ದಾವಣಗೆರೆ: ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ರಚನೆಯಿಂದ ದೇಶದ ಸಹಕಾರ ರಂಗದ ಸಮಸ್ಯೆಗಳಿಗೆ ಕ್ಷಿಪ್ರವಾಗಿ ಸ್ಪಂದಿಸಲು ಹಾಗೂ ಸಹಕಾರ ಕ್ಷೇತ್ರವನ್ನು ಬಲಪಡಿಸಲು ಸಹಕಾರಿಯಾಗಲಿದೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಹಾಗೂ ರಾಜ್ಯ ಬಿಜೆಪಿ ಸಹಕಾರ ಪ್ರಕೋಷ್ಠದ ಸಹ ಸಂಚಾಲಕ ಜಿ.ನಂಜನಗೌಡ ಆಶಯ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ಸಹಕಾರ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತ್ಯೇಕ ಸಚಿವಾಲಯ ಇರಲಿಲ್ಲ. ಸಹಕಾರಿ ಕ್ಷೇತ್ರದ ತೊಂದರೆ ನಿವಾರಿಸಲು ಕೃಷಿ ಇಲಾಖೆಯ ಜತೆಗೆ ಕಾರ್ಯ ನಿರ್ವಹಿಸುವ ಸಹಕಾರಿ ಮಂತ್ರಿಗಳನ್ನೇ ವಿನಂತಿಸಬೇಕಿತ್ತು. ದೇಶದ ಕೃಷಿ ಕ್ಷೇತ್ರ ಅತ್ಯಂತ ದೊಡ್ಡದಾಗಿರುವುದರಿಂದ ಕೃಷಿ ಸಚಿವಾಲಯವು ಸಹಕಾರಿ ಕ್ಷೇತ್ರದ ಕಡೆ ಗಮನಹರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಈಗ ಪ್ರತ್ಯೇಕ ಕೃಷಿ ಸಚಿವಾಲಯ ಆಗಿದ್ದರಿಂದ ರಾಷ್ಟ್ರ, ರಾಜ್ಯದಲ್ಲಿನ ಸಹಕಾರ ಕ್ಷೇತ್ರದ ಸಮಸ್ಯೆಗಳು ಶೀಘ್ರ ಬಗೆಹರಿಯಲಿವೆ. ನೂತನ ಸಹಕಾರ ಸಚಿವಾಲಯಕ್ಕೆ ಅಮಿತ್ ಷಾ ಮೊದಲ ಸಚಿವರಾಗಿದ್ದು, ದಕ್ಷತೆಯಿಂದ ಕಾರ್ಯನಿರ್ವಹಿಸಲಿದ್ದಾರೆ. ಪ್ರತ್ಯೇಕ ಸಚಿವಾಲಯದಿಂದ ಸಹಕಾರ ರಂಗದಲ್ಲಿ ಮಹತ್ತರ ಬದಲಾವಣೆಗಳು ಆಗಲಿವೆ. ರೈತ ಸಹಕಾರಿ ಸಂಘಗಳ ಮೂಲಕ ಸೌಲಭ್ಯ ಕಲ್ಪಿಸಲು ಅವಕಾಶಗಳಿವೆ ಎಂದರು.
ಸಹಕಾರಿ ಸಚಿವಾಲಯವು ದೇಶದಲ್ಲಿ ಸಹಕಾರಿ ಆಂದೋಲನ ಬಲಪಡಿಸಲು ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿ ಚೌಕಟ್ಟುಗಳನ್ನು ಒದಗಿಸುತ್ತದೆ. ಈ ಹೊಸ ಖಾತೆಗೆ ರಾಜ್ಯದಲ್ಲಿ ಉಸ್ತುವಾರಿ ಸಚಿವರನ್ನು ನೇಮಿಸುವ ಸಾಧ್ಯತೆಯೂ ಇದೆ. ಇದು ಸಹಕಾರಿಗಳನ್ನು ನಿಜವಾದ, ಜನಾಧಾರಿತ ಚಳವಳಿಯಂತೆ ತಳಮಟ್ಟದವರೆಗೆ ತಲುಪಲು ಸಹಾಯ ಮಾಡುತ್ತದೆ. ದೇಶದಲ್ಲಿ ಸಹಕಾರಿ ರಂಗದ ಆರ್ಥಿಕವಾಗಿ ಲಾಭಗಳಿಸುವ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಮತ್ತು ಬಹುರಾಜ್ಯ ಸಹಕಾರಿ ಸಂಸ್ಥೆಗಳ ಅಭಿವೃದ್ಧಿಯನ್ನು ಶಕ್ತಗೊಳಿಸಲು ಸಹಕಾರಿಯಾಗಲಿದೆ. ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವರು ನೀಡಿದ ಘೋಷಣೆಯನ್ನು ಸಹ ಪೂರೈಸಲಿದೆ ಎಂದ ಅವರು, ಪ್ರತ್ಯೇಕ ಸಹಕಾರ ಸಚಿವಾಲಯ ನಿರ್ಣಯ ಕೈಗೊಂಡ ಪ್ರಧಾನ ಮಂತ್ರಿಯವರಿಗೆ ಕೃತಜ್ಞತೆ ಸಲ್ಲಿಸಿದರು.
ಸಹಕಾರಿಗಳಾದ ಎಚ್.ಎಂ.ನಾಗರಾಜ್, ಮಲ್ಲಪ್ಪ, ನಾಗರಾಜಮೂರ್ತಿ, ಓಂಕಾರಗೌಡ್ರ, ನಟರಾಜ್ ಸುದ್ದಿಗೋಷ್ಠಿಯಲ್ಲಿದ್ದರು.