ಬೆಳ್ಳಂಬೆಳಗ್ಗೆ ಎಲ್ಲಾ ಪ್ರಾಣಿಗಳು ಕೊಳದ ಬಳಿ ಸೇರಿಕೊಂಡವು. ಸಭೆಗೆ ಎಲ್ಲರಿಗಿಂತ ಮೊದಲು ತೋಳ ಮಾತಾಡಿತು. ನಿನ್ನೆ ಪಕ್ಕದ ಕಾಡಿಗೆ ಹೋಗಿದ್ದೆ. ಅಲ್ಲಿದ್ದ ಗೆಳೆಯರೆಲ್ಲ ಓಡಿ ಹೋಗಿದ್ದರು. ಅಲ್ಲಿ ಮರಗಳನ್ನು ಕಡಿಯಲಾಗುತ್ತಿತ್ತು. ಮನುಷ್ಯರ ನಾಯಕ ನಾಳೆ ಪಕ್ಕದ ಕಾಡನ್ನು ಕಡಿಯಬೇಕು ಅಂತ ಹೇಳುತ್ತಿದ್ದ’ ಅಂದಿತು. ಗಾಬರಿಗೊಂಡ ಕರಡಿ, “ಅಯ್ಯೋ, ಹಾಗಾದರೆ ನಾವೆಲ್ಲಿಗೆ ಹೋಗೋದು!?’ ಅಂದಿತು.
“ನಮಗೆಲ್ಲ ಸಾವೇ ಗತಿ’ ಅಂತ ಮೊಲ ದುಃಖದಿಂದ ಅಳತೊಡಗಿತು. ಆಗ ತೋಳ, ಮೊಲವನ್ನು ಸುಮ್ಮನಿರಿಸಿ ಉಪಾಯವನ್ನು ಹುಡುಕತೊಡಗಿತು. ಆಗ, ಹದ್ದು ಒಂದುಪಾಯ ಹೇಳಿತು- “ಮನುಷ್ಯ ದೇವರಿಗೆ ಮಾತ್ರ ಭಯ ಹೆದರುವುದು. ಈ ಕಾಡಿನಲ್ಲಿ ದೇವರಿದ್ದಾನೆ ಎಂದು ನಂಬಿಸಿದರೆ ಮನುಷ್ಯರು ಕಾಡಿನ ತಂಟೆಗೆ ಬರುವುದಿಲ್ಲ’ ಎಂದಿತು. ಎಲ್ಲಾ ಪ್ರಾಣಿಗಳಿಗೂ ಈ ಉಪಾಯ ಇಷ್ಟವಾಯಿತು.
ಅದರಂತೆ ಒಂದು ದಿನ ಮನುಷ್ಯರು ಮರಗಲನ್ನು ಕಡಿಯಲು ಬಂದಾಗ ಆ ದಾರಿಯ ಎರಡೂ ಬದಿಗಳಲ್ಲಿ ಹಾವುಗಳು ನಿಂತವು. ಅಲ್ಲೇ ಮೇಲೆ ಮರೆಯಲ್ಲಿ ಹದ್ದು ಬಚ್ಚಿಟ್ಟುಕೊಂಡಿತು. ನವಿಲು ಪೊದೆಯ ಹಿಂದೆ ಅವಿತುಕೊಂಡಿತು. ಜಿಂಕೆ ಅತ್ತಿತ್ತ ಕುಣಿದು ಬರಲು ಸಿದ್ಧವಾಯಿತು. ಮರದ ತುತ್ತ ತುದಿಯಲ್ಲಿದ್ದ ಗಿಳಿ ಎಲೆಗಳ ನಡುವೆ ಅವಿತು ಕುಳಿತಿತ್ತು.
ಕಾಡು ಕಡಿಯುವ ತಂಡದ ಯಜಮಾನ ಬರುತ್ತಲೇ ಹದ್ದು ಆಕಾಶದಿಂದ ಸೂಚನೆ ಕೊಟ್ಟಿತು. ಅದೇ ಸಮಯಕ್ಕೆ ದಾರಿಯ ಇಕ್ಕೆಲಗಳಲ್ಲಿದ್ದ ಹಾವು ಬುಸ್ಸನೆ ಹೆಡೆ ಬಿಚ್ಚಿ ಮೇಲೆದ್ದು ನಿಂತವು! ಮರ ಕಡಿಯುವವರು ಹೆದರಿ ಅಲ್ಲಿಯೇ ನಿಂತರು. ಹದ್ದು ವಿಚಿತ್ರ ಸ್ವರದಲ್ಲಿ ಕೂಗತೊಡಗಿತು. ಜಿಂಕೆ ಅತ್ತಿಂದಿತ್ತ ಕುಣಿದು ಮಾಯವಾಯಿತು. ನವಿಲು ಕೂಗುತ್ತಾ ವಿಚಿತ್ರ ಸದ್ದನ್ನು ಹೊರಡಿಸಿತು. ಮರ ಕಡಿಯುವವರಿಗೆ ಏನಾಗುತ್ತಿದೆ ಎಂದೇ ಗೊತ್ತಾಗಲಿಲ್ಲ. ಅವರೆಲ್ಲರೂ ಗಾಬರಿಗೊಂಡಿದ್ದರು. ಆಗ ಮೊದಲೇ ಉಪಾಯ ಮಾಡಿಕೊಂಡಿದ್ದಂತೆ ಮರದಲ್ಲಿ ಅವಿತಿದ್ದ ಗಿಳಿ “ನಾನು ಈ ಕಾಡಿನ ದೇವತೆ. ಇಲ್ಲಿನ ಒಂದು ಗಿಡ ಮುಟ್ಟಿದರೂ ನಿಮಗೆ ಉಳಿಗಾಲವಿಲ್ಲ’ ಎಂದು ಮನುಷ್ಯರ ದನಿಯನ್ನು ಅನುಕರಿಸಿತು. ಮರ ಮಾತಾಡುತ್ತಿದೆ ಭಯಗೊಂಡ ಯಜಮಾನ ಮತ್ತು ಅವನ ಹಿಂಬಾಲಕರು ಓಡತೊಡಗಿದರು. ಅಂದಿನಿಂದ ಕಾಡಿನಲ್ಲಿ ದೇವರಿದ್ದಾನೆ ಎಂದು ಊರವರು ನಂಬಿದರು. ಎಲ್ಲಾ ಪ್ರಾಣಿ ಪಕ್ಷಿಗಳು ಯಾವುದೇ ತೊಂದರೆಯಿಲ್ಲದೆ ಸಹಬಾಳ್ವೆ ನಡೆಸತೊಡಗಿದವು.
– ಸದಾಶಿವ್ ಸೊರಟೂರು