Advertisement

ಸಚಿವ ಸಂಪುಟ ವಿಸ್ತರಣೆಗೆ ಸೂತ್ರ ಸಿದ್ಧ

10:01 AM Dec 19, 2018 | |

ಬೆಳಗಾವಿ: ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಂದಂತಿದ್ದು ಜಾತಿವಾರು, ಪ್ರಾದೇಶಿಕವಾರು ಅಸಮಾಧಾನ ಸ್ಫೋಟವಾಗದಂತೆ ಎಚ್ಚರವಹಿಸಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಂದಾಗಿವೆ. ಸಮ್ಮಿಶ್ರ ಸರ್ಕಾರವಾದ್ದರಿಂದ ಕಾಂಗ್ರೆಸ್‌ ಹಾಗೂ
ಜೆಡಿಎಸ್‌ ಎರಡೂ ಪಕ್ಷಗಳಿಂದ ಸಮುದಾಯವಾರು -ಪ್ರಾದೇಶಿಕವಾರು ಲೆಕ್ಕಾಚಾರದಲ್ಲಿ ಅವಕಾಶ ಕಲ್ಪಿಸಲು  ತೀರ್ಮಾನಿಸಲಾಗಿದೆ. ಸಂಪುಟ ವಿಸ್ತರಣೆ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಅಧ್ಯಕ್ಷರೂ ಆದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಸಮಾಲೋಚಿಸಿಯೇ ಸೂತ್ರ ರಚಿಸಿದ್ದಾರೆ.

Advertisement

ಮುಖ್ಯಮಂತ್ರಿ ಸೇರಿ 34 ಸದಸ್ಯ ಬಲದ ಸಂಪುಟದಲ್ಲಿ ಪ್ರಸ್ತುತ ಕಾಂಗ್ರೆಸ್‌ನ 16, ಜೆಡಿಎಸ್‌ನ 10 ಮಂದಿ ಸಂಪುಟದಲ್ಲಿದ್ದಾರೆ. ವಿಸ್ತರಣೆಯಾದರೆ ಕಾಂಗ್ರೆಸ್‌-6, ಜೆಡಿಎಸ್‌-2 ಸ್ಥಾನ ತುಂಬಬೇಕಿದೆ. ಪ್ರಸ್ತುತ ಒಕ್ಕಲಿಗ ಸಮುದಾಯಕ್ಕೆ ಸಂಪುಟದಲ್ಲಿ ಹೆಚ್ಚು (ಕಾಂಗ್ರೆಸ್‌-ಜೆಡಿಎಸ್‌ ಸೇರಿ 9 ಮಂದಿ) ಅವಕಾಶ ಸಿಕ್ಕಿದೆ. ಲಿಂಗಾಯತ-4, ಕುರುಬ ಸಮುದಾಯ-2, ಮುಸ್ಲಿಂ -2 ದಲಿತ (ಬಲಗೈ)- 2 , ಕ್ರಿಶ್ಚಿಯನ್‌-1, ಉಪ್ಪಾರ-1, ಈಡಿಗ-1 ಬ್ರಾಹ್ಮಣ-1, ಬೋವಿ-1, ಎಸ್‌ಟಿ-1 ರೆಡ್ಡಿ-1 ಅವಕಾಶ ಸಿಕ್ಕಿದೆ. ಜೆಡಿಎಸ್‌ನ ಎರಡು ಕೋಟಾದಡಿ ಒಂದು ಮುಸ್ಲಿಂ, ಮತ್ತೂಂದು ಪರಿಶಿಷ್ಟ ಜಾತಿಗೆ ಅವಕಾಶ ಕಲ್ಪಿಸಲು ಜೆಡಿಎಸ್‌ ತೀರ್ಮಾನಿಸಿದೆ. ಆ ಪೈಕಿ ಬಿ.ಎಂ.ಫರೂಕ್‌, ಎಚ್‌.ಕೆ.ಕುಮಾರಸ್ವಾಮಿ, ಅನ್ನದಾನಿ , ಶ್ರೀನಿವಾಸಮೂರ್ತಿ ರೇಸ್‌ನಲ್ಲಿದ್ದಾರೆ. ಜತೆಗೆ ಮಾಜಿ ಸಚಿವ ಎನ್‌.ಮಹೇಶ್‌ ಮತ್ತೆ ಬಿಎಸ್‌ಪಿ ಕೋಟಾದಡಿ ಸಚಿವರಾಗಲು ಬಯಸಿದ್ದು ಪಕ್ಷದ ಅಧ್ಯಕ್ಷೆ ಮಾಯಾವತಿ ಮೇಲೆ ಒತ್ತಡ ಹೇರುತ್ತಿದ್ದಾರೆಂದು ಹೇಳಲಾಗಿದೆ.

ಇನ್ನು ಕಾಂಗ್ರೆಸ್‌ನ ಆರು ಸ್ಥಾನಗಳಲ್ಲಿ ರೆಡ್ಡಿ, ಕುರುಬ, ಲಿಂಗಾಯತ, ಮುಸ್ಲಿಂ, ದಲಿತ ಎಡಗೈ, ಎಸ್‌ಟಿ ಸಮುದಾಯಕ್ಕೆ ತಲಾ ಒಂದೊಂದು ಸ್ಥಾನ ನೀಡುವ ಲೆಕ್ಕಾಚಾರ ಹಾಕಲಾಗಿದೆ. ರೆಡ್ಡಿ ಸಮುದಾಯದಲ್ಲಿ ಎಚ್‌.ಕೆ.ಪಾಟೀಲ್‌, ರಾಮಲಿಂಗಾರೆಡ್ಡಿ, ಲಿಂಗಾಯತ ಸಮುದಾಯಲ್ಲಿ ಎಂ.ಬಿ.ಪಾಟೀಲ್‌, ಬಿ.ಸಿ.ಪಾಟೀಲ್‌, ಸಂಗಮೇಶ್‌, ಅಮರೇಗೌಡ ಬಯ್ನಾಪುರ, ಮುಸ್ಲಿಂ ಸಮುದಾಯದಲ್ಲಿ ರಹೀಂ ಖಾನ್‌, ತನ್ವೀರ್‌ ಸೇs…, ದಲಿತ ಎಡಗೈ ಸಮುದಾಯದಲ್ಲಿ ರೂಪಾ ಶಶಿಧರ್‌, ಆರ್‌.ಬಿ. ತಿಮ್ಮಾಪುರ್‌, ಧರ್ಮಸೇನಾ, ಕುರುಬ ಸಮುದಾಯದಲ್ಲಿ ಸಿ.ಎಸ್‌.ಶಿವಳ್ಳಿ, ಎಂ.ಟಿ.ಬಿ.ನಾಗರಾಜ್‌, ಎಸ್‌ಟಿ ಸಮುದಾಯದಲ್ಲಿ ತುಕಾರಾಂ, ನಾಗೇಂದ್ರ ಪೈಕಿ ಒಬ್ಬರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಆಗ ಒಟ್ಟಾರೆ ಲೆಕ್ಕಾಚಾರದಲ್ಲಿ ಒಕ್ಕಲಿಗರಿಗೆ-10, ಲಿಂಗಾಯತ-5, ಕುರುಬ-3, ಮುಸ್ಲಿಂ-3, ದಲಿತ
ಬಲಗೈ-3, ಎಡಗೈ-1, ಕ್ರಿಶ್ಚಿಯನ್‌-1, ಉಪ್ಪಾರ-1, ಬ್ರಾಹ್ಮಣ-1, ಈಡಿಗ-1, ಎಸ್‌ಟಿ-2, ಬೋವಿ-1, ರೆಡ್ಡಿ-2 ಆಗಲಿದೆ.

ಜೆಡಿಎಸ್‌ನಲ್ಲಿ ಮುಸ್ಲಿಂ ಸಮುದಾಯಕ್ಕೆ ಅವಕಾಶ ಮಾಡಿಕೊಟ್ಟರೆ ಕಾಂಗ್ರೆಸ್‌ನಲ್ಲಿ ಕೊಡಬೇಕೇ? ಬೇಡವೇ? ಈಗಾಗಲೇ ಸಂಪುಟದಲ್ಲಿ ದಲಿತ ಬಲಗೈ ಪಂಗಡಕ್ಕೆ 2 ಸ್ಥಾನ ನೀಡಲಾಗಿದ್ದು ಮತ್ತೆ ಜೆಡಿಎಸ್‌ನಿಂದಲೂ ಬಲಗೈ ಪಂಗಡಕ್ಕೆ ಕೊಡಬೇಕೇ? ಎಂಬ ಚರ್ಚೆಯೂ ಇದೆ. ಕರಾವಳಿ ಭಾಗಕ್ಕೆ ಸಂಪುಟದಲ್ಲಿ ಯು.ಟಿ.ಖಾದರ್‌, ಜಯಮಾಲಾ ಹೊರತುಪಡಿಸಿ ಬೇರೆ ಅವಕಾಶ ಕಲ್ಪಿಸಲಾಗಿಲ್ಲ ಎಂಬ ಕಾರಣಕ್ಕೆ ಪ್ರತಾಪಚಂದ್ರ ಶೆಟ್ಟಿ ಅವರಿಗೆ ಸಭಾಪತಿ ಸ್ಥಾನ ಕಲ್ಪಿಸಲಾಯಿತು. ಜೆಡಿಎಸ್‌ನಿಂದ ಆ ಭಾಗಕ್ಕೆ ಪ್ರಾತಿನಿಧ್ಯ ಕಲ್ಪಿಸಲು
ಬಿ.ಎಂ. ಫರೂಕ್‌ಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಹೀಗಾಗಿ, ಉತ್ತರ ಕರ್ನಾಟಕ, ಕರಾವಳಿ, ಹಳೇ ಮೈಸೂರು ಎಲ್ಲ ಭಾಗಕ್ಕೂ ಒಟ್ಟಾರೆ ಸಂಪುಟದಲ್ಲಿ ಸಮಾನ ಅವಕಾಶ ಕಲ್ಪಿಸಿದಂತಾಗಿದೆ ಎಂಬುದು ಕಾಂಗ್ರೆಸ್‌ನ ವಾದ. 

ಉತ್ತರ ಕರ್ನಾಟಕಕ್ಕೆ 34 ರಲ್ಲಿ 10 
ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ನಿಂದ ಪ್ರಸ್ತುತ ರಮೇಶ್‌ ಜಾರಕಿಹೊಳಿ, ಪ್ರಿಯಾಂಕ್‌ ಖರ್ಗೆ, ಶಿವಾನಂದ ಪಾಟೀಲ್‌, ರಾಜಶೇಖರ ಪಾಟೀಲ್‌ ಹುಮ್ನಾಬಾದ್‌, ಜೆಡಿಎಸ್‌ನಿಂದ ಬಂಡೆಪ್ಪ ಖಾಶೆಂಪೂರ್‌, ಎಂ.ಸಿ.ಮನಗೂಳಿ ಹಾಗೂ ವೆಂಕಟರಾವ್‌ ನಾಡಗೌಡ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಸಂಪುಟ ವಿಸ್ತರಣೆಯಲ್ಲಿ ಮುಸ್ಲಿಂ, ಲಿಂಗಾಯತ , ಕುರುಬ, ಎಸ್‌ಟಿ ಸಮುದಾಯದಿಂದ
ಕನಿಷ್ಠ ಮೂವರು ಸಂಪುಟಕ್ಕೆ ಸೇರಲಿದ್ದಾರೆ. ಆಗ ಒಟ್ಟಾರೆ ಸಂಪುಟದಲ್ಲಿ 10 ಸ್ಥಾನ ಸಿಕ್ಕಂತಾಗುತ್ತದೆ. ಒಂದೊಮ್ಮೆ ಸಂಪುಟ ಪುನಾರಚನೆ ಆದರೂ 10 ಸಂಖ್ಯೆಗೆ ಕಡಿಮೆಯಾಗದಂತೆ ನೋಡಿಕೊಳ್ಳುವುದು. ಆಗ ಯಾವುದೇ ರೀತಿಯ ಅಸಮಾಧಾನ ಬಾರದು ಎಂಬ ಲೆಕ್ಕಾಚಾರ ಕಾಂಗ್ರೆಸ್‌-ಜೆಡಿಎಸ್‌ನದು.

Advertisement

ಸಿಎಂಗೆ ಕಾಂಗ್ರೆಸ್‌ ಒತ್ತಡ
ನಿಗಮ ಮಂಡಳಿಗಳಲ್ಲಿ 20 ಕಾಂಗ್ರೆಸ್‌, 10 ಜೆಡಿಎಸ್‌ ಸ್ಥಾನ ತುಂಬಲಿದ್ದು, 10 ಸಂಸದೀಯ ಕಾರ್ಯದರ್ಶಿಗಳಲ್ಲಿ 7 ಕಾಂಗ್ರೆಸ್‌, 3 ಜೆಡಿಎಸ್‌ ತುಂಬಲಿದ್ದು ಅಲ್ಲಿ ಸಂಪುಟ ವಂಚಿತರು ಹಾಗೂ ಸಂಪುಟದಲ್ಲಿ ಕಡಿಮೆ ಅವಕಾಶ ದೊರೆಯುವ ಸಮುದಾಯಗಳಿಗೆ ಹೆಚ್ಚಾಗಿ ಹಿಂದುಳಿದ, ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಲು ಲೆಕ್ಕಾಚಾರ ಹಾಕಲಾಗಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ತಮ್ಮ ಪಕ್ಷದವರನ್ನು ನೇಮಿಸಲು ಕಾಂಗ್ರೆಸ್‌ ಒತ್ತಡ ಹಾಕುತ್ತಿದೆ. ಆದರೆ, ಆ ಸ್ಥಾನಕ್ಕೆ ಕುಮಾರಸ್ವಾಮಿಯವರು ಮಧು ಬಂಗಾರಪ್ಪ ಅವರನ್ನು ನೇಮಿಸಿಕೊಳ್ಳುವ ಬಗ್ಗೆ ಒಲವು ಹೊಂದಿದ್ದಾರೆ ಎಂದು ಹೇಳಲಾಗಿದೆ.

ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next