Advertisement
ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿಯಿಂದಾಗಿ ನರಕವಾಗಿದ್ದ ಸಕಲೇಶಪುರ-ಹಾಸನದ ನಡುವಿನ ಸಂಚಾರ ಸತತ ಆರು ವರ್ಷಗಳ ನಂತರ ಸುಗುಮವಾಗುವ ಹಂತ ತಲುಪಿದೆ. ಹಾಸನದ ಹೊರವರ್ತುಲ ರಸ್ತೆಯಿಂದ ತಾಲೂಕಿನ ಹೆಗದ್ದೆ ಗ್ರಾಮದ ಹೊರವಲಯದವರಗಿನ 45 ಕಿ.ಮಿ ರಸ್ತೆ ಚತುಷ್ಪಥಕ್ಕೆ 2016ರಲ್ಲಿ ಟೆಂಡರ್ ಕರೆಯಲಾಗಿದೆ. 2019ರ ಏಪ್ರಿಲ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಕಾಮಗಾರಿ ಕೈಗೆತ್ತಿಕೊಂಡ ಐಸೋಲೆಕ್ಸ್ ಕಂಪನಿ ಯಾವುದೇ ಮುಂದಾಲೋಚನೆ ಇಲ್ಲದೆ ತುಂಡು ಗುತ್ತಿಗೆ ನೀಡುವ ಮೂಲಕ 45 ಕಿ.ಮೀ. ರಸ್ತೆಗಾಗಿ ಇಕ್ಕೆಲಗಳಲ್ಲಿನ ಮಣ್ಣು ತೆಗೆದ ಪರಿಣಾಮ ಹಲವೆಡೆ ಭೂ ಕುಸಿತಕ್ಕೆ ಕಾರಣವಾಗಿತ್ತು.
Related Articles
Advertisement
ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣ : ಸದ್ಯ ಕಾಮಗಾರಿ ಕೈಗೆತ್ತಿಕೊಂಡಿರುವ ರಾಜ್‌ಕಮಲ್ ಕಂಪನಿ ನೀಡಿರುವ ಗುತ್ತಿಗೆ ಅವಧಿ 2023 ಮಾರ್ಚ್ ಅಂತ್ಯಕ್ಕೆ ಕೊನೆಗಾಣಲಿರುವುದರಿಂದ ಕನಿಷ್ಠ ಸಕಲೇಶಪುರದವರಗೆ ಚತುಷ್ಪಥ ಕಾಮಗಾರಿ ಮುಗಿಸುವ ಯೋಜನೆ ಹಾಕಿಕೊಂಡಿರುವ ಕಂಪನಿ ತರಾತುರಿಯಲ್ಲಿ ಕಾಮಗಾರಿ ನಡೆಸುತ್ತಿದೆ. ಆದರೂ ಸಹ ಕೌಡಹಳ್ಳಿ ಸಮೀಪ ಹೇಮಾವತಿ ನದಿಗೆ ಸೇತುವೆ ನಿರ್ಮಾಣ ಹಾಗೂ ಹಾಲೇಬೇಲೂರು ಪಟ್ಟಣ ಸಂಪರ್ಕಿಸುವ ರಸ್ತೆ ಅಂಡರ್ ಪಾಸ್ ಹಾಗೂ ಕೊಲ್ಲಹಳ್ಳಿ ಮೇಲ್ಸುತವೆ ಕಾಮಗಾರಿ ಸದ್ಯಕ್ಕೆ ಮುಗಿಯುವುದು ಅನುಮಾನವಾಗಿದೆ.
ಮಂಗಳೂರು ಬೆಂಗಳೂರು ನಡುವೆ ಸರಕು ಸಾಗಾಣೆಗಾಗಿ ಸಂಚರಿಸುವ 10 ಚಕ್ರದ ಲಾರಿಗಳು, ಟ್ಯಾಂಕರ್ ಗಳಿಂದ ಹಿಡಿದು ಇತರ ಟ್ರಕ್‌ಗಳು, ಕಾರುಗಳು, ದ್ವಿಚಕ್ರವಾಹನಗಳು ಸೇರಿದಂತೆ ಎಲ್ಲಾ ರೀತಿಯ ವಾಹನಗಳು ಪಟ್ಟಣದ ಮುಖಾಂತರವೇ ತಿರುಗಾಡಬೇಕಾಗಿರುವುದರಿಂದ ಜನಸಾಮಾನ್ಯರು ಟ್ರಾಫಿಕ್‌ಗೆ ಹಿಡಿಶಾಪ ಹಾಕುವುದು ಕಂಡು ಬರುತ್ತಿದೆ.
ಸಕಲೇಶಪುರದಿಂದ ಮಾರನಹಳ್ಳಿವರೆಗೆ ಚತುಷ್ಪಥ ರಸ್ತೆ ಕಾಮಗಾರಿ ನಡೆಸಲು ಗುತ್ತಿಗೆ ಪಡೆದಿರುವ ರಾಜ್‌ಕಮಲ್ ಕಂಪನಿ ಕಾಮಗಾರಿ ಕಳೆದ 6 ವರ್ಷಗಳಿಂದ ವಿಳಂಬಗತಿಯಲ್ಲಿ ಕಾಮಗಾರಿ ನಡೆಸುತ್ತಿದ್ದು ಈ ಕುರಿತು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿರವರ ಗಮನಕ್ಕೆ ತರಲಾಗಿದೆ. – ಎಚ್.ಕೆ ಕುಮಾರಸ್ವಾಮಿ, ಶಾಸಕ
ಪಟ್ಟಣದಲ್ಲಿ ಟ್ರಾಫಿಕ್ ಕಿರಿಕಿರಿಯಿಂದ ಆಟೋ ಚಾಲಕರು ತೊಂದರೆ ಅನು ಭವಿಸುವಂತಾಗಿದೆ. ಈ ಹಿನ್ನೆಲೆ ಬೈಪಾಸ್ ರಸ್ತೆ ಕಾಮಗಾರಿಯನ್ನು ವೇಗವಾಗಿ ಮುಗಿಸಲು ಕ್ರಮ ಕೈಗೊಳ್ಳಬೇಕು. – ರವಿ, ಆಟೋಚಾಲಕ
– ಸುಧೀರ್ ಎಸ್.ಎಲ್