Advertisement

ಮರುಭೂಮಿಯಲ್ಲಿ ಕಂಡ ಸ್ವರ್ಗದ ಚಿಲುಮೆ

12:20 AM Apr 12, 2021 | Team Udayavani |

ಬಾವಿಯೊಳಗಿನ ಕಪ್ಪೆ ಎಂಬ ಮಾತನ್ನು ನೀವು ಕೇಳಿರಬಹುದು. ಸ್ವಲ್ಪ ಮಾತ್ರವೇ ತಿಳಿದಿದ್ದು, ಅದಷ್ಟೇ ಸತ್ಯ ಎಂದು ಭಾವಿಸುವವರನ್ನು ಹೀಗೆ ಹೇಳುತ್ತಾರೆ. ಅಜ್ಞಾನ ಅಥವಾ ಮಿತ ಜ್ಞಾನ ತಪ್ಪಲ್ಲ. ಆದರೆ ತನಗೆ ತಿಳಿದಿರುವುದು ಮಾತ್ರವೇ ನಿಜ, ಅದಕ್ಕಿಂತ ಹೊರತಾದದ್ದು ಇಲ್ಲವೇ ಇಲ್ಲ ಎಂಬ ಅಜ್ಞಾನ ಹುಂಬತನವನ್ನು ಉಂಟುಮಾಡುತ್ತದೆ. ತನಗೆ ತಿಳಿದಿರುವುದು ಸ್ವಲ್ಪ ಮಾತ್ರ ಎನ್ನುವ ಅರಿವು, ವಿನೀತ ಭಾವ ಕೂಡ ಒಂದು ಬಗೆಯ ಶ್ರೇಷ್ಠತೆ.

Advertisement

ಇಲ್ಲೊಂದು ಸೂಫಿ ಕಥೆ ಇದೆ.
ಪುರಾತನ ಅರೇಬಿಯಾದ ಮರಳುಗಾಡಿನಲ್ಲಿ ಅಲೆಮಾರಿ ಗಂಡ- ಹೆಂಡತಿ ಇದ್ದರು. ಎಲ್ಲಿ ಸಣ್ಣ ನೀರಿನ ಊಟೆ ಕಾಣಸಿಗುವುದೋ ಅಲ್ಲಿ ಹರಿದ ಟೆಂಟು ಊರಿ ರಾತ್ರಿ ಬೆಳಗು ಮಾಡುವುದು ಅವರ ಬದುಕು. ಖರ್ಜೂರದ ಮರದ ನೀಳ ಎಲೆಗಳಿಂದ ದೊರಗು ಹಗ್ಗಗಳನ್ನು ಅವರು ಹೊಸೆಯುತ್ತಿದ್ದರು. ಒಂಟೆಗಳನ್ನೇರಿ ಹಾದುಹೋಗುವ ವ್ಯಾಪಾರಿಗಳು, ಯಾತ್ರಿಕರಿಗೆ ಮಾರಾಟ ಮಾಡಿ ಕಾಸು ಸಂಪಾದಿಸಿಕೊಳ್ಳುತ್ತಿದ್ದರು. ಇದಷ್ಟೇ ಅವರ ಬದುಕು, ಅವರ ಸಾಮ್ರಾಜ್ಯ.

ಒಂದು ಬಾರಿ ಹೀಗೆ ಸುತ್ತಾಟ ನಡೆಸುತ್ತಿದ್ದಾಗ ಗಂಡನಿಗೆ ಒಂದು ಹೊಸ ನೀರಿನ ಊಟೆ ಕಾಣಿಸಿತು. ಇದುವರೆಗೆ ಕಂಡು ಬಂದಿದ್ದ ನೀರಿನ ಚಿಲುಮೆಗಳಿಗಿಂತ ಹೆಚ್ಚು ನೀರು ಅಲ್ಲಿತ್ತು. ಆತ ಅದರಿಂದ ಒಂದು ಬೊಗಸೆ ನೀರನ್ನೆತ್ತಿ ಕುಡಿದ. ಅವನು ಆ ಮರುಭೂಮಿಯ ಎಷ್ಟೋ ಕಡೆಯಲ್ಲಿ ನೀರು ಕುಡಿದಿದ್ದ. ಎಲ್ಲ ಕಡೆಯೂ ಮಂದವಾದ, ಗಡುಸಾದ, ಉಪ್ಪು ರುಚಿ ಸ್ವಲ್ಪ ಹೆಚ್ಚೇ ಇರುವ ನೀರು. ಆದರೆ ಈ ಚಿಲುಮೆಯದು ಮಾತ್ರ ಹೆಚ್ಚು ತಿಳಿಯಾಗಿತ್ತು, ರುಚಿಯಾಗಿತ್ತು.

“ಇದು ಸ್ವರ್ಗದ ನೀರೇ ಇರಬೇಕು. ಎಷ್ಟು ಸಿಹಿಯಾಗಿ, ಶುಭ್ರವಾಗಿದೆ! ಇದನ್ನು ಬೇರೆ ಯಾರಾದರೂ ಮಹನೀ ಯರಿಗೆ ಕುಡಿಯಲು ಕೊಡಬೇಕಲ್ಲ’ ಎಂದು ಆತ ಆಲೋಚಿಸಿದ. ಕೊನೆಗೆ ಬಗ್ಧಾದಿನಲ್ಲಿ ಖಲೀಫ‌ರಿಗೇ ಇದನ್ನು ನೀಡುವುದು ಸೂಕ್ತ ಎಂದು ಅನ್ನಿಸಿತು.
ಮರುದಿನ ಆತ ಎರಡು ಹೂಜೆಗಳಲ್ಲಿ ಆ ಚಿಲುಮೆಯಿಂದ ನೀರನ್ನು ತುಂಬಿಸಿ ಕೊಂಡು ಬಗ್ಧಾದಿನತ್ತ ಹೊರಟ.
ಕೆಲವು ದಿನಗಳ ಬಳಿಕ ಬಗ್ಧಾದ್‌ಗೆ ಮುಟ್ಟಿದ. ನೇರವಾಗಿ ಅರಮನೆಯನ್ನೂ ತಲುಪಿ ದ್ವಾರಪಾಲಕರಿಗೆ ಉದ್ದೇಶವನ್ನು ತಿಳಿಸಿದ. ಅವರು ಖಲೀಫ‌ರಿಗೆ ಸುದ್ದಿ ಮುಟ್ಟಿಸಿದರು. ಆಸ್ಥಾನಕ್ಕೆ ಕರೆತರುವಂತೆ ಆಜ್ಞೆಯಾಯಿತು.

“ಓ ದೊರೆಯೇ, ನಾನು ಮರು ಭೂಮಿಯ ಅಲೆಮಾರಿ. ನನಗೆ ಬೇರೇನೂ ತಿಳಿದಿಲ್ಲ, ಅಲ್ಲಿನ ನೀರಿನ ಬಗ್ಗೆ ಮಾತ್ರ ಚೆನ್ನಾಗಿ ಗೊತ್ತಿದೆ. ಕೆಲವು ದಿನಗಳ ಹಿಂದೆ ಅಲ್ಲಿ ಒಂದು ಹೊಸ ನೀರಿನ ಚಿಲುಮೆಯನ್ನು ನಾನು ಪತ್ತೆ ಮಾಡಿದೆ. ಅದರ ನೀರು ಬಹಳ ರುಚಿಯಾಗಿದೆ, ಶುದ್ಧ ವಾಗಿದೆ. ಅದು ಸ್ವರ್ಗದ ಚಿಲುಮೆಯೇ ಹೌದು. ಹಾಗಾಗಿ ಅದರ ನೀರನ್ನು ನಿಮಗಾಗಿ ತಂದಿದ್ದೇನೆ’ ಎಂದು ಆತ ಖಲೀಫ‌ರಲ್ಲಿ ಬಿನ್ನವಿಸಿಕೊಂಡ.

Advertisement

ಖಲೀಫ‌ರು ಹೂಜೆಯಲ್ಲಿದ್ದ ನೀರಿನ ರುಚಿ ನೋಡಿದರು. ಬಳಿಕ ರಾಜಭಟರನ್ನು ಕರೆದು ಅಲೆಮಾರಿಯ ವಿಶ್ರಾಂತಿಗೆ ವ್ಯವಸ್ಥೆ ಮಾಡುವಂತೆ ತಿಳಿಸಿದರು. “ನಿನ್ನ ರಾಜನಿಷ್ಠೆಗೆ ಮೆಚ್ಚಿದೆ. ಸ್ವಲ್ಪ ಹೊತ್ತಿನ ನನ್ನ ನಿರ್ಧಾರವನ್ನು ತಿಳಿಸುತ್ತೇನೆ’ ಎಂದು ಕಳುಹಿಸಿಕೊಟ್ಟರು.

ಅಲೆಮಾರಿ ಆಸ್ಥಾನದಿಂದ ಆಚೆಗೆ ಹೋದ ಬಳಿಕ ಖಲೀಫ‌ರು ಸಚಿವರನ್ನು ಕರೆದರು. “ನಮಗೆ ಏನೂ ಅಲ್ಲದ್ದು ಅವನಿಗೆ ಸ್ವರ್ಗಸದೃಶವಾಗಿದೆ. ಇಂದು ರಾತ್ರಿ ಉತ್ತಮ ಒಂಟೆಯ ಮೇಲೆ ಕುಳ್ಳಿರಿಸಿ ಅವನನ್ನು ಕಳುಹಿಸಿಕೊಡಿ. ಅವನಿಗೆ ಪಕ್ಕದಲ್ಲೇ ಹರಿಯುತ್ತಿರುವ ಟೈಗ್ರಿಸ್‌ ನದಿಯ ದರ್ಶನವಾಗುವುದು ಬೇಡ. ಕುಡಿಯಲು ಇಲ್ಲಿನ ಒಳ್ಳೆಯ ನೀರನ್ನು ಕೂಡ ಕೊಡಬೇಡಿ. ಅವನು ತೋರಿದ ರಾಜಭಕ್ತಿಗೆ ಮೆಚ್ಚುಗೆಯಾಗಿ ಸಾವಿರ ಚಿನ್ನದ ನಾಣ್ಯಗಳನ್ನು ಕೊಡಿ. ಜತೆಗೆ ಅವನು ಕಂಡುಹಿಡಿದಿರುವ ಸ್ವರ್ಗದ ಚಿಲುಮೆಗೆ ಅವನನ್ನೇ ಕಾವಲುಗಾರನನ್ನಾಗಿ ನೇಮಿಸಲಾಗಿದೆ ಎಂದೂ ಹೇಳಿ. ಅವನು ನನ್ನ ಹೆಸರು ಹೇಳಿ ಅಲ್ಲಿಗೆ ಬರುವ ಯಾತ್ರಿಕರಿಗೆ ಆ ಚಿಲುಮೆಯ ನೀರನ್ನು ಕುಡಿಯಲು ಕೊಡಲಿ’ ಎಂದು ಆಜ್ಞಾಪಿಸಿದರು.
( ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next