Advertisement
ಇಂತಹ ಆತಂಕ ಎದುರಿಸುತ್ತಿರುವುದು ಗಡಿ ಪ್ರದೇಶದ ಪಾಣಾಜೆ ಗ್ರಾಮದ ಸೂರಂಬೈಲು ಸರಕಾರಿ ಕನ್ನಡ ಮಾಧ್ಯಮ ಶಾಲೆ. ಹೊಸ ನಿಯಮ ಪರಿಣಾಮ 1ನೇ ತರಗತಿಗೆ ಏಕ ವಿದ್ಯಾರ್ಥಿ ಮಾತ್ರ ದಾಖಲಾತಿಗೆ ಅರ್ಹತೆ ಹೊಂದಿದ್ದಾನೆ. ಗ್ರಾಮದಲ್ಲಿ 5 ವರ್ಷದಾಟಿದ 6ಕ್ಕೂ ಅಧಿಕ ಮಕ್ಕಳಿದ್ದರೂ ಸೇರ್ಪಡೆಗೆ ನಿಯಮ ಅಡ್ಡಿಯೆನಿಸಿದೆ.
ಪಾಣಾಜೆ ಗ್ರಾಮದ ಆರ್ಲಪದವಿನಿಂದ 3 ಕಿ.ಮೀ. ದೂರದಲ್ಲಿ, ಏರು ಪ್ರದೇಶದಲ್ಲಿರುವ ಸೂರಂಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೇರಳ- ಕರ್ನಾಟಕದ ಗಡಿ ಭಾಗದಲ್ಲಿದೆ. ಶಾಲೆಯಿಂದ ತುಸು ದೂರದಲ್ಲಿ ಕೇರಳ ರಾಜ್ಯಕ್ಕೆ ಸೇರಿದ ಸ್ವರ್ಗ ಪ್ರದೇಶವಿದೆ. ಗಡಿ ಗ್ರಾಮದ ವಿದ್ಯಾರ್ಥಿಗಳಿಗೆ ಈ ಶಾಲೆ ಉಪಯುಕ್ತವೂ ಹೌದು. 1959ರಲ್ಲಿ ಸ್ಥಾಪನೆಗೊಂಡ ಈ ಸರಕಾರಿ ಶಾಲೆಗೆ 58 ವರ್ಷ ಸಂದಿದೆ. ಈ ಬಾರಿ ದಾಖಲಾತಿಗೆ ಹೊಸ ನಿಯಮ ಅಡ್ಡಿ ಉಂಟು ಮಾಡಿದೆ. ಬಹುತೇಕ ಶಾಲೆಗಳ ವ್ಯಾಪ್ತಿಯಲ್ಲಿ ಮಕ್ಕಳು ಇಲ್ಲ ಎಂಬ ಸಮಸ್ಯೆಯಿದ್ದರೆ, ಈ ಊರಲ್ಲಿ ಮಕ್ಕಳು ಇದ್ದರೂ, ಶಾಲೆಗೆ ಸೇರಿಸುವಂತಿಲ್ಲ. ಹಾಗಾಗಿ ಮಕ್ಕಳ ಹೆತ್ತವರು ಈ ನಿಯಮದಿಂದ ಮಕ್ಕಳನ್ನು ಸೇರಿಸಲಾಗದ ಸಮಸ್ಯೆಗೆ ಸಿಲುಕಿದ್ದಾರೆ. ಜತೆಗೆ ಭವಿಷ್ಯದಲ್ಲಿ ಮಕ್ಕಳು ಬಾರದೆ ಗಡಿನಾಡ ಶಾಲೆ ಮುಚ್ಚುವ ಆತಂಕವೂ ವ್ಯಕ್ತವಾಗಿದೆ.
Related Articles
ಇಲ್ಲಿ 1ರಿಂದ 7ನೇ ತರಗತಿ ತನಕ ಒಟ್ಟು ಇರುವ ಮಕ್ಕಳ ಸಂಖ್ಯೆ-34. ಈ ಬಾರಿ ಒಂದನೇ ತರಗತಿ ಯಲ್ಲಿ ಓರ್ವ ವಿದ್ಯಾರ್ಥಿ ಮಾತ್ರ ಇದ್ದಾನೆ. 2ನೇ ತರಗತಿಯಲ್ಲಿ – 7, 3ನೇ ತರಗತಿಯಲ್ಲಿ-8, 4ನೇ ತರಗತಿಯಲ್ಲಿ -5, 5ನೇ ತರಗತಿಯಲ್ಲಿ- 3, 6ನೇ ತರಗತಿಯಲ್ಲಿ-4, 7ನೇ ತರಗತಿಯಲ್ಲಿ – 6 ವಿದ್ಯಾರ್ಥಿಗಳಿದ್ದಾರೆ. ಪರಿಶಿಷ್ಟ ವರ್ಗಕ್ಕೆ ಸೇರಿದ ಕುಟುಂಬಗಳ ಮಕ್ಕಳು ಇಲ್ಲಿ ಅಧಿಕ ಸಂಖ್ಯೆಯಲ್ಲಿ ದ್ದಾರೆ.
Advertisement
ನಿಯಮ ಬದಲಾಯಿಸಿ ಹೊಸ ನಿಯಮದಿಂದ ಮಕ್ಕಳು ಶಾಲೆಗೆ ಸೇರುವ ಪರಿಸ್ಥಿತಿಯಿಲ್ಲ. ಮೊದಲೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಇದೆ. ವಯಸ್ಸಿನ ಮಿತಿ ಕಡ್ಡಾಯ ಜಾರಿಯಿಂದ ಈ ಸಮಸ್ಯೆ ಇನ್ನಷ್ಟು ಉದ್ಭವಿಸಿದೆ. ಈ ಹಿಂದೆ ಇದ್ದಂತೆ 5 ವರ್ಷಕ್ಕಿಂತ ಮೇಲ್ಪಟ್ಟವರಿಗೆ ದಾಖಲಾತಿಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಸೂರಂಬೈಲು ಮೊದಲಾದ ಗಡಿನಾಡಿನ ಶಾಲೆಗಳು ಮುಚ್ಚುವ ಪಟ್ಟಿಗೆ ಸೇರಬಹುದು.
– ನಾರಾಯಣ ಪೂಜಾರಿ,
ಅಧ್ಯಕ್ಷರು, ಪಾಣಾಜೆ, ಗ್ರಾ.ಪಂ. – ಕಿರಣ್ ಪ್ರಸಾದ್ ಕುಂಡಡ್ಕ