ಬೆಂಗಳೂರು: ಕೊರೊನಾ ನಾಲ್ಕನೇ ಅಲೆಯ ಮುನ್ಸೂಚನೆ ಹಿನ್ನೆಲೆ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಿದ್ಧತೆಗಳು ಚುರುಕುಗೊಂಡಿದ್ದು, ಪ್ರತಿ ವಲಯಕ್ಕೊಂದು ಕೋವಿಡ್ ಆರೈಕೆ ಕೇಂದ್ರಗಳನ್ನು ಪುನಃ ತೆರೆಯಲು ಚಿಂತನೆ ನಡೆಸಿದೆ. ಈ ಸಂಬಂಧ ಎಲ್ಲ ವಲಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಮಹದೇವಪುರ ವ್ಯಾಪ್ತಿಯಲ್ಲಿ ಬರುವ ಎಚ್ ಎಎಲ್, ರಾಜರಾಜೇಶ್ವರಿ ನಗರದಲ್ಲಿ ಆಯುರ್ವೇದ ವೈದ್ಯಕೀಯ ಕಾಲೇಜು, ಪಶ್ಚಿಮ ವಲಯದ ಕೆಂಪೇಗೌಡ ಸಮುದಾಯ ಭವನ ಸೇರಿದಂತೆ ಈಗಾಗಲೇ ಬಹುತೇಕ ಎಲ್ಲ ವಲಯಗಳಲ್ಲಿ ಕೋವಿಡ್ ಆರೈಕೆ ಕೇಂದ್ರ (ಸಿಸಿಸಿ)ಗಳಿವೆ. ಇಲ್ಲದಿರುವ ಕಡೆ ಜಾಗ ಗುರುತಿಸಿ, ಯಾವುದೇ ಕ್ಷಣದಲ್ಲಾದರೂ ಸೇವೆಗೆ ಸಿದ್ಧವಾಗಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ.
“ಸೋಂಕು ಪರೀಕ್ಷೆಗಳು ಕಡಿಮೆ ಇರುವುದರಿಂದ ಸೋಂಕು ಪ್ರಕರಣಗಳು ಕೂಡ ಅಷ್ಟಾಗಿ ಕಂಡುಬರುತ್ತಿಲ್ಲ. ಆಸ್ಪತ್ರೆಗೆ ದಾಖಲಾಗಿರುವವರ ಸಂಖ್ಯೆ ಕೂಡ ಬೆರಳೆಣಿಕೆಯಷ್ಟು ಮಾತ್ರ ಇದೆ. ಹಾಗಂತ ಮೈ ಮರೆಯುವಂತಿಲ್ಲ. ಕೋವಿಡ್ ಆರೈಕೆ ಕೇಂದ್ರಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ. ಸೋಂಕು ಪ್ರಕರಣಗಳು ತುಂಬಾ ಕಡಿಮೆ ಇರುವುದರಿಂದ ಇದುವರೆಗೆ ಯಾವುದೂ ಆರಂಭಗೊಂಡಿಲ್ಲ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ ಮತ್ತು ಐಟಿ) ತ್ರಿಲೋಕ್‌ಚಂದ್ರ ಸ್ಪಷ್ಟಪಡಿಸಿದರು.
ಇದಲ್ಲದೆ, ಪ್ರತಿ ವಾರ್ಡ್‌ನ ಮ್ಯಾನ್‌ಹೋಲ್ ಗಳಿಂದಲೂ ಕೊಳಚೆ ನೀರು ಮಾದರಿ ಸಂಗ್ರಹಿಸಿ ಸೋಂಕು ಪತ್ತೆ ಕಾರ್ಯ ನಡೆಸಲಾಗುವುದು. ಪ್ರಸ್ತುತ ಬರೀ ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಹಾಗೂ ತೆರೆದ ಒಳಚರಂಡಿಗಳಿಂದ ಮಾದರಿ ಸಂಗ್ರಹಿಸಲಾಗುತ್ತಿತ್ತು. ಈ ಪ್ರಕ್ರಿಯೆಯಿಂದ ಇನ್ನಷ್ಟು ಪರಿಣಾಮಕಾರಿಯಾಗಿ ಮತ್ತು ಮುಂಚಿತವಾಗಿ ಸೋಂಕಿನ ಮಾಹಿತಿ ದೊರೆಯಲಿದೆ ಎಂದೂ ಅವರು ಮಾಹಿತಿ ನೀಡಿದರು.
12ರಿಂದ 15 ವಯಸ್ಸಿನ ಮಕ್ಕಳ ಲಸಿಕಾ ಅಭಿಯಾನಕ್ಕೆ ತುಸು ಹಿನ್ನಡೆಯಾಗಿದೆ. ಸದ್ಯಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವವರಿಗೆ ಲಸಿಕೆ ನೀಡಲಾಗುತ್ತಿದೆ. ಮೇ 15ರಿಂದ ಶಾಲೆಗಳು ಪುನಾರಂಭಗೊಳ್ಳಲಿದ್ದು, ಆಗ ಅಲ್ಲಿಯೇ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದರು.
ನಿತ್ಯ 10 ಸಾವಿರ ಪರೀಕ್ಷೆ ಟಾರ್ಗೆಟ್
ಕೋವಿಡ್ ಮೂರನೇ ಅಲೆ ಹಾವಳಿ ಕಡಿಮೆಯಾಗುತ್ತಿದ್ದಂತೆ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ವಾಪಸ್ ಕಳುಹಿಸಲಾಗಿತ್ತು. ನಾಲ್ಕನೇ ಅಲೆಯ ಮುನ್ಸೂಚನೆ ದೊರೆಯುತ್ತಿದ್ದಂತೆ ಮತ್ತೆ ಆ ಸಿಬ್ಬಂದಿಯನ್ನು ಅದೇ ಹೊರಗುತ್ತಿಗೆಯಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಹಾಗಾಗಿ, ಕಳೆದೆರಡು ದಿನಗಳಿಂದ ಪರೀಕ್ಷೆ ಪ್ರಮಾಣ ಆರೆಂಟು ಪಟ್ಟು ಹೆಚ್ಚಳವಾಗಿದ್ದು, ವಾರದಲ್ಲಿ ಈ ಸಂಖ್ಯೆ ಹತ್ತು ಸಾವಿರದ ಗಡಿ ದಾಟಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಪ್ರತಿಯೊಂದರಲ್ಲಿ ತಲಾ ಒಬ್ಬ ಗಂಟಲು ದ್ರವದ ಮಾದರಿ ಸಂಗ್ರಹಿಸುವವರು, ಡಾಟಾ ಎಂಟ್ರಿ ಆಪರೇಟರ್ ಮತ್ತು ವೈದ್ಯರು ಇರುತ್ತಾರೆ. ಜತೆಗೆ ಒಂದು ವಾಹನ ನಿಯೋಜಿಸಲಾಗಿರುತ್ತದೆ. ಮೂರು ದಿನಗಳ ಹಿಂದೆ 1,740 ಪರೀಕ್ಷೆಗಳನ್ನು ನಡೆಸಲಾಗಿತ್ತು. ಸಿಬ್ಬಂದಿ ಮರುನೇಮಕದ ಬೆನ್ನಲ್ಲೇ ಪರೀಕ್ಷೆ ಪ್ರಮಾಣ 6ರಿಂದ 8 ಸಾವಿರ ತಲುಪಿದೆ.