ಧಾರವಾಡ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಹಾಗೂ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿಗಳು ವಾಹನದ ಹೊಗೆಯಿಂದ ನಡೆಯುವ ಫ್ರೀಜ್ ಸಾಧನದ ಮಾದರಿ ತಯಾರಿಸಿ ಗಮನ ಸೆಳೆದಿದ್ದಾರೆ.
ಪ್ರೊ| ಡಿ.ಎಸ್. ಭಟ್ ಮತ್ತು ಪ್ರೊ| ವಿ.ಕೆ. ಹೆಬ್ಳಿಕರ ಮಾರ್ಗದರ್ಶನದಲ್ಲಿ 8ನೇ ಸೆಮಿಸ್ಟರ್‌ನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ ವಿನಯ ದೇಶಪಾಂಡೆ, ವೀರೇಂದ್ರ ಪಾಟೀಲ, ವಿಕಾಸ ಬಡಿಗೇರ, ವಿಶ್ವನಾಥ ಶೆಟ್ಟರ ಅವರೇ ಇದನ್ನು ರೂಪಿಸಿದ್ದಾರೆ.
ವಾಹನಗಳಿಗೆ ರೇಫ್ರೀಜರೇಟರ್ ಸಾಧನವನ್ನು ತಯಾರಿಸಿದ್ದಾರೆ. ಈ ಸಾಧನವು ವಾಹನಗಳು ಹೊರಸೂಸುವ ಅನಿಲವನ್ನು ಬಳಸಿ ಚಲಿಸುತ್ತದೆ. ವಾಹನದ ಹೊಗೆಯಲ್ಲಿನ ಉಷ್ಣತೆ ಬಳಸಿ ಶೈತಿಕರಣಗೊಳಿಸುತ್ತದೆ. ಈಗಿರುವ ಫ್ರೀಜ್‌ಗಳಲ್ಲಿ ಕಂಪ್ರೇಸ್ಸರ್ ಎಂಬ ಸಾಧನವನ್ನು ಬಳಸುತ್ತಾರೆ.
ಅದು ಎಂಜಿನ್‌ನಿಂದ ಬರುವ ಶಕ್ತಿಯನ್ನು ಬಳಸುತ್ತದೆ. ಇದರಿಂದ ಚಾಲನೆಗೆ ಉಪಯೋಗವಾಗುವ ಶಕ್ತಿಯು ಕಡಿತಗೊಳ್ಳುತ್ತದೆ. ಆದರೆ ಈ ಸಾಧನವು ಎಂಜಿನ್‌ನಿಂದ ಯಾವುದೇ ಉಪಯುಕ್ತ ಶಕ್ತಿಯನ್ನು ಬಳಸುವುದಿಲ್ಲ. ಈ ಸಾಧನವು ಅಮೋನಿಯ, ನೀರು ಮತ್ತು ಹೈಡ್ರೋಜನ್ ಒಳಗೊಂಡಿದೆ. ಇದು ವಾಹನಗಳಲ್ಲಿ ನೀರು, ಔಷಧಿ, ಆಹಾರ ಮತ್ತು ಇತರೆ ವಸ್ತುಗಳನ್ನು ಶೇಖರಿಸಲ್ಲದು.
ಇದು ಅತೀ ಹೆಚ್ಚು ಬಾಳಿಕೆ ಬರುವ ಸಾಧನವಾಗಿದ್ದು, ಕಡಿಮೆ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂಬುದು ವಿದ್ಯಾರ್ಥಿಗಳ ವಿವರಣೆ. ಎಸ್‌ಡಿಎಂ ಕಾಲೇಜಿನ ಪ್ರಾಶುಂಪಾಲರಾದ ಡಾ| ಎಸ್.ಬಿ. ವಣಕುದುರೆ ಮತ್ತು ಪ್ರೊ| ಡಿ.ಎಸ್. ಭಟ್, ಎಚ್‌ಒಡಿ (ಮೆಕ್ಯಾನಿಕಲ್) ಅವರು ವಿದ್ಯಾರ್ಥಿಗಳು ಸಿದ್ದಪಡಿಸಿದ ಮಾದರಿಯ ಮಾಹಿತಿ ಪಡೆದು ಅಭಿನಂದನೆ ಸಲ್ಲಿಸಿದ್ದಾರೆ.