ಚಿಕ್ಕಬಳ್ಳಾಪುರ: ಜೀವದ ಜೊತೆಗೆ ಜೀವನ ನಡೆಸುವುದು ಕೂಡ ಮುಖ್ಯ ಆಗಿರುವುದರಿಂದ ನಾಲ್ಕನೇ ಹಂತದ ಲಾಕ್ ಡೌನ್ ಮೊದಲಿನಂತೆ ಇರುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಕೋವಿಡ್-19 ಪ್ರಯೋಗಾಲಯ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಲಾಕ್ ಡೌನ್ ಪರಿಣಾಮ ಇಡೀ ವಿಶ್ವ, ಭಾರತ, ರಾಜ್ಯ ಆರು ತಿಂಗಳು ಹಿಂದಕ್ಕೆ ಹೋಗಿದೆ. ಆದ್ದರಿಂದ ಜೀವದ ಜೊತೆಗೆ ಜೀವನ ನಡೆಸುವುದು ಮುಖ್ಯ ಆದ್ದರಿಂದ ನಾಲ್ಕನೇ ಹಂತದ ಲಾಕ್ ಡೌನ್ ಮೊದಲಿನಂತೆ ಇರಲ್ಲ. ಹಂತ ಹಂತವಾಗಿ ಲಾಕ್ ಡೌನ್ ಸಲಡಿಕೆ ಅನಿವಾರ್ಯ, ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ ಪ್ರಕಾರ ಕೋವಿಡ್-19 ವೈರಾಣು ಅಂತ್ಯವಾಗುವ ಲಕ್ಷಣಗಳು ಕಾಣುತ್ತಿಲ್ಲ.ಅದರ ವಿರುದ್ದ ಹೋರಾಡುವ ಮೂಲಕ ನಾವು ಬದುಕಬೇಕೆಂದರು.
ರಾಜ್ಯದಲ್ಲಿ ಕೋವಿಡ್-19 ಪರೀಕ್ಷೆಗೆ ಕೇವಲ ಎರಡು ಲ್ಯಾಬ್ ಮಾತ್ರ ಇತ್ತು. ಈ ಎರಡು ತಿಂಗಳಲ್ಲಿ 40 ಸ್ಥಾಪಿಸಲಾಗಿದೆ. ಈ ತಿಂಗಳ ಅಂತ್ಯಕ್ಕೆ ರಾಜ್ಯದಲ್ಲಿ 60 ಕ್ಕೆ ಏರಿಸಲಾಗುವುದೆಂದರು. ಚಿಕ್ಕಬಳ್ಳಾಪುರದಲ್ಲಿ ಸೋಂಕು ನಿಯಂತ್ರಣದಲ್ಲಿ ಇದೆ. ಆರು ಸಾವಿರ ಮಂದಿಗೆ ಪರೀಕ್ಷೆ ನಡೆದಿದ್ದು ಕೇವಲ 24 ಪ್ರಕರಣಗಳು ಮಾತ್ರ ಪತ್ತೆಯಾಗಿವೆ ಎಂದರು.
ದೇಶ, ವಿದೇಶಗಳಲ್ಲಿ ಇರುವರನ್ನು ಕರೆ ತರುತ್ತಿರುವುದಕ್ಕೆ ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗಿದೆ ಎನ್ನುವುದು ಸತ್ಯ. ಹಾಗೆಂದ ಮಾತ್ರಕ್ಕೆ ಕನ್ನಡಿಗರನ್ನು ರಕ್ಷಿಸುವುದು ಸರ್ಕಾರದ ಧರ್ಮ ಸೋಂಕು ಸಂಕಷ್ಟ ರಾಜ್ಯದಲ್ಲಿ ಇನ್ನೂ ಎರಡು ತಿಂಗಳು ಇರುತ್ತದೆ ಎಂದರು.