Advertisement
ಕೋಟೆ ಗ್ರಾಮದ ಸಾರ್ವಜನಿಕ ಹಿಂದೂ ರುದ್ರಭೂಮಿಯ ಸಮೀಪದಲ್ಲಿರುವ ಮಸೀದಿಯ ಆವರಣ ಗೋಡೆಯ ಒಳಗಿನಿಂದ ನುಗ್ಗಿ ಬರುವ ಮಳೆ ನೀರಿನಿಂದಾಗಿ ಪ್ರತೀ ವರ್ಷ ಇಲ್ಲಿನ ಕನಿಷ್ಟ ನಾಲ್ಕೈದು ಮನೆಯೊಳಗೆ ನೀರು ನುಗ್ಗಿ ನೆರೆ ಹಾವಳಿ ಉಂಟಾಗುತ್ತಿತ್ತು. ಮಾತ್ರವಲ್ಲದೇ ಈ ನೀರು ತೌಡಬೆಟ್ಟು ನಾಗಬನದ ಬಳಿಯ ಕೃಷಿ ಗದ್ದೆಗೆ ನುಗ್ಗಿ ಕೃಷಿ ಭೂಮಿಗೂ ಹಾನಿಯುಂಟಾಗುತ್ತಿತ್ತು.
ಗ್ರಾಮದ ಅಭಿವೃದ್ಧಿಯ ಬಗ್ಗೆ ಅತೀವ ಕಾಳಜಿ ಹೊಂದಿರುವ ರತ್ನಾಕರ ಕೋಟ್ಯಾನ್ ಅವರು ಸ್ಥಳೀಯ ಗ್ರಾ. ಪಂ., ತಾ. ಪಂ. ಮತ್ತು ಜಿ. ಪಂ. ಅನುದಾನದ ನಿರೀಕ್ಷೆಯಲ್ಲಿ ಗುತ್ತಿಗೆದಾರ ಪ್ರಭಾಕರ್ ಕೋಟ್ಯಾನ್ ಅವರ ಮೂಲಕವಾಗಿ ಸುಮಾರು 2 ಲಕ್ಷ ರೂ. ಹಣವನ್ನು ವ್ಯಯಿಸಿ ಇಂಗುಗುಂಡಿ ನಿರ್ಮಿಸುವ ಮೂಲಕ ನೆರೆ ನೀರಿನ ವಿಪತ್ತು ಪರಿಹಾರಕ್ಕೆ ಮಾರ್ಗೋಪಾಯ ಕಂಡು ಹುಡುಕಿರುವುದು ಮಾತ್ರವಲ್ಲದೇ ಜಲಸಂರಕ್ಷಿಸುವ ಮಹತ್ವದ ಯೋಜನೆಯನ್ನೂ ಕೈಗೆತ್ತಿಕೊಂಡಿದ್ದಾರೆ.
Related Articles
ಇಂಗು ಗುಂಡಿ ನಿರ್ಮಾಣದಿಂದ ಸುತ್ತಲಿನ 25 ಎಕರೆಗೂ ಮಿಕ್ಕಿದ ವ್ಯಾಪ್ತಿ ಯಲ್ಲಿ ಅಂತರ್ಜಲ ವೃದ್ಧಿಯಾಗಲಿದ್ದು, ಪ್ರತೀ ವರ್ಷ ಕಾಡುವ ಕುಡಿಯುವ ನೀರಿನ ಬವಣೆಗೆ ಮುಕ್ತಿ ದೊರಕಿಸಲು ಮತ್ತು ಮಳೆಗಾಲದಲ್ಲಿ ಕಾಡುವ ನೆರೆ ಹಾವಳಿಯನ್ನು ತಡೆಗಟ್ಟಲೂ ಇದು ಸಹಕಾರಿಯಾಗಲಿದೆ. ಅವಕಾಶ ಸಿಕ್ಕಿದಲ್ಲಿ ಪ್ರತೀ ವಾರ್ಡುಗಳಲ್ಲೂ ಇಂತಹ ಇಂಗುಗುಂಡಿಗಳನ್ನು ನಿರ್ಮಿಸ ಬಹುದಾಗಿದ್ದು, ಈ ಬಗ್ಗೆ ಜನರೇ ಆಲೋ ಚಿಸಬೇಕಿದೆ ಎಂದು ರತ್ನಾಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
ಸರ್ವರ ಸಹಕಾರ ಕಾರಣಕೋಟೆ ಗ್ರಾ. ಪಂ. ಅಧ್ಯಕ್ಷೆ ಕೃತಿಕಾ ರಾವ್, ಉಪಾಧ್ಯಕ್ಷ ಗಣೇಶ್ ಕುಮಾರ್, ಗ್ರಾ.ಪಂ.ಸದಸ್ಯರು,ತಾ.ಪಂ. ಮತ್ತು ಜಿ. ಪಂ. ಸದಸ್ಯರ ಸಹಕಾರದಿಂದಾಗಿ ಇಂಗು ಗುಂಡಿ ರಚನೆಯ ಕನಸು ಸಾಕಾರಗೊಂಡಿದ್ದು, ಇದರ ಫಲಿತಾಂಶವನ್ನು ನೋಡಿಕೊಂಡು ನೀರಿನ ವೃಥಾ ಹರಿವನ್ನು ಬಳಸಿಕೊಂಡು 2-3 ಕಡೆಗಳಲ್ಲಿ ಇಂಗುಗುಂಡಿ ನಿರ್ಮಿಸುವ ಇರಾದೆ ವ್ಯಕ್ತಪಡಿಸಿದ್ದಾರೆ. 2.50 ಲಕ್ಷ ಲೀ. ಮಳೆ ನೀರು ಸಂಗ್ರಹ
50 ಫೀಟ್ ಉದ್ದ, 15 ಫೀಟ್ ಅಗಲ ಮತ್ತು 15 ಫೀಟ್ ಆಳದ ಈ ಇಂಗು ಗುಂಡಿಯಲ್ಲಿ ಏಕಕಾಲಕ್ಕೆ 2.5 ಲಕ್ಷ ಲೀಟರ್‌ನಷ್ಟು ಮಳೆ ನೀರನ್ನು ಸಂಗ್ರಹಿಸಬಹುದಾಗಿದೆ. ಪಕ್ಕದ ಮಸೀದಿಯೊಳಗಿನಿಂದ ಬರುವ ನೀರನ್ನೂ ಈ ಇಂಗು ಗುಂಡಿಗೆ ಬರುವಂತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಈ ಬಾರಿಯ ಮಳೆಗಾಲದಲ್ಲಿ ತಲಾ 2.50 ಲೀ. ನಂತೆ ಇದುವರೆಗೆ 12 ಬಾರಿ ನೀರು ಭೂಮಿಯೊಳಕ್ಕೆ ಇಂಗಿದೆ. ಮೊದಲ ಯತ್ನದಲ್ಲೇ ಯಶಸ್ಸು
ಇಂಗು ಗುಂಡಿಯಲ್ಲಿ ನೀರು ಶೇಖರಣೆಗೊಂಡಿರುವುದರಿಂದ ಹಿಂದೂ ರುದ್ರಭೂಮಿ ಸನಿಹದಲ್ಲಿರುವ ಪಂಚಾಯತ್ ನೀರು ಸರಬರಾಜಿನ ಕೊಳವೆ ಬಾವಿಯ ನೀರಿನ ಮಟ್ಟದಲ್ಲಿ ಈಗಾಗಲೇ ಏರಿಕೆಯಾಗಿದೆ. ರುದ್ರಭೂಮಿಯ ಒಳಗಿದ್ದ ಪಾಳು ಬಿದ್ದ ಕೊಳವೆ ಬಾವಿಯಲ್ಲಿಯೂ ಇದೀಗ ನೀರು ಶೇಖರಣೆಯಾಗಿದ್ದು, ಇದರಿಂದಾಗಿ ತಾನು ಮಾಡಿದ ಕೆಲಸ ಖುಷಿ ಕೊಟ್ಟಿದೆ ಎಂದು ಇಂಗುಗುಂಡಿ ನಿರ್ಮಾಣದ ರೂವಾರಿ ರತ್ನಾಕರ ಕೋಟ್ಯಾನ್ ತಿಳಿಸಿದ್ದಾರೆ. – ರಾಕೇಶ್ ಕುಂಜೂರು