ಹುಬ್ಬಳ್ಳಿ: ಕೋಟ್ಯಂತರ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ, ಕಳೆದ 6 ತಿಂಗಳ ಹಿಂದೆ ಲೋಕಾರ್ಪಣೆಗೊಂಡ ನವೀಕೃತ ಇಂದಿರಾ ಗಾಜಿನಮನೆ ಉದ್ಯಾನವನ ಸರಿಯಾದ ನಿರ್ವಹಣೆ ಇಲ್ಲದೇ ಹಾಳಾಗುತ್ತಿದೆ.
ಉದ್ಯಾನವನದಲ್ಲಿ ಎಲ್ಲೆಂದರಲ್ಲೇ ಗಲೀಜು, ಕೊಳಚೆ ನೀರು, ಒಡೆದ ಪೈಪ್‌ಗ್ಳು, ಕಸದ ರಾಶಿ ಬಿದ್ದಿದ್ದು ಅಸಹ್ಯ ಎನಿಸಿದೆ.
ಎರಡು ಬಾರಿ ಅಭಿವೃದ್ಧಿ: ಇಂದಿರಾ ಗಾಜಿನ ಮನೆ ಉದ್ಯಾನವನವನ್ನು ಎರಡು ಬಾರಿ ಅಭಿವೃದ್ಧಿ ಪಡಿಸಲಾಗಿದೆ. ಈ ಹಿಂದೆ ಡಿ.ವಿ.ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ 2011ರಲ್ಲಿ ಲೋಕಾರ್ಪಣೆ ಮಾಡಲಾಗಿತ್ತು. ಅದಾದ ಹಲವು ವರ್ಷಗಳ ನಂತರ ಮತ್ತೇ ಸ್ಮಾರ್ಟ್‌ಸಿಟಿ ಯೋಜನೆಯಡಿ ಉದ್ಯಾನವನ್ನು ಸುಮಾರು 21 ಕೋಟಿ ರೂ.ಗೂ ಅಧಿಕ ಹಣದ ಅನುದಾನದಲ್ಲಿ ಮರು ನವೀಕರಣ ಮಾಡಲಾಯಿತು. ಆದರೆ ಸೂಕ್ತ ನಿರ್ವಹಣೆ ಇಲ್ಲದೇ ಸಂಪೂರ್ಣ ಹಾಳಾಗಿ ಹೋಗುತ್ತಿದೆ.
ಸ್ಥಗಿತಗೊಂಡಿರುವ ಪುಟಾಣಿ ರೈಲು: ಇಂದಿರಾ ಗಾಜಿನಮನೆ ಉದ್ಯಾನವನದಲ್ಲಿರುವ ಪುಟಾಣಿ ರೈಲನ್ನು ಏ.30ರಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಲೋಕಾರ್ಪಣೆಗೊಳಿಸಿದ್ದರು. ಉದ್ಘಾಟನೆ ದಿನವೇ ಹಳಿ ತಪ್ಪಿದ ಪುಟಾಣಿ ರೈಲು ಅಂದಿನಿಂದ ಸರಿಯಾಗಿ ಸಂಚರಿಸಿರುವ ಕುರಿತು ಸರಿಯಾದ ಮಾಹಿತಿಯೇ ಇಲ್ಲವಾಗಿದೆ. ಒಂದಿಲ್ಲೊಂದು ಕಾರಣದಿಂದ ಪುಟಾಣಿ ರೈಲು ನಿಂತಿರುವ ಜಾಗ ಬಿಟ್ಟು ಕದಲುತ್ತಿಲ್ಲ. ಇದೀಗ ಪುಟಾಣಿ ರೈಲಿಗೆ ತಾಡಪತ್ರಿ ಹೊದಿಸಿ ನಿಲ್ಲಿಸಲಾಗಿದೆ.
ಗಬ್ಬೆದ್ದು ನಾರುತ್ತಿರುವ ಉದ್ಯಾನವನ
ಇಲ್ಲಿನ ಇಂದಿರಾ ಗಾಜಿನ ಮನೆ ಉದ್ಯಾನವನದಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೇ ಶೌಚಾಲಯ ಪಕ್ಕದಲ್ಲಿಯೇ ಅಪಾರ ಪ್ರಮಾಣದ ಒಳಚರಂಡಿ ನೀರು ನಿಂತು ಇಡೀ ವಾತಾವರಣವನ್ನೇ ಹಾಳು ಮಾಡಿದೆ. ಇನ್ನು ಒಳಭಾಗದ ಶೌಚಾಲಯದಲ್ಲಿ ಹೋದರೆ ಅಲ್ಲಿ ಸರಿಯಾದ ನಲ್ಲಿಗಳಿಲ್ಲ, ಇದ್ದರೂ ಸರಿಯಾದ ವ್ಯವಸ್ಥೆ ಇಲ್ಲ. ಇನ್ನು ಈ ಹಿಂದೆ ಇದ್ದ ಶೌಚಾಲಯವೊಂದನ್ನು ಹಾಗೆ ಉಳಿಸಿಕೊಂಡಿದ್ದು, ಅದು ಕೂಡಾ ಸಂಪೂರ್ಣ ಹಾಳಾಗಿ ಹೋಗಿದೆ.
ಕಸದ ತೊಟ್ಟಿಯಾದ ಎರೆಹುಳು ಗೊಬ್ಬರದ ತೊಟ್ಟಿ
ಉದ್ಯಾನವನದಲ್ಲಿ ಎರೆಹುಳು ಗೊಬ್ಬರದ ತೊಟ್ಟಿ ನಿರ್ಮಿಸಿ ಅದರಲ್ಲಿ ಎರೆಹುಳುವಿನ ಗೊಬ್ಬರ ತಯಾರಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಇದೀಗ ಎರೆಹುಳು ಗೊಬ್ಬರದ ತೊಟ್ಟಿ ಇದೀಗ ಕಸ ಹಾಕುವ ತೊಟ್ಟಿಯಾಗಿ ಮಾರ್ಪಾಡುಗೊಂಡಿರುವುದು ವಿಪರ್ಯಸವೇ ಸರಿ.
ಉದ್ಯಾನವನ ಒಂದು ಬಾರಿ ಅಭಿವೃದ್ಧಿ ಮಾಡಿದ ನಂತರ ಅದರ ನಿರ್ವಹಣೆ ಸರಿಯಾಗದಿದ್ದಲ್ಲಿ ಅಭಿವೃದ್ಧಿ ಮಾಡಿದ್ದು ವ್ಯರ್ಥವಾಗುತ್ತದೆ. ಈಗಾಗಲೇ ಇಂದಿರಾ ಗಾಜಿನ ಮನೆ ಉದ್ಯಾನವನ ಉತ್ತಮವಾಗಿ ಅಭಿವೃದ್ಧಿ ಪಡಿಸಲಾಗಿದ್ದು, ಅದರ ಸರಿಯಾದ ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. –
ಜಗದೀಶ ಶೆಟ್ಟರ, ಮಾಜಿ ಸಿಎಂ.
ಬಸವರಾಜ ಹೂಗಾರ