ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕ ಹೊಣೆಗಾರಿಕೆಯನ್ನು ನಿರ್ದೇಶಕರು, ಮುಖಂಡರೆಲ್ಲಾ ಸೇರಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ವಹಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ನಡೆಯಬೇಕಿದ್ದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಂದೂಡಿಕೆಯಾಗಿದೆ.
ದೇವೇಗೌಡರ ನಿವಾಸದಲ್ಲಿ ಭಾನುವಾರ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಸಂಘದ 31 ನಿರ್ದೇಶಕರು ಪಾಲ್ಗೊಂಡಿದ್ದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಶುಕ್ರವಾರ ನೂತನ ಪದಾಧಿಕಾರಿಗಳನ್ನು ದೇವೇಗೌಡರು ಅಂತಿಮಗೊಳಿಸುವ ಸಾಧ್ಯತೆ ಇದೆ. ಬಳಿಕ ಸಂಘದಲ್ಲಿ ನೇಮಕ ಪ್ರಕ್ರಿಯೆ ನಡೆಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.
ಅನಗತ್ಯವಾಗಿ ನೇಮಕ ಮಾಡಿಕೊಂಡ ಸಿಬ್ಬಂದಿ ಕೈಬಿಡುವಂತೆ ಒತ್ತಾಯಿಸಿ ಒಕ್ಕಲಿಗರ ಸಂಘದ ಅಧೀನ ಸಂಸ್ಥೆಗಳ ನೌಕರರ ಸಂಘ ಜೂನ್ ಹಾಗೂ ಜುಲೈನಲ್ಲಿ ಎರಡು ಬಾರಿ ಮುಷ್ಕರ ನಡೆಸಿತ್ತು. ಈ ನಡುವೆ ದಿಢೀರ್ ಬೆಳವಣಿಗೆಯಲ್ಲಿ ಜು.30ರಂದು ಅವಿಶ್ವಾಸ ನಿರ್ಣಯ ಮಂಡಿಸಿ ಅಧ್ಯಕ್ಷರಾಗಿದ್ದ ಡಿ.ಎನ್.ಬೆಟ್ಟೇಗೌಡ ಹಾಗೂ ಇತರೆ ಕೆಲ ಪದಾಧಿಕಾರಿಗಳನ್ನು ಪದಚ್ಯುತಿಗೊಳಿಸಿ, ಆ.7ರಂದು ಹೊಸ ಪದಾಧಿಕಾರಿಗಳ ನೇಮಕಕ್ಕೆ ದಿನಾಂಕ ನಿಗದಿಯಾಗಿತ್ತು.
ಗೌಡರ ನಿವಾಸದಲ್ಲಿ ಮಹತ್ವದ ಸಭೆ: ಆ.7ರಂದು ಸಂಘದ ನೂತನ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಭಾನುವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸದಲ್ಲಿ ಮಹತ್ವದ ಸಭೆ ನಡೆಯಿತು. ಸಮುದಾಯದ ಮುಖಂಡರಾದ ಸಚಿವ ಡಿ.ಕೆ.ಶಿವಕುಮಾರ್, ಪದಚ್ಯುತ ಅಧ್ಯಕ್ಷ ಡಿ.ಎನ್.ಬೆಟ್ಟೇಗೌಡ ಸೇರಿ 31 ನಿರ್ದೇಶಕರು ಪಾಲ್ಗೊಂಡಿದ್ದರು. ಸಂಘದ ಇತ್ತೀಚಿನ ಬೆಳವಣಿಗೆಗಳು, ಅದರಿಂದ ಸಂಘದ ಘನತೆಗೆ ಚ್ಯುತಿಯಾಗಿರುವ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ಕೊನೆಗೆ ಪದಾಧಿಕಾರಿಗಳ ಆಯ್ಕೆ ಅಧಿಕಾರವನ್ನು ಎಚ್.ಡಿ.ದೇವೇಗೌಡರಿಗೆ ವಹಿಸಲು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಅಂತಿಮ ಸಾಧ್ಯತೆ: ಮಾಜಿ ಪ್ರಧಾನಿಗಳ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆಯಾಯಿತು. ಅದರಂತೆ ಮುಂದಿನ ಆರು ತಿಂಗಳ ಅವಧಿಗೆ, ಆ.10ರಂದು ದೇವೇಗೌಡರು ಪದಾಧಿಕಾರಿಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ನಂತರ ಸಂಘದಲ್ಲಿ ಸಭೆ ನಡೆಸಿ ಅವರ ಸೂಚನೆಯಂತೆ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ ಎಂದು ಸಂಘದ ಮಾಜಿ ಅಧ್ಯಕ್ಷ ಡಾ.ಅಪ್ಪಾಜಿ ಗೌಡ ಹೇಳಿದರು.
ದಿನಾಂಕ ನಿಗದಿಯಾಗಿಲ್ಲ: ಸಮುದಾಯದ ಮುಖಂಡರ ಸೂಚನೆಯಂತೆ ಮಂಗಳವಾರ ನಡೆಯಬೇಕಿದ್ದ ಹೊಸ ಪದಾಧಿಕಾರಿಗಳ ನೇಮಕ ಪ್ರಕ್ರಿಯೆಯನ್ನು ಮುಂದೂಡಿದ್ದು, ಇನ್ನೂ ದಿನಾಂಕ ನಿಗದಿ ಮಾಡಿಲ್ಲ ಎಂದು ಒಕ್ಕಲಿಗರ ಸಂಘದ ಹಂಗಾಮಿ ಕಾರ್ಯದರ್ಶಿ ನಾರಾಯಣಮೂರ್ತಿ ತಿಳಿಸಿದ್ದಾರೆ.