ಭಾಲ್ಕಿ: ಸಮಾಜದ ಬಡ, ದುರ್ಬಲರ ಮಕ್ಕಳಿಗೆ ಅತಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಸದುದ್ದೇಶದಿಂದ ಜನ್ಮ ತಾಳಿ ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರ ಕಾರ್ಯ ನಿರ್ವಹಿಸುತ್ತಿರುವ ಭಾಲ್ಕಿಯ ಕಿಸಾನ ಶಿಕ್ಷಣ ಪ್ರಸಾರಕ ಮಂಡಳ ಕೊಡುಗೆ ಸಮಾಜಕ್ಕೆ ಅನುಪಮವಾಗಿದೆ
ಎಂದು ಸಂಸದ ಭಗವಂತ ಖೂಬಾ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಕೆಎಸ್‌ಪಿ ಮಂಡಳ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಸ್ಥೆ ನಡೆದು ಬಂದ ದಾರಿ ಕುರಿತು ಮಾತನಾಡಿದ ಅವರು, ಯಾವುದೆ ಒಂದು ಸಮಾಜ ಸರ್ವರೀತಿಯಲ್ಲಿ ಪ್ರಗತಿ ಕಂಡುಕೊಳ್ಳಬೇಕಾದರೆ ಶಿಕ್ಷಣ ಅತಿ ಮುಖ್ಯವಾಗಿರುತ್ತದೆ. ಆ ದಿಶೆಯಲ್ಲಿ ಈ ಸಂಸ್ಥೆ ಕಾರ್ಯ ಮಾಡುತ್ತಿದ್ದು, ಸಂಸ್ಥೆಯ ಬೆಳವಣಿಗೆಗೆ ಸಂಸದರ ನಿಧಿಯಿಂದ 10 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಸಂಸದರಾಗಿ ಆಯ್ಕೆಯಾದ ನಂತರ ಯಾವುದೆ ಬಗೆಯ ಭೇದಭಾವ ಮಾಡದೇ ಎಲ್ಲ ಸಮುದಾಯದವರನ್ನು ಸಮಾನ ದೃಷ್ಟಿಯಿಂದ ಕಂಡು ಸಾಕಷ್ಟು ಪ್ರಗತಿ ಕಾರ್ಯ ಮಾಡಿರುವುದಾಗಿ ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷ ರಾಮರಾವ್ ವರವಟ್ಟಿಕರ ಮಾತನಾಡಿ, ಈ ಭಾಗದಲ್ಲಿ ಮರಾಠಾ ಸಮಾಜ ಬಹು ದೊಡ್ಡ ಸಮಾಜವಾಗಿದೆ. ಆದರೆ ಸಾಮಾಜಿಕ ಮತ್ತು ರಾಜಕೀಯವಾಗಿ ಈ ಸಮಾಜಕ್ಕೆ ನಿರಿಕ್ಷೀತ ಪ್ರಮಾಣದಲ್ಲಿ ಅವಕಾಶಗಳು ಸಿಕ್ಕಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು. ಮರಾಠಾ ಸಮಾಜಕ್ಕಾಗಿ ಸಮುದಾಯ ಭವನದ ಅಗತ್ಯವಿದ್ದು, ಸಂಸದರು ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ಬಿಜೆಪಿಯ ಯುವ ನಾಯಕ ಡಿ.ಕೆ.ಸಿದ್ರಾಮ ಮಾತನಾಡಿ, ಈ ಸಂಸ್ಥೆ ಸದಾ ದೇಶದ ಬಗ್ಗೆ ಹಾಗೂ ಸಮಾಜದ ಪ್ರಗತಿ ಕುರಿತು ಬಗ್ಗೆ ಚಿಂತನೆ ಮಾಡುತ್ತದೆ. ಸಂಸ್ಥೆಯ ಏಳ್ಗೆಗಾಗಿ ಸಂಸದರು ಹೆಚ್ಚು ಅನುದಾನ ನೀಡಬೇಕು ಎಂದು ಮನವಿ ಮಾಡಿದರು. ಸಂಸ್ಥೆಯ ನಿರ್ದೇಶಕ ಗೋವಿಂದರಾವ್ ಪಾಟೀಲ ಭಾಟಸಾಂಗವಿಕರ, ಅಶೋಕ ಸೂರ್ಯವಂಶಿ ಇತರರು ಮಾತನಾಡಿದರು. ಪ್ರತಾಪರಾವ್ ಪಾಟೀಲ, ದಿಗಂಬರಾವ್ ಮಾನಕಾರಿ, ಪ್ರಾಚಾರ್ಯ ಚಂದ್ರಕಾಂತ ಬಿರಾದಾರ, ಚಂದ್ರಕಾಂತ ಪಾಟೀಲ ಇತರರು ಇದ್ದರು.