Advertisement

ಕಾರಿನ ಗಾಜು ಪುಡಿಗೈದು 15 ಲಕ್ಷ ರೂ.ಕಳವು

10:49 PM Dec 13, 2019 | Team Udayavani |

ಮಂಗಳೂರು: ನಗರದ ಚಿಲಿಂಬಿಯಲ್ಲಿ ಸೌತ್‌ ಇಂಡಿಯನ್‌ ಬ್ಯಾಂಕ್‌ ಶಾಖೆಯ ಎದುರು ನಿಲ್ಲಿಸಿದ್ದ ಕಾರಿನಿಂದ 15 ಲಕ್ಷ ರೂ.ಕಳವು ಮಾಡಿದ ಘಟನೆ ಶುಕ್ರವಾರ ಹಾಡಹಗಲೇ ನಡೆದಿದೆ. ಬೆಂಗಳೂರು ಮೂಲದ, ಪ್ರಸ್ತುತ ನಗರದ ಲೇಡಿಹಿಲ್‌ ಬಳಿ ವಾಸವಾಗಿರುವ ಮಹಮ್ಮದ್‌ ರಿಜ್ವಾನ್‌ (46) ಹಣ ಕಳೆದುಕೊಂಡವರು.

Advertisement

ಪತ್ನಿಯ ಜತೆ ರಿಜ್ವಾನ್‌ ಶುಕ್ರವಾರ ಬೆಳಗ್ಗೆ 11.30ರ ವೇಳೆಗೆ ಫಳ್ನೀರ್‌ನಿಂದ ಚಿಲಿಂಬಿಗೆ ಬಂದು, ಹಣದ ಬ್ಯಾಗನ್ನು ಕಾರಿನಲ್ಲಿಟ್ಟು ಬ್ಯಾಂಕಿಗೆ ತೆರಳಿದ್ದರು. ಈ ವೇಳೆ, ಬೈಕಿನಲ್ಲಿ ಬಂದ ಇಬ್ಬರು ಕಾರಿನ ಗ್ಲಾಸ್‌ ಒಡೆದು ಬ್ಯಾಗ್‌ನಲ್ಲಿದ್ದ 15 ಲಕ್ಷ ರೂ.ಎಗರಿಸಿ ಪರಾರಿಯಾಗಿದ್ದಾರೆ. ರಿಜ್ವಾನ್‌ ಅವರು ಬ್ಯಾಂಕಿನಿಂದ ಹೊರಗೆ ಬಂದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಉರ್ವ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಸಿಸಿ ಕ್ಯಾಮರಾದಲ್ಲಿ ದಾಖ ಲು:ಆರೋಪಿಗಳು ಬೈಕಿನಲ್ಲಿ ಬಂದು ಕಳವು ನಡೆಸಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಇದರ ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ರಿಜ್ವಾನ್‌ ಅವರನ್ನು ಹತ್ತಿರದಿಂದ ಬಲ್ಲವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದ್ದು, ಆ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ.

6 ಲಕ್ಷ ರೂಪಾಯಿ ಕಳ್ಳತನ
ಚಿತ್ರದುರ್ಗ: ಬ್ಯಾಂಕ್‌ ಎದುರು ನಿಲ್ಲಿಸಿದ್ದ ಕಾರಿನ ಗ್ಲಾಸ್‌ ಒಡೆದು ಅದರೊಳಗಿದ್ದ 6 ಲಕ್ಷ ರೂ.ಗಳನ್ನು ಕಳ್ಳರು ಎಗರಿಸಿದ ಘಟನೆ ನಗರದ ದಾವಣಗೆರೆ ರಸ್ತೆಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ ಬಳಿ ಶುಕ್ರವಾರ ನಡೆದಿದೆ. ನಗರದ ಜಯಲಕ್ಷ್ಮಿಬಡಾವಣೆಯ ಗುತ್ತಿಗೆದಾರ ವೈ.ಪ್ರಕಾಶ್‌ ಎಂಬುವರ ಇನ್ನೋವಾ ಕಾರಿನ ಮುಂದಿನ ಎಡಭಾಗದ ಡೋರ್‌ನ ಗ್ಲಾಸ್‌ ಒಡೆದು ಡ್ಯಾಶ್‌ಬೋರ್ಡ್‌ನಲ್ಲಿದ್ದ ಹಣ ಕಳವು ಮಾಡಲಾಗಿದೆ. ಶುಕ್ರವಾರ ಮಧ್ಯಾಹ್ನ ಬಿ.ಡಿ.ರಸ್ತೆಯಲ್ಲಿರುವ ಆಕ್ಸಿಸ್‌ ಬ್ಯಾಂಕಿನಲ್ಲಿ 6.13 ಲಕ್ಷ ರೂ.ಡ್ರಾ ಮಾಡಿದ ಪ್ರಕಾಶ್‌, 13 ಸಾವಿರ ರೂ.ಗಳನ್ನು ಪ್ಯಾಂಟ್‌ ಜೇಬಿನಲ್ಲಿಟ್ಟುಕೊಂಡು,

ಉಳಿದ 6 ಲಕ್ಷ ರೂ.ಗಳನ್ನು ಕಾರಿನ ಡ್ಯಾಶ್‌ ಬೋರ್ಡ್‌ನಲ್ಲಿಟ್ಟಿದ್ದರು. ನಂತರ, ದಾವಣಗೆರೆ ರಸ್ತೆಯಲ್ಲಿರುವ ಜಗಳೂರು ಮಹಾಲಿಂಗಪ್ಪ ಕಾಂಪ್ಲೆಕ್ಸ್‌ನ ಎಚ್‌ಡಿಎಫ್‌ಸಿ ಬ್ಯಾಂಕ್‌ ಎದುರು ಕಾರು ನಿಲ್ಲಿಸಿ, ಇಎಂಐ ಕಟ್ಟಲೆಂದು ಬ್ಯಾಂಕ್‌ ಒಳಗೆ ತೆರಳಿದ್ದರು. ಬ್ಯಾಂಕ್‌ನಿಂದ ವಾಪಸ್‌ ಕಾರಿನ ಬಳಿ ಬಂದಾಗ 6 ಲಕ್ಷ ರೂ.ಕಳ್ಳತನ ಮಾಡಿರುವುದು ಗೊತ್ತಾಗಿದೆ. ಈ ಬಗ್ಗೆ ಚಿತ್ರದುರ್ಗ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರಿಗಾಗಿ ಪತ್ತೆ ಕಾರ್ಯ ಆರಂಭಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next