Advertisement

ಅರಣ್ಯ ಇಲಾಖೆ ವೈಖರಿಗೆ ಪಕ್ಷಾತೀತ ತರಾಟೆ

11:41 PM Oct 11, 2019 | Lakshmi GovindaRaju |

ವಿಧಾನಸಭೆ: ಪ್ರವಾಹದಲ್ಲಿ ಸಂಕಷ್ಟಕ್ಕೊಳಗಾದ ಬಡವರಿಗೆ ಮನೆ, ಸಾರ್ವಜನಿಕರಿಗೆ ಕುಡಿಯುವ ನೀರು, ರಸ್ತೆ ಸೇರಿ ಮೂಲಸೌಕರ್ಯ ಕಲ್ಪಿಸಲು ಅರಣ್ಯ ಇಲಾಖೆಯವರು ಅಡ್ಡಿ ಪಡಿಸುತ್ತಿರುವ ವಿಚಾರ ಸದನದಲ್ಲಿ ಶುಕ್ರವಾರ ಪಕ್ಷಾತೀತವಾಗಿ ಸದಸ್ಯರು ಆಕ್ರೋಶ ಹೊರ ಹಾಕಿದರು.

Advertisement

ಅರಣ್ಯ ಇಲಾಖೆಯವರು ದೇವಲೋಕದಿಂದ ಬಂದಂತೆ ವರ್ತಿಸುತ್ತಾರೆ. ಅವರಿಗೆ ನಮ್ಮ ನೆಲದ ಕಾನೂನು ಲೆಕ್ಕಕ್ಕೇ ಇಲ್ಲ. ಡೀಮ್ಡ್ ಫಾರೆಸ್ಟ್‌ ಎಂದು ಸಿ ಅಂಡ್‌ ಡಿ ಜಮೀನುಗಳನ್ನು ಅರಣ್ಯ ವ್ಯಾಪ್ತಿಗೆ ಸೇರಿಸಿಕೊಂಡಿದ್ದಾರೆ. ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಶೆಡ್‌ ಕಟ್ಟಿಕೊಳ್ಳಲು ತಮ್ಮ ಜಾಗದಲ್ಲಿ ಅನುಮತಿ ನೀಡದೆ ಅಮಾನವೀಯವಾಗಿ ವರ್ತಿಸುತ್ತಿದ್ದಾರೆಂದು ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಸದಸ್ಯರು ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, “ಅರಣ್ಯ ಇಲಾಖೆಯವರು ಬಡವರ ಮನೆ ನಿರ್ಮಾಣ ಸೇರಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಸದ್ಯದಲ್ಲೇ ಈ ಕುರಿತು ಸಭೆ ಕರೆದು ಸೂಚನೆ ನೀಡುತ್ತೇನೆ’ ಎಂದು ಭರವಸೆ ನೀಡಿದರು. ಪ್ರವಾಹ ಪರಿಹಾರ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಲವೆಡೆ ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ.

ಅವರು ನಮ್ಮ ಲೋಕದವರಂತೆ ಆಡುತ್ತಿಲ್ಲ ಎಂದು ದೂರಿದರು. ಇದಕ್ಕೆ ಕಾಂಗ್ರೆಸ್‌ನ ಪರಮೇಶ್ವರ್‌ ನಾಯ್ಕ ದನಿಗೂಡಿಸಿ, ನನ್ನ ಮತ ಕ್ಷೇತ್ರದಲ್ಲಿ ಇಡೀ ಹಳ್ಳಿಯೇ ಕೊಚ್ಚಿ ಹೋಗಿದೆ. ಸಂತ್ರಸ್ತರಿಗೆ ಗುಡಿಸಲು ಹಾಕಿಕೊಳ್ಳಲು ಅರಣ್ಯ ಇಲಾಖೆಯವರು ಅವಕಾಶ ಕೊಡಲಿಲ್ಲ ಎಂದು ಹೇಳಿದರು.

ಮತ್ತೂಬ್ಬ ಸದಸ್ಯ ಕಂಪ್ಲಿ ಗಣೇಶ್‌, ನಮ್ಮ ಕ್ಷೇತ್ರದಲ್ಲಿ 13 ಕೋಟಿ ರೂ. ಮೊತ್ತದಲ್ಲಿ ಐದು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆ ರೂಪಿಸಲಾಗಿದೆ. 300 ಮೀಟರ್‌ ಜಾಗ ಅರಣ್ಯ ಇಲಾಖೆ ಕೊಡುತ್ತಿಲ್ಲ, ಏಳು ವರ್ಷಗಳಿಂದ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

Advertisement

ಬಿಜೆಪಿಯ ಕೆ.ಜೆ.ಬೋಪಯ್ಯ, ಅರಗ ಜ್ಞಾನೇಂದ್ರ, ಹಾಲಪ್ಪ ಸಹ ಅರಣ್ಯ ಇಲಾಖೆ ಅಧಿಕಾರಿಗಳು ಮಲೆನಾಡು ಭಾಗದಲ್ಲಿ ತೊಂದರೆ ನೀಡುತ್ತಿರುವ ಬಗ್ಗೆ ಪ್ರಸ್ತಾಪಿಸಿದರು. ಬಿಜೆಪಿಯ ಪಿ.ರಾಜೀವ್‌, ಅಧಿಕಾರಿಗಳ ಸಭೆ ಕರೆದರೆ ಪ್ರಯೋಜನವಾಗದು. ಸಂಪುಟ ಉಪ ಸಮಿತಿ ರಚಿಸಬೇಕೆಂದು ಸಲಹೆ ನೀಡಿದರು.

ಲೀಸ್‌ಗೆ ಕೊಡಿ: ಕರಾವಳಿ, ಮಲೆನಾಡು ಭಾಗ ಸೇರಿ ರಾಜ್ಯದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿರುವವರಿಗೆ ಲೀಸ್‌ ಆಧಾರದಲ್ಲಿ ಅದೇ ಜಮೀನು ಹಂಚಿಕೆ ಮಾಡಿ. ಸರ್ಕಾರಕ್ಕೂ ಆದಾಯ ಬರುತ್ತದೆ, ಜಮೀನಿನ ಮಾಲೀಕತ್ವವೂ ಸರ್ಕಾರಕ್ಕೆ ಇರುತ್ತದೆ ಎಂದು ಸಿದ್ದರಾಮಯ್ಯ ಇದೇ ವೇಳೆ ಸಲಹೆ ನೀಡಿದರು.

ನೆರೆಯಿಂದ ಆರ್ಥಿಕ ಬೆಳವಣಿಗೆ ಕುಂಠಿತ
ವಿಧಾನಸಭೆ: ರಾಜ್ಯದಲ್ಲಿ ನೆರೆ ಪರಿಸ್ಥಿತಿಯಿಂದ ಪ್ರಸಕ್ತ ವರ್ಷದ ಆರ್ಥಿಕ ಬೆಳವಣಿಗೆ ಕುಂಠಿತವಾಗಲಿದೆ ಎಂದು ರಾಜ್ಯ ಹಣಕಾಸಿನ ಮಧ್ಯ ವಾರ್ಷಿಕ ಪರಿಶೀಲನೆಯಲ್ಲಿ ತಿಳಿಸಲಾಗಿದೆ. ವಿಧಾನಸಭೆಯಲ್ಲಿ ಶುಕ್ರವಾರ ಮಂಡನೆ ಯಾದ ಆರ್ಥಿಕ ಮಧ್ಯವಾರ್ಷಿಕ ಪರಿಶೀ ಲನಾ ವರದಿ ಯಲ್ಲಿ ಮೂಲಸೌಕರ್ಯ, ಕೃಷಿ ಹಾಗೂ ಅಭಿವೃದ್ಧಿ ಚಟು ವಟಿಕೆ ಮೇಲೆ ನೆರೆ ಹಾವಳಿಯ ನೇರ ಪರಿಣಾಮ ಬೀರ ಲಿದೆ ಎಂದು ಉಲ್ಲೇಖೀಸಲಾಗಿದೆ.

2018-19 ನೇ ಸಾಲಿನ ರಾಜ್ಯದ ಆರ್ಥಿಕ ಬೆಳವಣಿಗೆ ದರ ಶೇ.9.6 ರಷ್ಟಿತ್ತು. ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ರಾಜ್ಯ ಅಬಕಾರಿ ಆದಾಯದಲ್ಲಿ ಹೆಚ್ಚಳವಾಗಿದ್ದರೆ, ಮೋಟಾರು ವಾಹನ ತೆರಿಗೆಯ ಆದಾಯ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ತಿಳಿಸಲಾಗಿದೆ. 2019-20ನೇ ಸಾಲಿನಲ್ಲಿ ಶೇ.4.9 ರಷ್ಟು ಬೆಳವಣಿಗೆ ಹೊಂದಿರುತ್ತದೆ.

ಕೃಷಿ, ಕೈಗಾರಿಕೆ, ಸೇವಾ ವಲಯಗಳಲ್ಲಿನ ಬೆಳವಣಿಗೆ ಕಳೆದ ಸಾಲಿಗೆ ಹೋಲಿಸಿದರೆ ಇಳಿಕೆಯಾಗಿದೆ. ಉತ್ಪಾದನಾ ಕ್ಷೇತ್ರದಲ್ಲಿನ ಕುಸಿತದಿಂದ ಕೈಗಾರಿಕೆ ಚಟುವಟಿಕೆಗಳು ಕ್ಷೀಣಿಸಿದ್ದು ಮತ್ತು ನಿರ್ಮಾಣ ಕ್ಷೇತ್ರದಲ್ಲಿನ ಚಟುವಟಿಕೆಗಳು ಇಳಿಕೆಯಾಗಿರುವುದರಿಂದ ಸೇವಾ ವಲಯದಲ್ಲಿ ಕುಸಿತ ಉಂಟಾಗಿದೆ ಎಂದು ತಿಳಿಸಲಾಗಿದೆ.

ರಾಜಸ್ವ ಸಂಪನ್ಮೂಲ ಸಂಗ್ರಹದಲ್ಲಿ ಒಟ್ಟು ತೆರಿಗೆ ರಾಜಸ್ವವು ಪ್ರಸಕ್ತ ಸಾಲಿನ ಜುಲೈವರೆಗೆ ಶೇ.6.6 ಬೆಳವಣಿಗೆ ಹೊಂದಿದ್ದರೂ ಕಳೆದ ಸಾಲಿನ ಬೆಳವಣಿಗೆ ಶೇ.11.7ಕ್ಕೆ ಹೋಲಿಸಿದಾಗ ಬಹಳಷ್ಟು ಕಡಿಮೆಯಾಗಿದೆ. ದೇಶದಲ್ಲಿ ವಾಹನ ಮಾರಾಟ ಇಳಿಕೆಯಾಗಿರುವ ಕಾರಣ ರಾಜ್ಯದಲ್ಲೂ ವಾಹನ ತೆರಿಗೆ ಕಳೆದ ಸಾಲಿಗೆ ಹೋಲಿಸಿದರೆ ಶೇ.15.8 ಕಡಿಮೆಯಾಗಿದೆ. ಪ್ರಸಕ್ತ ವರ್ಷದ ಮೊದಲರ್ಧ ಭಾಗದಲ್ಲಿ ಮುಕ್ತ ಮಾರುಕಟ್ಟೆಯಿಂದ 5 ಸಾವಿರ ಕೋಟಿ ರೂ. ಸಾಲ ಪಡೆಯಲಾಗಿದೆ ಎಂದು ತಿಳಿಸಲಾಗಿದೆ.

ಶಾಲೆ ದುರಸ್ತಿಗೆ 500 ಕೋಟಿ: ಸುರೇಶ್‌ಕುಮಾರ್‌
ವಿಧಾನಸಭೆ: ಪ್ರವಾಹದಿಂದ ಶಿಥಿಲಗೊಂಡಿರುವ ಶಾಲಾ ಕೊಠಡಿಗಳ ದುರಸ್ತಿಗೆ 500 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ದುರಸ್ತಿ ಕಾರ್ಯ ನಡೆಯುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ. ಪ್ರವಾಹದ ಮೇಲಿನ ಚರ್ಚೆಗೆ ಪ್ರತಿಪಕ್ಷಗಳ ಶಾಸಕರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ರಾಜ್ಯದಲ್ಲಿ ಪ್ರವಾಹದಿಂದ 2,791 ಶಾಲಾ ಕೊಠಡಿಗಳು ಸಂಪೂರ್ಣ ಹಾನಿಗೊಳಗಾಗಿವೆ. 4,933 ಕೊಠಡಿಗಳು ತೀವ್ರ ಹಾನಿಯಾಗಿವೆ.

5,898 ಕೊಠಡಿಗಳು ಭಾಗಶಃ ಹಾನಿಯಾಗಿದ್ದು ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ ಎಂದರು. ಶಾಲಾ ಕೊಠಡಿಗಳ ದುರಸ್ತಿಗೆ 581 ಕೋಟಿ ರೂ.ಅಗತ್ಯವಿದ್ದು, ಹಣಕಾಸು ಇಲಾಖೆ 500 ಕೋಟಿ ರೂ. ಬಿಡುಗಡೆ ಮಾಡಿದೆ. ದುರಸ್ತಿ ಕಾರ್ಯ ನಡೆಸಲಾಗುತ್ತಿದೆ ಎಂದರಲ್ಲದೆ, ಪ್ರವಾಹಕ್ಕೆ ಸಿಲುಕಿ ಪಠ್ಯ ಪುಸ್ತಕ ಕಳೆದು ಕೊಂಡಿರುವ ಮಕ್ಕಳಿಗೆ ದಸರಾ ರಜೆ ಮುಗಿಯುವುದರೊ ಳಗಾಗಿ ಪುಸ್ತಕ ತಲುಪಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next