Advertisement

ಕಬ್ಬಳಿ ಬಸವೇಶ್ವರಸ್ವಾಮಿಯ ವೈಭವದ ರಥೋತ್ಸವ

09:31 PM Mar 10, 2020 | Lakshmi GovindaRaj |

ಚನ್ನರಾಯಪಟ್ಟಣ/ಹಿರೀಸಾವೆ: ತಾಲೂಕಿನ ಹಿರೀಸಾವೆ ಹೋಬಳಿಯ ಕಬ್ಬಳಿ ಗ್ರಾಮದಲ್ಲಿ ಬಸವೇಶ್ವರಸ್ವಾಮಿ ರಥೋತ್ಸವ ಸೋಮವಾರ ರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

Advertisement

ರಥೋತ್ಸವದ ಅಂಗವಾಗಿ ದೇವರ ಸನ್ನಿಧಿಯಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಆರಂಭಗೊಂಡವು ಮೊದಲಿಗೆ ಗಂಗಾಪೂಜೆ ಹಾಗೂ ವಿಘ್ನೇಶ್ವರ ಪೂಜೆ ಜರುಗಿತು. ದೇವಾಲಯಕ್ಕೆ ಹೂವಿನ ಚಪ್ಪರ ಹಾಕಲಾಗಿದ್ದು, ಬಸವೇಶ್ವರಸ್ವಾಮಿಯ ಮೂಲ ವಿಗ್ರಹಕ್ಕೆ ಜಲಾಭಿಷೇಕ, ರುದ್ರಾಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ ಮಾಡಿದ ಬಳಿಕ ವಿಶೇಷ ಪೂಜೆ ನಡೆಯಿತು.

ಅಡ್ಡಪಲ್ಲಕ್ಕಿ ಉತ್ಸವ: ಬಸವೇಶ್ವರಸ್ವಾಮಿಯ ಉತ್ಸವ ಮೂರ್ತಿಗೆ ಒಡವೆ-ವಸ್ತ್ರಗಳಿಂದ ಅಲಂಕಾರ ಮಾಡಿ ರಾತ್ರಿ 7 ಗಂಟೆ ಸುಮಾರಿನಲ್ಲಿ ಬೋರೆ ಮೇಲೆ ಇರುವ ಬಸವೇಶ್ವರಸ್ವಾಮಿ ಸನ್ನಿಧಿಯಿಂದ ಮಂಗಳವಾದ್ಯದೊಂದಿಗೆ ಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವದ ಮೂಲಕ ಭಕ್ತರು ಪ್ರಮುಖ ಬೀದಿಯಲ್ಲಿ ಹೊತ್ತು ಸಾಗಿ ಕಬ್ಬಳಿ ಗ್ರಾಮಕ್ಕೆ ಕರೆತಂದು ವಿವಿಧ ಬಗೆಯ ಪುಷ್ಪಗಳಿಂದ ಸಿಂಗರಿಸಿದ್ದ ರಥದ ಮೇಲೆ ಮೆರೆವ ಬಸವೇಶ್ವರಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ರಥಕ್ಕೆ ಚಾಲನೆ: ರಾತ್ರಿ 8 ಗಂಟೆಗೆ ಆದಿಚುಂಚನಗಿರಿ ಹಾಸನ ಶಾಖಾಮಠದ ಕಾರ್ಯದರ್ಶಿ ಶಂಭುನಾಥ ಸ್ವಾಮೀಜಿ ರಥದಲ್ಲಿ ಅಲಂಕೃತನಾಗಿದ್ದ ಬಸವೇಶ್ವರಸ್ವಾಮಿಗೆ ಪ್ರಥಮ ಪೂಜೆ ಸಲ್ಲಿಸುವ ಮೂಲಕ ವೈಭವದ ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ಸಾಂಪ್ರದಾಯದಂತೆ ಗ್ರಾಮದ ಹಿರಿಯರೊಬ್ಬರು ರಥದ ಎದುರಿನಲ್ಲಿ ನೆಡಲಾಗಿದ್ದ ಬಾಳೆಕಂದನ್ನು ವೀರಕತ್ತಿಯಿಂದ ಕತ್ತರಿಸುತ್ತಿದಂತೆಯೇ ಸಾವಿರಾರು ಭಕ್ತರು ಜೈಂಕಾರದೊಂದಿಗೆ ರಾಜಬೀದಿಯಲ್ಲಿ ರಥ ಎಳೆದರು. ನೆರೆದಿದ್ದ ಭಕ್ತರು ರಥದ ಮೇಲೆ ಬಾಳೆಹಣ್ಣು, ಹೂವು, ಬಿಲ್ವಪತ್ರೆ ಹಾಗೂ ದವನ ಎಸೆದರು.

ರಥಕ್ಕೆ ಈಡುಗಾಯಿ ಅರ್ಪಣೆ: ಗ್ರಾಮದ ರಾಜಬೀದಿಯಲ್ಲಿ ರಥೋತ್ಸವ ಮುಗಿದ ಬಳಿಕ ಭಕ್ತರು ರಥದ ಎರಡು ಕಡೆಯಲ್ಲಿರುವ ನಾಲ್ಕು ಕಲ್ಲಿನ ಚಕ್ರಗಳಿಗೆ ಈಡುಗಾಯಿ ಒಡೆಯುವ ಮೂಲಕ ತಮ್ಮ ಹರಕೆ ತೀರಿಸಿದರು.

Advertisement

ರಂಗಕುಣಿತ: ಫೆ.24 ರಂದು ರಾತ್ರಿ 9.30 ರಲ್ಲಿ ಬಸವೇಶ್ವರಸ್ವಾಮಿ ಮೆರೆಗ್ರಹ ಸನ್ನಿಧಿಯಲ್ಲಿ ಬಾಳೆಕಂಬವನ್ನು ಪ್ರತಿಷ್ಠಾಪಿಸುವ ಮೂಲ ರಂಗಕುಣಿತಕ್ಕೆ ಚಾಲನೆ ದೊರೆತಿದ್ದು ರಂಗಬೀದಿಯಲ್ಲಿ ಅಂದಿನಿಂದ ಪ್ರತಿನಿತ್ಯ ರಾತ್ರಿ ರಂಗಕುಣಿತ ಗ್ರಾಮದ ದೇವಾಲಯದ ಮುಂಭಾಗ ನಡೆಯುತಿತ್ತು. ಅಂತಿಮ ದಿನವಾದ ಮಾ.9 ಸೋಮವಾರ ರಾತ್ರಿ ರಥೋತ್ಸವದ ನಂತರ ಒಂದು ಗಂಟೆಗಳ ಕಾಲ ಮುಕ್ತಾಯದ ರಂಗಕುಣಿತವನ್ನು ಭಕ್ತರು ಕುಣಿದರು.

ರಥೋತ್ಸವಕ್ಕೆ ತಿಪಟೂರು, ನಾಗಮಂಗಲ, ತುರುವೇಕೆರೆ, ಅರಸೀಕೆರೆ, ಚನ್ನರಾಯಪಟ್ಟಣ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡು ಬಳಿಕ ಸನ್ನಿಧಿಯಲ್ಲಿ ಬಸವೇಶ್ವರಸ್ವಾಮಿಗೆ ಹಣ್ಣು, ಕಾಯಿ ಅರ್ಪಿಸಿ ಗಂಧ-ಕರ್ಪೂರ ಬೆಳಗಿಸಿ ದರ್ಶನ ಪಡೆದರು. ಉತ್ಸವ ಮುಗಿದ ಬಳಿಕ ಸ್ಥಳೀಯ ಕಲಾವಿದರಿಂದ ಶನಿ ಪ್ರಭಾವ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.

ಶ್ರೀಕ್ಷೇತ್ರ ಕಬ್ಬಳಿ ಮಠದ ಶಿವಪುತ್ರನಾಥ ಸ್ವಾಮಿಜಿ ಧಾರ್ಮಿಕ ಪೂಜಾ ಕೈಂಕರ್ಯವನ್ನು ನೆರವೇರಿಸಿದರು. ದಿಡಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್‌.ಆರ್‌.ರತ್ನರಾಜ್‌, ಕಬ್ಬಳಿ ಗ್ರಾಪಂ ಅಧ್ಯಕ್ಷೆ ಶಾರದಮ್ಮ, ಭಾರತದ ತೆಂಗು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕಬ್ಬಳಿ ರಂಗೇಗೌಡ, ಗುಡಿಗೌಡ ಪ್ರಕಾಶ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next