌ಲ ಪಂಚಾಮೃತಾಭಿಷೇಕ, ಗೋಪೂಜೆ, ರಾಯರ ಉತ್ಸವ, ಮೆರವಣಿಗೆ ಸೇರಿದಂತೆ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.

ಪ್ರಕಾಶನಗರದಲ್ಲಿರುವ ಶ್ರೀರಾಘವೇಂದ್ರಸ್ವಾಮಿಗಳವರ ಸನ್ನಿಧಿಯಲ್ಲಿ ಬನಶಂಕರಿಯ ಸ್ವಾಮಿ ವಿವೇಕಾನಂದ ಶೈಕ್ಷಣಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಶ್ರೀಹನುಮದ್ವಿಲಾಸ ಬೊಂಬೆಯಾಟ ಹಮ್ಮಿಕೊಳ್ಳಲಾಗಿದೆ. ಬನಶಂಕರಿ ಎರಡನೇ ಹಂತದಲ್ಲಿರುವ ದೇವಗಿರಿ ಶ್ರೀ ಗುರು ಸೇವಾ ಸಮಿತಿಯಲ್ಲಿ ವಿದುಷಿ ಕನಕಾಸ್ವಾಮಿ ನಿರ್ದೇಶನದಲ್ಲಿ ಗುರುರಾಜ ವೈಭವ ಸಂಗೀತ ರೂಪಕ ನಡೆಯಲಿದೆ. 

ರಾಯರಲ್ಲಿ ಭಾಷಾ ವೈವಿಧ್ಯತೆ – ಮಹೇಶ್‌ ಜೋಶಿ: ಕುಮಾರಪಾರ್ಕ್‌ ಪಶ್ಚಿಮ ವಲಯದಲ್ಲಿನ ಕೋದಂಡರಾಮ ವಿದ್ಯಾರ್ಥಿ ಸೇವಾ ಸಂಘದಲ್ಲಿ ಮಂಗಳವಾರ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯಿಂದ ಹಮ್ಮಿಕೊಳ್ಳಲಾದ ರಾಯರ ಆರಾಧನಾ ಮಹೋತ್ಸವದಲ್ಲಿ ಬೃಂದಾವನ ನಿರ್ಮಿಸಿ ಶ್ರೀ ಗುರುರಾಯರಿಗೆ ಕನಕಾಭಿಷೇಕ ನೆರವೇರಿಸಲಾಯಿತು.

ಕೌಸಲ್ಯಮೂರ್ತಿ ಮತ್ತು ತಂಡ ಹಾಗೂ ಸ್ತುತಿ ವಾಹಿನಿ ಸಂಸ್ಥೆಯ ಕಲಾವಿದರಿಂದ ಭಕ್ತಿ ಸಂಗೀತ ಹಾಗೂ ವಿದ್ವಾನ್‌ ಶ್ರೀಧರ್‌ ಸಾಗರ್‌ ಮತ್ತು ತಂಡದಿಂದ ನಡೆಸಿಕೊಟ್ಟ ಸ್ಯಾಕ್ಸ್ಯೋಫೋನ್‌ ವಾದನ ಕೇಳುಗರನ್ನು ಆಕರ್ಷಿಸಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನಾಡೋಜ ಡಾ.ಮಹೇಶ್‌ ಜೋಶಿ ಮಾತನಾಡಿ, ತಮಿಳುನಾಡಿನ ಭುವನಗಿರಿಯಲ್ಲಿ ಜನಿಸಿದ ಗುರುರಾಯರ ಆಡು ಭಾಷೆ ಕನ್ನಡ. ಅವರು ಸಂಸ್ಕೃತದಲ್ಲಿ ಗ್ರಂಥಗಳನ್ನು ರಚಿಸಿದ್ದರು.

ಬಿಜಾಪುರದ ಸುಲ್ತಾನದೊಂದಿಗೆ ಉರ್ದುವಿನಲ್ಲಿ  ಹಾಗೂ ಸರ್‌. ಮನ್ರೊà ಅವರೊಂದಿಗೆ ಇಂಗ್ಲಿಷ್‌ ಭಾಷೆಯಲ್ಲಿ ಸಂಭಾಷಣೆ ನಡೆಸುತ್ತಿದ್ದರು. ತೆಲುಗು ನಾಡಿನಲ್ಲಿ ಬೃಂದಾವನಸ್ತರಾದರು. ಹೀಗೆ ಭಾಷಾ ಭಾವೈಕ್ಯತೆ ಯೊಂದಿಗೆ ಸರ್ವಧರ್ಮ ಸಹಿಷ್ಣುಗಳಾದ ರಾಯರು ಮಾನವೀಯತೆ ಮೆರೆದವರು ಎಂದು ಬಣ್ಣಿಸಿದರು.

ಡಾ. ವಿದ್ಯಾವಾಚಸ್ಪತಿ ಅರಳುಮಲ್ಲಿಗೆ ಪಾರ್ಥಸಾರಥಿ, ಶ್ರೀ ಗುರು ರಾಘವೇಂದ್ರ ಕ್ರೆಡಿಟ್‌ ಕೋ-ಆಪರೇಟಿವ್‌ ಬ್ಯಾಂಕ್‌ನ ಸಂಸ್ಥಾಪಕ ಅಧ್ಯಕ್ಷ ಡಾ.ಕೆ. ರಾಮಕೃಷ್ಣ, ಗೀತ ರಚನಕಾರ ಕೆ. ಕಲ್ಯಾಣ್‌, ಸಂಸ್ಥೆ ಅಧ್ಯಕ್ಷ ಡಾ. ಎಚ್‌.ಎಲ್‌.ಎನ್‌. ರಾವ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next