Advertisement

ಜೋಳ ಬೆಳೆಗಾರರ ಭವಿಷ್ಯ ಅತಂತ್ರ

12:33 PM Jan 17, 2022 | Team Udayavani |

ಸಿಂಧನೂರು: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಜೋಳ ಮತ್ತು ಭತ್ತ ಖರೀದಿ ಮಾಡಲು ಸರ್ಕಾರ ವಿಧಿಸಿರುವ ಷರತ್ತು ಸಡಿಲಿಕೆ ನಿರ್ಧಾರ ಏನಾಗುತ್ತದೋ ಎನ್ನುವುದನ್ನು ಜ.19ರ ಸಭೆಯೇ ನಿರ್ಣಯಿಸಬೇಕಿದೆ.

Advertisement

ಕೃಷಿ ಉತ್ಪನ್ನಗಳ ಬೆಲೆ ಸ್ಥೀರಿಕರಣ ಸಂಪುಟ ಉಪಸಮಿತಿ ಮೂರು ದಿನಗಳಲ್ಲೇ ಸಭೆ ಸೇರುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ನಿರೀಕ್ಷೆ ಗರಿಗೆದರಿದೆ. ಆಹಾರ, ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ ಕತ್ತಿ ಅಧ್ಯಕ್ಷರಾಗಿರುವ ಈ ಸಮಿತಿ ಜ.19ರಂದು ಸಭೆ ಸೇರಲಿದೆ. ಸಚಿವ ಸಂಪುಟದ ಉಪ ಸಮಿತಿಯಲ್ಲಿ ಜೋಳ, ಭತ್ತಕ್ಕೆ ಹಾಕಿರುವ ಷರತ್ತು ತೆಗೆಯುವ ನಿಟ್ಟಿನಲ್ಲಿ ನಿರ್ಣಯ ಬಹಿರಂಗವಾಗಬೇಕಿದೆ. ಈ ಸಮಿತಿ ಹಸಿರು ನಿಶಾನೆ ತೋರಿಸಿದರೆ ಮಾತ್ರ ರೈತರ ಬೇಡಿಕೆ ಈಡೇರಲಿದೆ.
ಏನಿದು ಹೋರಾಟ?

ಕಳೆದ ವರ್ಷ ಎಕರೆ ಹಾಗೂ ಸಣ್ಣ ಮತ್ತು ಅತಿಸಣ್ಣ ರೈತರ ನಿರ್ಬಂಧವನ್ನು ತೆಗೆದು ಹಾಕಲಾಗಿತ್ತು. ಇದರ ಫಲವಾಗಿ 2 ಲಕ್ಷ ಟನ್‌ ಭತ್ತ, 80 ಸಾವಿರ ಟನ್‌ ಜೋಳ, 4.74 ಲಕ್ಷ ಟನ್‌ ರಾಗಿ ಖರೀದಿ ಮಾಡಲಾಗಿತ್ತು. ಈ ವರ್ಷ ಪ್ರತಿ ರೈತನಿಂದ 20 ಕ್ವಿಂಟಲ್‌ ಮಾತ್ರ ರಾಗಿ, ಜೋಳ ಖರೀದಿ, 40 ಕ್ವಿಂಟಲ್‌ ಭತ್ತ ಖರೀದಿ ಎಂಬ ನಿರ್ಬಂಧ ಹಾಕಿದ್ದರಿಂದ ಈವರೆಗೂ ರೈತರು ಖರೀದಿ ಕೇಂದ್ರಗಳತ್ತ ಮುಖ ಮಾಡುತ್ತಿಲ್ಲ.

ಮುಂದೇನು ಎಂಬ ಚಿಂತೆ

ರಾಜ್ಯ ಸರ್ಕಾರ 5 ಲಕ್ಷ ಟನ್‌ ಭತ್ತ, 1.10 ಲಕ್ಷ ಟನ್‌ ಜೋಳ, 2.10 ಲಕ್ಷ ಟನ್‌ ರಾಗಿಯನ್ನು ಖರೀದಿಸಲು ಪ್ರಸಕ್ತ ಸಾಲಿನಲ್ಲಿ ಮುಂದಾಗಿದೆ. ಸರ್ಕಾರದ ಖರೀದಿ ಕೇಂದ್ರಗಳು ಜ.1ರಿಂದಲೇ ಆರಂಭವಾಗಿವೆ. ಖರೀದಿಗೆ ವಿಧಿಸಿದ ಮಿತಿಯಿಂದಾಗಿ ರೈತರು ಇತ್ತ ಕಡೆಗೆ ಆಗಮಿಸಿಲ್ಲ. ಸರ್ಕಾರ ಕಳೆದ ವರ್ಷದಂತೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನವನ್ನು ಖರೀದಿಸಬೇಕು ಎಂಬ ಬೇಡಿಕೆಯಿಟ್ಟು ಕಾಯುತ್ತಾ ಕುಳಿತಿದ್ದಾರೆ.

Advertisement

ಮಾರುಕಟ್ಟೆಯಲ್ಲಿ ಬೆಲೆ ಕುಸಿತ

ಪ್ರತಿ ಕ್ವಿಂಟಲ್‌ ಜೋಳದ ಬೆಳೆ ಮಾರುಕಟ್ಟೆಯಲ್ಲಿ 1,700 ರೂ.ನಿಂದ 1,900 ರೂ.ಗೆ ಇದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಪ್ರತಿ ಕ್ವಿಂಟಲ್‌ಗೆ 2,758 ರೂ. ದರವಿದೆ. ಖರೀದಿ ಕೇಂದ್ರಕ್ಕೆ ಮಾರಾಟ ಮಾಡಿದರೆ ಪ್ರತಿ ಕ್ವಿಂಟಲ್‌ ಗೆ 800 ರೂ.ನಷ್ಟು ನಷ್ಟವನ್ನು ತಪ್ಪಿಸಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ರೈತರು ಜೋಳದ ದಾಸ್ತಾನು ಇಟ್ಟುಕೊಂಡು ಕಾಯಲಾರಂಭಿಸಿದ್ದಾರೆ.

ಕ್ಯಾಬಿನೆಟ್‌ ಕಮಿಟಿ ತೀರ್ಮಾನ ಅಂತಿಮ

ಈಗಾಗಲೇ ಖರೀದಿಗೆ ಹಾಕಿರುವ ನಿರ್ಬಂಧ ತೆಗೆದು ಹಾಕುವ ನಿಟ್ಟಿನಲ್ಲಿ ಬೆಲೆ ಸ್ಥೀರಿಕರಣ ಕ್ಯಾಬಿನೆಟ್‌ ಸಬ್‌ ಕಮಿಟಿಯಲ್ಲಿ ಮಾತ್ರ ಬದಲಾವಣೆ ಸಾಧ್ಯವಿದೆ. ಅನೇಕರು ಧ್ವನಿ ಎತ್ತಿದ್ದರೂ ಕೂಡ ಮುಖ್ಯಮಂತ್ರಿಗಳು ಮೌಖೀಕ ಭರವಸೆ ನೀಡಿದ್ದಾರೆಂದು ಹೇಳಲಾಗುತ್ತಿದೆ. ಈ ಕಮಿಟಿ ನಿರ್ಣಯ ಕೈಗೊಂಡರೆ ಮಾತ್ರ ಅಧಿಕೃತ ಆದೇಶ ಹೊರಬೀಳಲಿದೆ.

ನಾನು ಈಗಾಗಲೇ ಸದನದಲ್ಲಿ ಜೋಳ, ಭತ್ತ ಬೆಳೆಗಾರರ ಪರವಾಗಿ ಧ್ವನಿ ಎತ್ತಿದ್ದೇನೆ. ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿರುವೆ. ಮತ್ತೂಮ್ಮೆ ಸಿಎಂ ಭೇಟಿಗೆ ಹೊರಟಿದ್ದು, ನಿರ್ಣಯ ಬದಲಿಸುವ ವಿಶ್ವಾಸವಿದೆ. ಅನಿವಾರ್ಯವಾದರೆ ರೈತರ ಪರವಾಗಿ ಹೋರಾಟಕ್ಕೆ ಇಳಿಯಲಿದ್ದೇನೆ. -ವೆಂಕಟರಾವ್‌ ನಾಡಗೌಡ, ಶಾಸಕ, ಸಿಂಧನೂರು

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next