Advertisement

2016-17ನೇ ಸಾಲಿನ ವಿದ್ಯಾರ್ಥಿಗಳ ಭವಿಷ್ಯ ಆತಂಕದಲ್ಲಿ

12:30 PM Mar 25, 2017 | |

ವಿಟ್ಲ: ಪ್ರಸಕ್ತ 2016-17ನೇ ಸಾಲಿನಲ್ಲಿ ಪೂರ್ವ ಪ್ರಾಥಮಿಕ ತರಗತಿ (ಎಲ್‌ಕೆಜಿ)ಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಭವಿಷ್ಯ ಆತಂಕದಲ್ಲಿದೆಯೇ ? ಎಂದು ಹೆತ್ತವರು ಪ್ರಶ್ನಿಸುತ್ತಿದ್ದಾರೆ. ಮಾತ್ರವಲ್ಲ ಎಲ್ಲ ಶಾಲೆಗಳಲ್ಲಿಯೂ ಶಿಕ್ಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳೂ ಗೊಂದಲದಲ್ಲಿದ್ದಾರೆ. ಸರಕಾರ ಈ ಬಗ್ಗೆ ಸ್ಪಷ್ಟ ಆದೇಶ ಪ್ರಕಟಿಸದೇ ಹೋದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಒಂದು ವರ್ಷದ ವಿದ್ಯಾಭ್ಯಾಸ ಕುಂಠಿತವಾಗಬಹುದು ಎಂಬ ಭಯ ಎಲ್ಲರ ಮನದಲ್ಲಿ ಮನೆ ಮಾಡಿದೆ.

Advertisement

ಇಲ್ಲೇ ಎಡವಟ್ಟು ?
ಹೆತ್ತವರು, ಶಿಕ್ಷಕರು, ಶಾಲೆ ಮುಖ್ಯಸ್ಥರು ಇಲಾಖೆಯ ಈ ಹೇಳಿಕೆಯಿಂದ ಗಲಿಬಿಲಿಗೊಳಗಾಗಿದ್ದಾರೆ. 2016-17ನೇ ಸಾಲಿನವರೆಗೆ ವಿದ್ಯಾರ್ಥಿಗಳ ವಯಸ್ಸಿಗೆ ಭಾರೀ ನಿರ್ಬಂಧವಿರಲಿಲ್ಲ. 5 ವರ್ಷ 3 ತಿಂಗಳು, 5 ವರ್ಷ 6 ತಿಂಗಳು ಅಥವಾ 5 ವರ್ಷ ಇದ್ದವರನ್ನೂ ಸೇರ್ಪಡೆಗೊಳಿಸುವುದಕ್ಕೆ ಅಭ್ಯಂತರವಿರಲಿಲ್ಲ. ಅದನ್ನು ಇಲಾಖೆಯೇ ಸುತ್ತೋಲೆಯಲ್ಲಿ ಒಪ್ಪಿಕೊಂಡಿದೆ. ಆದುದರಿಂದ 2016-17ನೇ ಸಾಲಿನಲ್ಲಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ)ಕ್ಕೆ ಸೇರ್ಪಡೆಗೊಂಡ ವಿದ್ಯಾರ್ಥಿಗಳು 1ನೇ ತರಗತಿಗೆ ತಲುಪುವಾಗ ವಯಸ್ಸು 5 ವರ್ಷ10 ತಿಂಗಳು ಆಗಿರುವುದಿಲ್ಲ. ಅಂದರೆ ಪ್ರಾಥಮಿಕ ಶಾಲೆಗೆ 1ನೇ ತರಗತಿಗೆ ಅವರನ್ನು ಸೇರ್ಪಡೆಗೊಳಿಸುವುದು 2018-19ರಲ್ಲಿ. ಆಗ ಈ ನಿಯಮ ಅಳವಡಿಕೆಯಾಗಿರುತ್ತದೆ ಮತ್ತು ಆ ನಿಯಮಾನುಸಾರ ಈ ವಿದ್ಯಾರ್ಥಿಗಳು 2018-19ರಲ್ಲಿ 1ನೇ ತರಗತಿಗೆ ಸೇರ್ಪಡೆಗೊಳ್ಳಲು ಅರ್ಹರಾಗಿರುವುದಿಲ್ಲ. ಆ ಮಕ್ಕಳ ಭವಿಷ್ಯ ತೂಗುಯ್ನಾಲೆಯಲ್ಲಿರುತ್ತದೆ. ವಯಸ್ಸಿನ ನಿಯಮಾನುಸಾರ ಆ ವಿದ್ಯಾರ್ಥಿಗಳು ಮತ್ತೆ ಎರಡನೇ ಬಾರಿಯುಕೆಜಿಯಲ್ಲಿ ಉಳಿಯುವ ಪರಿಸ್ಥಿತಿ, ಒಂದು ವರ್ಷದ ಅವಧಿ ಕಳೆದುಹೋಗುವ ಪರಿಸ್ಥಿತಿಯಿದೆ.

ಓರ್ವ ಮುಖ್ಯ ಶಿಕ್ಷಕರ ಅನುಭವದ ಪ್ರಕಾರ, ಈ ಕಾನೂನು 2017-18ನೇ ಸಾಲಿನಲ್ಲಿ ಜಾರಿಗೆ ಬಂದಿದ್ದರಿಂದ ಮುಂದಿನ ವರ್ಷದ ಸೇರ್ಪಡೆಗೆ ಅವಕಾಶ ಕಲ್ಪಿಸಲು ಯಾವುದೇ ಅಡ್ಡಿ ಆತಂಕಗಳಿಲ್ಲ. ಸರಕಾರದ ಸುತ್ತೋಲೆಯನ್ನು ಕಟ್ಟು ನಿಟ್ಟಾಗಿ ಪಾಲಿಸಬಹುದು. ಈಗಾಗಲೇ ಪೂರ್ವ ಪ್ರಾಥಮಿಕ ತರಗತಿಗೆ 2016-17ನೇ ಸಾಲಿನಲ್ಲಿ ಸೇರ್ಪಡೆಗೊಂಡ ವಿದ್ಯಾರ್ಥಿಯ ವಯಸ್ಸನ್ನು ಪರಿಗಣಿಸದೇ 1ನೇ ತರಗತಿಗೂ ಮುಂದುವರಿಸಬಹುದಾದಲ್ಲಿ ಯಾವುದೇ ಸಮಸ್ಯೆ ಇರದು. ಆಗ ಅಡ್ಡಿಪಡಿಸಿದಲ್ಲಿ ಹೆತ್ತವರಿಗೆ ಹೇಗೆ ಉತ್ತರಿಸುವುದು ಎಂಬ ಸಮಸ್ಯೆಯಿದೆ. ಆದರೆ ಈ ಬಗ್ಗೆ ಮೇಲಧಿಕಾರಿಗಳು ಕೂಡ ಸ್ಪಷ್ಟವಾಗಿ ಉತ್ತರಿಸುವುದಿಲ್ಲ. ಅವರಿಗೂ ಈ ಕಾನೂನಿನ ಬಗ್ಗೆ ಸ್ಪಷ್ಟ ತಿಳಿವಳಿಕೆಯಿಲ್ಲ. ಆದುದರಿಂದ ಸರಕಾರ ಈ ಬಗ್ಗೆ ಸ್ಪಷ್ಟ ಮತ್ತು ಸಂಶಯಾತೀತ ಸುತ್ತೋಲೆ ಹೊರಡಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ಸರಕಾರಿ ಶಾಲೆಗಳಲ್ಲಿ ಕೂಡ ಈ ಹಿಂದೆ 1ನೇ ತರಗತಿಗೆ ಸೇರ್ಪಡೆಗೊಳಿಸುವ ಸಂದರ್ಭ 5 ವರ್ಷ ದಾಟಿದವರನ್ನು ಪರಿಗಣಿಸಲಾಗಿದೆ. ಅಂಗ ನವಾಡಿ ಮಕ್ಕಳನ್ನು ಪೂರ್ವಪ್ರಾಥಮಿಕವೆಂದು ಪರಿಗಣಿಸದೇ ಕೇವಲ ವಯಸ್ಸಿನ ಪ್ರಮಾಣ ಪತ್ರಗಳ ಆಧಾರದಲ್ಲೇ ಸರಕಾರಿ ಶಾಲೆಗಳಲ್ಲಿ
ಸೇರ್ಪಡೆಗೊಳಿಸಲಾಗುತ್ತದೆ. ಆದರೆ ಅನುದಾನ ಸಹಿತ ಮತ್ತು ಖಾಸಗಿ ಅನುದಾನ ರಹಿತ ಶಾಲೆ ಗಳಲ್ಲಿ ಈ ಸಮಸ್ಯೆ ಬಿಗಡಾಯಿಸಬಹುದು. ಈ ಬಗ್ಗೆ ಹೆತ್ತವರಿಗೂ ಗೊಂದಲ ಆರಂಭವಾಗಿದೆ. 

ಆದೇಶವೇನು ?
ಸಾರ್ವಜನಿಕ ಶಿಕ್ಷಣ ಇಲಾಖೆ 2017ರ ಜ. 18ರಂದು ಸುತ್ತೋಲೆ ಹೊರಡಿಸಿದೆ. ಮಕ್ಕಳನ್ನು ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಗೆ ದಾಖಲು ಮಾಡಲು ವಯೋಮಿತಿ ನಿರ್ಧರಿಸುವ ಬಗ್ಗೆ ಪ್ರಕಟಿಸಲಾದ ಈ ಸುತ್ತೋಲೆಯನ್ನು ರಾಜ್ಯದಾದ್ಯಂತ ಕಳುಹಿಸಲಾಗಿದೆ. ಕರ್ನಾಟಕ ಶಿಕ್ಷಣ ಕಾಯ್ದೆ 1983ರ ನಿಯಮ 20ರಂತೆ ಹಾಗೂ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ 2009ರ ನಿಯಮಗಳಲ್ಲಿರುವ ಅಂಶ ಪರಿಶೀಲಿಸಿ, ಒಂದನೇ ತರಗತಿಗೆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ವಯೋಮಿತಿ ನಿರ್ಧರಿಸಿ ಸುತ್ತೋಲೆ ಹೊರಡಿಸಲಾಗಿದೆ. ಪೂರ್ವ ಪ್ರಾಥಮಿಕ (ಎಲ್‌ಕೆಜಿ)ಕ್ಕೆ ಸೇರ್ಪಡೆಗೊಳ್ಳಲು ವಿದ್ಯಾರ್ಥಿಗೆ 3 ವರ್ಷ 10 ತಿಂಗಳು ಹಾಗೂ ಒಂದನೇ ತರಗತಿಗೆ ಸೇರ್ಪಡೆಗೊಳ್ಳಲು 5 ವರ್ಷ 10 ತಿಂಗಳು ಎಂದು ವಯೋಮಿತಿ ನಿಗದಿಪಡಿಸಲಾಗಿದೆ. 2017-18ನೇ ಸಾಲಿನಿಂದ ಈ ಆದೇಶ ಜಾರಿಗೆ ಬರುತ್ತದೆ ಮತ್ತು ಹಿಂದಿನ ಸಾಲಿನಲ್ಲಿ ದಾಖಲಾತಿ ಹೊಂದಿರುವ ವಿದ್ಯಾರ್ಥಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ನಮೂದಿಸಲಾಗಿದೆ.

Advertisement

– ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next