ಮಳೆಯ ಒಂದೊಂದು ಹನಿಯೂ ಮುತ್ತಿನಂತೆ ಧರೆಗೆ ಉರುಳುತ್ತಿರಲು, ಬರಿದಾದ ಮನದಲ್ಲಿ ಪ್ರೀತಿಯ ಬೀಜ ಬಿತ್ತಿದಂತೆ ಭಾಸವಾಗುತ್ತಿದೆ. ಮೊದಲ ಮಳೆಯ ತಂಪು ತಂಗಾಳಿಯಲ್ಲಿ ಬೆರೆತು, ಹೃದಯದಲ್ಲಿ ಸದ್ದಿಲ್ಲದೆ ಪ್ರೀತಿಯ ಭಾವವೊಂದು ಹುಟ್ಟು ಹಾಕಿದೆ ಎನಿಸುತ್ತಿದೆ.
ಹೋದಲ್ಲೆಲ್ಲಾ ಕಂಗಳು ನಿನ್ನನ್ನೇ ಹುಡುಕುತ್ತಿವೆ. ಎಲ್ಲಾ ಪ್ರೇಮ ಪಕ್ಷಿಗಳಂತೆ ನಾನೂ ಆಗಸದೆತ್ತರಕ್ಕೆ ನಿನ್ನೊಡನೆ ಹಾರಬೇಕು. ಗಂಟೆಗಟ್ಟಲೆ ಲೋಕದ ಪರಿವೆ ಇಲ್ಲದೆ ನಿನ್ನೊಡನೆ ಮಾತಾಡಬೇಕು, ಕಾಲಕಳೆಯ ಬೇಕು ಅನ್ನುವ ಆಸೆ. ಸಣ್ಣ ಪುಟ್ಟ ವಿಷಯಕ್ಕೂ ಕಿತ್ತಾಡುತ್ತಾ,ನಾ ಮುನಿಸಿ ಕೊಂಡಾಗ ಮುದ್ದು ಮಾಡಿ, ನೀ ತೋರುವ ಪ್ರೀತಿ… ಅದನ್ನು ಕಂಡ ಸುತ್ತಮುತ್ತಲಿನ ಜನ ಗುಸುಗುಸು ಮಾತಾಡಿದರೂ ಅದನ್ನು ಕೇರ್ ಮಾಡದ ನಮ್ಮ ಸ್ವಭಾವ… ನಮ್ಮದೇ ಒಂದು ಪ್ರಪಂಚ ಅಲ್ವಾ?
ನೀನು ನನ್ನವನೆಂದು ಕೂಗಿ ಕೂಗಿ ಹೇಳಬೇಕು. ಬದುಕಿನ ಪ್ರತಿ ಹಂತದಲ್ಲೂ ನೀನು ನನ್ನ ಕೈ ಹಿಡಿದು ನಡೆಸಬೇಕು ಎಂಬ ಹುಚ್ಚ ಹಂಬಲ ನನ್ನದು. ಪ್ರೀತಿಯ ಪರಿಯೇ ಹಾಗಲ್ಲವೆ? ಪ್ರೀತಿ ಅನ್ನೋ ಪದವನ್ನು ಹೇಳಿದಷ್ಟೂ ಹೇಳಬೇಕೆನ್ನುವ ಹುಚ್ಚು, ಪದಗಳಿಗೂ ನಿಲುಕದ್ದು , ಕಲ್ಪನೆಗೂ ಮೀರಿದ್ದು.ತುಂಬಾ ಕೇಳುತ್ತಿದ್ದೇನೆ ಅಂದುಕೊಳ್ಳ ಬೇಡ. ಎಲ್ಲಿದ್ದರೂ ನಿನ್ನ ಮೊಗವನ್ನು ಒಮ್ಮೆತೋರಿಸು. ನಿನಗಾಗಿ ಕಾಯುತ್ತಿರುವ
ಇಂತಿ
ನಿನ್ನ ಹುಚ್ಚು ಹುಡುಗಿ
-ಸುಷ್ಮಾ ಹೆಗಡೆ ನೇರ್ಲಮನೆ