ಬೆಂಗಳೂರು: ಪರಿಶಿಷ್ಟ ಜಾತಿಯ ರೈತರು ಕೃಷಿ ಚಟುವಟಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಪೂರಕವಾಗಿ ಉಚಿತವಾಗಿ ಕೊಳವೆ ಬಾವಿ ಕೊರೆಸಿ ಕೊಡುವ ಗಂಗಾ ಕಲ್ಯಾಣ ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಈ ಬಗ್ಗೆ ತನಿಖೆಗೆ ಸದನ ಸಮಿತಿ ರಚಿಸಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.
ವಿಧಾನಸೌಧದಲ್ಲಿ ಬಿಜೆಪಿ ಶಾಸಕಾಂಗ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಪರಿಶಿಷ್ಟ ಜಾತಿಯ ಅರ್ಹ ಫಲಾನುಭವಿ ರೈತರಿಗೆ ಕೊಳವೆ ಬಾವಿ ಕೊರೆದು, ಪಂಪ್‌ಸೆಟ್ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆಯಲ್ಲಿ ಕೇವಲ ಬಿಲ್ ಪಡೆದು ಯಾವುದೇ ಸೌಲಭ್ಯ ಕಲ್ಪಿಸದೆ ಅಕ್ರಮ ನಡೆಸಲಾಗಿದೆ ಎಂದು ದೂರಿದರು.
ಈ ಬಗ್ಗೆ ವಿಧಾನ ಪರಿಷತ್‌ನಲ್ಲಿ ಪ್ರಶ್ನಿಸಿದರೂ ತನಿಖೆ ನಡೆಸುವುದಾಗಿ ಹೇಳಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಪ್ರತಿ ತಾಲೂಕಿನಲ್ಲೂ ಸರ್ವೆ ನಡೆಸಿ ಅವ್ಯವಹಾರ ಬಯಲಿಗೆಳೆಯಬೇಕು. ಈ ಅವ್ಯವಹಾರ ಕುರಿತಂತೆ ತನಿಖೆಗೆ ಸರ್ವಪಕ್ಷಗಳ ಸದಸ್ಯರನ್ನು ಒಳಗೊಂಡ ಸದನ ಸಮಿತಿ ರಚಿಸಬೇಕು. ಇಲ್ಲದಿದ್ದರೆ ಸರ್ಕಾರ ಅವ್ಯವಹಾರದಲ್ಲಿ ಭಾಗಿಯಾಗಿದೆ ಎಂಬಂತಾಗುತ್ತದೆ. ಸರ್ಕಾರ ಸದನ ಸಮಿತಿ ರಚಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೊಸದುರ್ಗ ತಾಲೂಕಿನಲ್ಲಿ 1,800 ಕೊಳವೆಬಾವಿ ಕೊರೆಯುವುದಾಗಿ ಬಿಲ್ ನೀಡಿರುವ ಬಗ್ಗೆ ಮಾಹಿತಿ ದೊರಕಿದೆ. ಒಂದೇ ತಾಲೂಕಿನಲ್ಲಿ ಇಷ್ಟೊಂದು ಕೊಳವೆಬಾವಿ ಕೊರೆಯಲು ಸಾಧ್ಯವಿಲ್ಲ. ಅಧಿಕಾರಿಗಳು ನಕಲಿ ಬಿಲ್ ಸೃಷ್ಟಿಸಿ ಹಣ ದೋಚಿರುವ ಸಾಧ್ಯತೆಯಿದೆ. ಕೊಳವೆಬಾವಿ ಕೊರೆದ ನಂತರ ಅವುಗಳ ಭಾವಚಿತ್ರಸಹಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಆದರೆ ಯೋಜನೆಯ ಯಾವುದೇ ಮಾನದಂಡಗಳನ್ನು ಅಧಿಕಾರಿಗಳು ಪಾಲಿಸಿಲ್ಲ. ಈ ಕುರಿತು ತನಿಖೆ ನಡೆಸಲು ಸರ್ಕಾರ ಹಿಂದೇಟು ಹಾಕುತ್ತಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು.
ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಮಾತನಾಡಿ, 2014ನೇ ಸಾಲಿನಲ್ಲೂ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ 1,700 ಕೊಳವೆಬಾವಿ ಕೊರೆಸಿರುವುದಾಗಿ ಬಿಲ್ ಪಾವತಿಸಲಾಗಿದೆ. ಆದರೆ ವಾಸ್ತವದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ದೊರಕಿಲ್ಲ. ಹಾಗಾಗಿ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ, ಬಿಲ್ ಪಾವತಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ ಎಂದು ಆರೋಪ ಮಾಡಿದರು.
ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಂ.ಕೆ. ಪ್ರಾಣೇಶ್, ಪರಿಶಿಷ್ಟ ಜಾತಿಯ ಆರ್ಥಿಕವಾಗಿ ಹಿಂದುಳಿದ ಬಡ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸುವ ಹೆಸರಿನಲ್ಲಿ ಬಹುಕೋಟಿ ಹಗರಣ ನಡೆದಿದೆ. ಪರಿಷತ್‌ನಲ್ಲಿ ಈ ಬಗ್ಗೆ ಕೇಳಿದ 10ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಸರ್ಕಾರ ಹಾರಿಕೆ ಉತ್ತರ ನೀಡಿದೆ. ಹಾಗಾಗಿ ಸರ್ವಪಕ್ಷಗಳ ಸದಸ್ಯರನ್ನು ಒಳಗೊಂಡ ಸದನ ಸಮಿತಿ ರಚಿಸಿದರೆ ಮಾತ್ರ ಹಗರಣ ಬಯಲಾಗಿ ಸತ್ಯಾಂಶ ಹೊರಬೀಳಲಿದೆ ಎಂದು ಹೇಳಿದರು. ವಿಧಾನ ಪರಿಷತ್ ಬಿಜೆಪಿ ಸದಸ್ಯ ಲೆಹರ್‌ಸಿಂಗ್ ಇತರರು ಉಪಸ್ಥಿತರಿದ್ದರು.
ಆಹ್ವಾನ ನೀಡಬೇಕಿತ್ತು: ಧಾರವಾಡದಲ್ಲಿ ನಡೆದಿರುವ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿಪಕ್ಷದ ನಾಯಕರನ್ನು ಆಹ್ವಾನಿಸಿಲ್ಲ. ಶಿಷ್ಟಾಚಾರದ ಪ್ರಕಾರ ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕರಿಗೆ ಆಹ್ವಾನ ನೀಡಬೇಕಿತ್ತು. ಆದರೆ ಈವರೆಗೆ ಸರ್ಕಾರವಾಗಲಿ, ಸಾಹಿತ್ಯ ಪರಿಷತ್ ಅಧ್ಯಕ್ಷರಾಗಲಿ ನನ್ನನ್ನು ಸಂಪರ್ಕಿಸಿಲ್ಲ. ಬಹುಶಃ ಪರಿಷತ್ ಪ್ರತಿಪಕ್ಷ ನಾಯಕರ ಅವಶ್ಯಕತೆ ಸಾಹಿತ್ಯ ಸಮ್ಮೇಳನಕ್ಕೆ ಇಲ್ಲ ಎನಿಸುತ್ತದೆ. ಆದರೂ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.